ದಾವಣಗೆರೆ: ಮಧ್ಯಕರ್ನಾಟಕದ ಶಕ್ತಿ ದೇವತೆ ದಾವಣಗೆರೆ ನಗರದ ದುರ್ಗಾಂಬಿಕಾ ದೇವಸ್ಥಾನದ ದೇವಿಗೆ ಸೇರಿದ ಆರು ಒಡವೆಗಳು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಗಾಂಧಿನಗರ ಪೊಲೀಸರು ಬಂಧಿಸಿದ್ದಾರೆ.
ಪೂಜಾರಿಕೆ ಮಾಡುತ್ತಿದ್ದ ಆಕಾಶ್, ಲಾಂಚ್ ಎಂಬಾತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಇಬ್ಬರು ಆರೋಪಿಗಳನ್ನು ಗುರುವಾರ ಗಾಂಧಿನಗರ ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮತ್ತೆ ವಶಕ್ಕೆ ಪಡೆಯಲಿರುವ ಪೊಲೀಸರು:
ದುರ್ಗಾಂಬಿಕಾ ದೇವಸ್ಥಾನದಲ್ಲಿ ಕಳ್ಳತನವಾಗಿರುವ ಆಭರಣಗಳ ಕುರಿತಂತೆ ಹೆಚ್ಚಿನ ತನಿಖೆ ನಡೆಸಲು ಪೊಲೀಸರು ನ್ಯಾಯಾಧೀಶರ ಮುಂದೆ ಮತ್ತೆ ಆರೋಪಿಗಳನ್ನು ವಶಕ್ಕೆ ಕೇಳಲಿದ್ದಾರೆ.
ಈ ಮೂಲಕ ಈಗ ಕಳ್ಳತನವಾಗಿರುವ ಆರು ಆಭರಣಗಳು ಅಷ್ಟೇನಾ? ಈ ಆಭರಣಗಳನ್ನು ಕದ್ದು ಕರಗಿಸಿದ್ದು ಹೇಗೆ? ಆಕಾಶ್, ಲಾಂಚ್ ಜೊತೆಗೆ ಇನ್ಯಾರಾದರೋ ಇದ್ದಾರೋ ಇಲ್ಲವೋ ಎಂಬುದೂ ಸೇರಿದಂತೆ ಎಲ್ಲಾ ಆಯಾಮಗಳಲ್ಲಿಯೂ ವಿಚಾರಣೆ ನಡೆಸಲಿದ್ದಾರೆ. ದೇವಸ್ಥಾನದಲ್ಲಿನ ಕಳ್ಳತನ ಪ್ರಕರಣವು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.
ಆಕಾಶ್ ಎಂಬಾತನು ದೇವಸ್ಥಾನದ ದೇವಿ ಆಭರಣಗಳ ಕದ್ದ ಆರೋಪ ಎದುರಿಸುತ್ತಿದ್ದು, ಈತನಿಗೆ ಲಾಂಚ್ ಎಂಬಾತ ಸಹಾಯ ಮಾಡಿದ್ದ ಎಂದು ತಿಳಿದು ಬಂದಿದೆ. ಬಂಧಿತರಾಗಿರುವ ಈ ಇಬ್ಬರೂ ಆರೋಪಿಗಳನ್ನು ಬಾಯಿಬಿಡಿಸಿದರೆ ಮತ್ತಷ್ಟು ಸತ್ಯ ಹೊರ ಬೀಳುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಧರ್ಮದರ್ಶಿಯಿಂದ ಅಧಿಕೃತ ದೂರು:
ಕುರುಬರ ಕೇರಿಯ ನಿವಾಸಿಯೂ ಹಾಗೂ ಕಳೆದ 16 ವರ್ಷಗಳಿಂದ ದೇವಸ್ಥಾನದ ಧರ್ಮದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಹೆಚ್. ಗೋಣೆಪ್ಪ ಅವರು ಜುಲೈ 29, 2026 ರಂದು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದರು.
ದೇವಸ್ಥಾನದ ಟ್ರಸ್ಟ್ ನಿರ್ಧಾರದಂತೆ ಜನವರಿ 24, 2026 ರಿಂದ ಪೂಜಾರಿಕೆಗಾಗಿ ಆಕಾಶ್ ಸೇರಿದಂತೆ 18 ಜನ ಪೂಜಾರಿಗಳನ್ನು ನೇಮಿಸಿ, ದೇವಿಯ 34 ಬಂಗಾರದ ಆಭರಣಗಳನ್ನು ಹಸ್ತಾಂತರಿಸಲಾಗಿತ್ತು. ಆದರೆ ಜುಲೈ 9, 2026 ರಂದು ಪರಿಶೀಲನೆ ನಡೆಸಿದಾಗ 6 ಪ್ರಮುಖ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಆರಂಭದಲ್ಲಿ ದೇವಸ್ಥಾನದ ಮಟ್ಟದಲ್ಲೇ ಮಾತುಕತೆ ನಡೆಸಿ ಒಡವೆ ಪಡೆಯಲು ಯತ್ನಿಸಲಾಗಿತ್ತಾದರೂ, ಒಡವೆ ಕರಗಿಸಿ ಮಾರಾಟ ಮಾಡಿರುವುದು ಗೊತ್ತಾದ ಮೇಲೆ ಪೊಲೀಸ್ ದೂರು ನೀಡಲಾಗಿದೆ.
ಕಳುವಾದ ಚಿನ್ನಾಭರಣಗಳ ವಿವರ (ಅಂದಾಜು ತೂಕ 200 ಗ್ರಾಂ, ಬೆಲೆ ₹28 ಲಕ್ಷ):
2 ಬಂಗಾರದ ಕಣ್ಣುಗಳು
59 ಕಾಸುಗಳಿರುವ ಬಂಗಾರದ ಕಾಶಿನ ಸರ (ಕೊಂಡಿ ಸಹಿತ)
ಬಂಗಾರದ ಗುಂಡಿನ ಸರ (40 ಗುಂಡು, 2 ತಾಳಿ, 3 ಹವಳ ಹಾಗೂ 4 ಕರಿಮಣಿ ಸಹಿತ)
ಬಂಗಾರದ ಪದಕದ ಸರ (1 ದೊಡ್ಡ ಪದಕ, 31 ಸಣ್ಣ ಪದಕ ಹಾಗೂ 32 ಸಣ್ಣ ಗುಂಡುಗಳುಳ್ಳ ಸರ)
ಬಂಗಾರದ ನೆಲ್ಲಿಕಾಯಿ ಗುಂಡಿನ ಸರ (50 ಗುಂಡುಗಳು ಹಾಗೂ ಕರಿ ದಾರ ಸಹಿತ)
25 ಬೇವಿನಕಾಯಿ ಗುಂಡಿನ ಬಂಗಾರದ ಸರ (ಕೊಂಡಿ ಸಹಿತ)
ಈ ಸಂಬಂಧ ಗಾಂಧಿನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
- 28 ಲಕ್ಷ ಚಿನ್ನ ಕಳ್ಳತನ
- Davanagere crime news
- Davanagere Durgambika Temple
- DAVANAGERE NEWS
- Durgambika Devi Gold Theft Case
- Durgambika Temple Gold Theft
- Gandhinagar Police Davanagere
- Karnataka Temple Theft
- Priest Akash Arrested
- Temple Jewellery Stolen Davanagere
- ಗಾಂಧಿನಗರ ಪೊಲೀಸ್ ಠಾಣೆ
- ದಾವಣಗೆರೆ ಕ್ರೈಮ್ ನ್ಯೂಸ್
- ದಾವಣಗೆರೆ ದುರ್ಗಾಂಬಿಕಾ ದೇವಿ ಜಾತ್ರೆ
- ದಾವಣಗೆರೆ ಸುದ್ದಿ
- ದುಗ್ಗಮ್ಮ ದೇವಿ ಒಡವೆ ಕಳವು
- ದುರ್ಗಾಂಬಿಕಾ ದೇವಿ ಚಿನ್ನಾಭರಣ ಕಳ್ಳತನ
- ಪೂಜಾರಿ ಆಕಾಶ್ ಬಂಧನ
- ಹೆಚ್ ಗೋಣೆಪ್ಪ ದೂರು





Leave a comment