Home ಕ್ರೈಂ ನ್ಯೂಸ್ ಪೆಟ್ರೋಲ್, ಡೀಸೆಲ್, ಎಲ್ ಪಿಜಿ ದರ ಏರಿಕೆಯೇ ಮೋದಿ ಹೇಳಿದ್ದ ಅಚ್ಚೇದಿನ್: ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಪ್ರಶ್ನೆ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪೆಟ್ರೋಲ್, ಡೀಸೆಲ್, ಎಲ್ ಪಿಜಿ ದರ ಏರಿಕೆಯೇ ಮೋದಿ ಹೇಳಿದ್ದ ಅಚ್ಚೇದಿನ್: ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಪ್ರಶ್ನೆ

Share
ಪೆಟ್ರೋಲ್
Share

ದಾವಣಗೆರೆ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ವಿರೋಧಿಸಿ ನಗರದ ಜಯದೇವ ವೃತ್ತದಲ್ಲಿ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷವು ಪ್ರತಿಭಟನೆ ನಡೆಸಿತು. ಸಿಲಿಂಡರ್ ಪೋಸ್ಟರ್ ಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್, ವಾಣಿಜ್ಯ ಸಿಲಿಂಡರ್ ಹಾಗೂ ಎಲ್ ಪಿ ಜಿ ಬೆಲೆ ಏರಿಕೆ ನಿಯಂತ್ರಿಸುವಲ್ಲಿ
ಸಂಪೂರ್ಣ ವಿಫಲವಾಗಿದೆ. ನೀಟ್ ಪರೀಕ್ಷೆಯ ಅಕ್ರಮ ಮತ್ತು ಪತ್ರಿಕೆ ಸೋರಿಕೆ ತಡೆಯಲು ಸಾಧ್ಯವಾಗಿಲ್ಲ. ಇದೇ ಮೋದಿ ಅವರ ಅಚ್ಚೇ ದಿನ್ ಎಂದು ಪ್ರಶ್ನಿಸಿದರು. .

ದೇಶಾದ್ಯಂತ 23 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯುತ್ತಾರೆ. ರಾಜ್ಯದಲ್ಲಿ ಒಂದೂವರೆ ಲಕ್ಷದಷ್ಟು ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಹಿಂದೆ ಉತ್ತರ ಭಾರತದಲ್ಲಿ ದೊಡ್ಡ ಮಾಫಿಯಾವೇ ಇದೆ. ಕಳೆದ ಏಳು ವರ್ಷಗಳಲ್ಲಿ 72 ಬಾರಿ ಪರೀಕ್ಷಾ ಪತ್ರಿಕೆ ಸೋರಿಕೆಯಾಗಿದೆ. ಇದೇ ಮೋದಿಯವರ ಆಡಳಿತದ ಟ್ರ್ಯಾಕ್ ರೆಕಾರ್ಡ್? ಇದೇ ಅಚ್ಚೇ ದಿನ್? ಎಂದು ದೇಶದ ಪ್ರತಿಯೊಬ್ಬರೂ ಕೇಳುತ್ತಿದ್ದಾರೆ. ಪತ್ರಿಕೆ ಸೋರಿಕೆ ಮಾಫಿಯಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ ಎಂದು ಹೇಳಿದರು.

ನೀಟ್ ಪರೀಕ್ಷೆ ತೆಗೆದುಕೊಂಡು ಹಗಲಿರುಳು ಕಷ್ಟಪಟ್ಟು ಮಧ್ಯಮ ವರ್ಗದ, ಬಡವರ ಮಕ್ಕಳು ಓದಿರುತ್ತಾರೆ. ಕೆಲವರು ಜಮೀನು ಮಾರಾಟ ಮಾಡಿ ಮಕ್ಕಳನ್ನು ಓದಿಸಿದರೆ, ಮತ್ತೆ ಕೆಲವರು ಬಂಗಾರ ಅಡವಿಟ್ಟು ಉನ್ನತ ವಿದ್ಯಾಭ್ಯಾಸಕ್ಕೆ ಪೋಷಕರು ಕಳುಹಿಸುತ್ತಾರೆ. ನಾಲ್ವರು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ರದ್ದು ಮಾಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಯಾರು ಹೊಣೆ. ಸಚಿವ ಧರ್ಮೇಂದ್ರ ಪ್ರಧಾನ್ ಅವರು ನಾನು ಈ ಇಲಾಖೆ ಅಧಿಕಾರ ವಹಿಸಿಕೊಂಡು ಕೆಲವೇ ತಿಂಗಳಾಗಿವೆ ಎಂಬ ಉಡಾಫೆ ಮಾತನಾಡಿದ್ದಾರೆ. ನೀಟ್ ಪತ್ರಿಕೆ ಸೋರಿಕೆ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಕಚ್ಚಾ ತೈಲ ತೆರಿಗೆ ಎಷ್ಟಿತ್ತು? ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಎಷ್ಟಾಗಿದೆ. ಜನರ ಮೇಲೆ ವಿಧಿಸುತ್ತಿರುವ ತೆರಿಗೆ ಎಷ್ಟು ವಿಧಿಸಲಾಗುತ್ತಿದೆ ಎಂಬ ಮಾಹಿತಿ ನೀಡಬೇಕು. ತೈಲ ಕಂಪೆನಿಗಳನ್ನು ರಿಲಯನ್ಸ್ ಮತ್ತು ಶೆಲ್ ಗೆ ಖಾಸಗಿಯಾಗಿ ಮಾರಾಟ ಮಾಡಲಾಗಿದೆ. ಪೆಟ್ರೋಲ್ ಒಂದು ಲೀಟರ್ ಗೆ 100 ರೂಪಾಯಿ ದಾಟಿದ್ದರೆ, ಡೀಸೆಲ್ ದರ 90 ರೂಪಾಯಿ ಆಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಒಂದಕ್ಕೆ ಮೂರು ಸಾವಿರ ರೂಪಾಯಿಷ್ಟು ಏರಿಕೆ ಆಗಿದೆ. ಕಳೆದ 11 ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಸಾಧನೆ ಇದೆಯಾ ಎಂದು ಕೇಳಿದರು.

ಸಿಎನ್ ಜಿ ದರ ಏರಿಕೆಯಾಗಿರುವುದರಿಂದ ಆಟೋ ಚಾಲಕರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಫೆಬ್ರವರಿ ತಿಂಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಯುದ್ಧ ಶುರುವಾಗಿದೆ. ಆದರೆ ಎರಡೂವರೆ ತಿಂಗಳ ಬಳಿಕ ಬೆಲೆ ಏರಿಕೆಯಾಗಿದೆ. ಪಂಚ ರಾಜ್ಯಗಳ ಚುನಾವಣೆ ಮುಗಿದ ಬಳಿಕ ತೈಲ ದರ, ಗ್ಯಾಸ್ ದರ ಹೆಚ್ಚಿಸಲಾಗಿದೆ. ಇದೇನಾ ಮೋದಿ ಅವರ ಆಡಳಿತದ ವೈಖರಿ ಎಂದು ಪ್ರಶ್ನಿಸಿದ ಅವರು. ಬಡವರು, ದೀನದಲಿತರು, ಶೋಷಿತರ ಪರ ಯೋಜನೆಗಳನ್ನು ನೀಡುವುದು ಕಾಂಗ್ರೆಸ್ ಸರ್ಕಾರ. ಹಣದುಬ್ಬರವೂ ಜಾಸ್ತಿಯಾಗಿದೆ. ಪ್ರತಿಯೊಂದು ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ದೇಶದ ಜನತೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

ಕೋಮುಗಲಭೆ ಮತ್ತು ಜನರ ನಡುವೆ ಜಗಳ ಹಚ್ಚಿ ಅಧಿಕಾರಕ್ಕೆ ಬಂದು ಸರ್ಕಾರ ನಡೆಸುವುದು ಬಿಜೆಪಿಯ ಜಾಯಮಾನ. ಹಾಗಾಗಿ ಇಂಥ ಪಕ್ಷಕ್ಕೆ ಉತ್ತರ ನೀಡಬೇಕಾಗಿರುವುದು ಜನರು. ಜನರ ಅಭ್ಯುದಯಕ್ಕೆ ಶ್ರಮಿಸುವ ಕಾಂಗ್ರೆಸ್ ಪಕ್ಷದ ಯೋಜನೆಗಳ
ಕುರಿತಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ ಮಾತನಾಡಿ, ತೈಲ ಬೆಲೆ ಏರಿಕೆ, ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ತಡೆಯುವಲ್ಲಿ ವಿಫಲವಾದ ನರೇಂದ್ರ ಮೋದಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆ. ಜಿ. ಶಿವಕುಮಾರ್, ಅಯೂಬ್ ಪೈಲ್ವಾನ್, ಡಿ. ಬಸವರಾಜ್, ದಿನೇಶ್ ಕೆ. ಶೆಟ್ಟಿ, ಮಹಿಳಾ ನಾಯಕಿಯರಾದ ಕವಿತಾ ಚಂದ್ರಶೇಖರ್, ಸುಧಾ ಇಟ್ಟುಗುಡಿ, ವರುಣ್ ಬೆಣ್ಣೆಹಳ್ಳಿ ಸೇರಿದಂತೆ ಕಾಂಗ್ರೆಸ್ ಮುಖಂಡರು
ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

Share

Leave a comment

Leave a Reply

Your email address will not be published. Required fields are marked *