SUDDIKSHANA KANNADA NEWS/ DAVANAGERE/ DATE:15-10-2024
ದಾವಣಗೆರೆ: ದಾವಣಗೆರೆಯ ಯುಬಿಡಿಟಿ ಕಾಲೇಜನ್ನು ರಾಜ್ಯದ ಬಡ ವಿದ್ಯಾರ್ಥಿಗಳಿಗಾಗಿ ಉಳಿಸಿ ಎನ್ನುವ ಘೋಷಣೆಯೊಂದಿಗೆ ಅಕ್ಟೋಬರ್ 16ರಂದು ಯುಬಿಡಿಟಿ ಉಳಿಸಿ ಹೋರಾಟ ಸಮಿತಿ ದಾವಣೆಗೆರೆ ಬಂದ್ಗೆ ಕರೆ ನೀಡಿದ್ದು, ಬಂದ್ಗೆ ಬೆಂಬಲ ನೀಡಲಾಗುವುದು ಎಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘ ಬೆಂಬಲ ಸೂಚಿಸಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಈ ಎರಡೂ ಸಂಘಟನೆಗಳ ರಾಜ್ಯಾಧ್ಯಕ್ಷ ಕೆ. ಜಿ. ಯಲ್ಲಪ್ಪ ಅವರು, ರಾಜ್ಯದ ಪ್ರಥಮ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹಾಗೂ ದಾವಣಗೆರೆಯ ಹೆಮ್ಮೆಯ ಸಂಸ್ಥೆಯಾಗಿರುವ ಯುಬಿಡಿಟಿಯಲ್ಲಿ ಸೀಟು ಮಾರಾಟ ಮಾಡಲಾಗುತ್ತಿದೆ. ಯುಬಿಡಿಟಿ ರಾಜ್ಯದ ಅತ್ಯಂತ ಹಳೆಯ ಇಂಜಿನಿಯರಿಂಗ್ ಕಾಲೇಜುಗಳಲ್ಲೊಂದು. 1951ರಲ್ಲಿ ದಾವಣಗೆರೆಯ ದಾನಿಗಳು ನೀಡಿದ್ದ ಜಾಗ, ಹಣದಲ್ಲಿ ಕಟ್ಟಿರುವ ಕಾಲೇಜು ಈಗ 73 ವರ್ಷಗಳನ್ನು ಪೂರೈಸಿ ಅಮೃತ ಮಹೋತ್ಸವದ ಹೊಸ್ತಿಲಲ್ಲಿದೆ ಎಂದಿದ್ದಾರೆ.
ಕಳೆದ 7 ದಶಕಗಳಿಂದ ರಾಜ್ಯದ ಬಡ ರೈತ ಕಾರ್ಮಿಕರ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಇಂಜಿನಿಯರಿಂಗ್ ಶಿಕ್ಷಣ ಒದಗಿಸುತ್ತಾ ಬಂದಿರುವ ಈ ಮಹಾನ್ ಸಂಸ್ಥೆಯಲ್ಲಿ ಇದೀಗ ಶೇ. 50ರಪ್ಪ ಪೇಮೆಂಟ್ ಕೋಟಾ ಜಾರಿಗೊಳಿಸಲಾಗಿದೆ. ಈ ಶೈಕ್ಷಣಿಕ ವರ್ಷದಿಂದ ಪ್ರಥಮ ವರ್ಷದ 504 ಸೀಟುಗಳಲ್ಲಿ 254 ಸೀಟುಗಳನ್ನು 97 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನುಳಿದ 250 ಮೆಂಟ್ ಸೀಟುಗಳಿಗೆ ನಿಗದಿಪಡಿಸಿರುವ 43 ಸಾವಿರ ಶುಲ್ಕವೇ ಬಡ ವಿದ್ಯಾರ್ಥಿಗಳಿಗೆ ದೊಡ್ಡ ಹೊರೆಯಾಗಿದೆ. ಹೀಗಿರುವಾಗ, ಶುಲ್ಕ ಕಡಿಮೆ ಮಾಡಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಪ್ರವೇಶಿಸಲು ಅವಕಾಶ ಕಲ್ಪಿಸುವುದನ್ನು ಬಿಟ್ಟು ಅರ್ಧದಷ್ಟು ಸೀಟುಗಳನ್ನು ಪೇಮೆಂಟ್ ಗೆ ಮಾರಾಟ ಮಾಡುತ್ತಿರುವುದು ದೊಡ್ಡದುರಂತ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಪ್ರಥಮ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಈ ರಾಜ್ಯದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಕಟ್ಟಿದ್ದ ಕೂಡಲೇ ಪೇಮೆಂಟ್ ಕೋಟಾ ರದ್ದುಗೊಳಿಸಿ ಕಾಲೇಜಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಬೇಕು. ಯುಬಿಡಿಟಿ ಕಾಲೇಜಿನ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರವೇ ವಹಿಸಬೇಕು. ಈ ದಾವಣಗೆರೆಯ ಯುಬಿಡಿಟಿ ಕಾಲೇಜನ್ನು ರಾಜ್ಯದ ಬಡ ವಿದ್ಯಾರ್ಥಿಗಳಿಗಾಗಿ ಉಳಿಸಲು ಅ. 16ರಂದು ಸ್ವಯಂಘೋಷಿತ ಬಂದ್ ಗೆ ಕರೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದ ಪ್ರತಿಷ್ಠಿತ ಕಾಲೇಜಾದ ಯುಬಿಡಿಟಿಯ ರಾಜ್ಯಕ್ಕಷ್ಟೇ ಅಲ್ಲದೆ ದೇಶ-ವಿದೇಶಗಳಿಗೆ ಅನೇಕ ಇಂಜಿನಿಯರ್ಗಳನ್ನು ಕೊಡುಗೆ ನೀಡಿದೆ. ಅನೇಕರು ಈಗ ಸರ್ಕಾರದ, ಹಲವು ಸಂಘ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಡ ರೈತ, ಕೂಲಿಕಾರರ ಪ್ರತಿಭಾವಂತ ಮಕ್ಕಳು ಎಷ್ಟೋ ಮಂದಿ ಇಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಇಂದು ಇದೇ ಕಾಲೇಜು ಸರ್ಕಾರದ ವ್ಯಾಪಾರೀಕರಣ-ಖಾಸಗೀಕರಣದ ಧೋರಣೆಯಿಂದಾಗಿ ಬಡವರ ಪಾಲಿಗೆ ಶಾಶ್ವತವಾಗಿ ತನ್ನ ಬಾಗಿಲನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ರಾಜ್ಯದಲ್ಲಿ ಈಗಾಗಲೇ ಎಲ್ಲಾ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ 47,000 ರೂಪಾಯಿ ನಿಗದಿಪಡಿಸಲಾಗಿದೆ. ಆದ್ರೆ, ಇಲ್ಲಿ ಬಡ ವಿದ್ಯಾರ್ಥಿಗಳ ಕೈಯಿಂದ ಕಿತ್ತು ಪೇಮೆಂಟ್ ಕೋಟಾದಡಿ 97,000 ರೂಪಾಯಿ
ಶುಲ್ಕಕ್ಕೆ ಹರಾಜಿಗಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರವು ದಿನೇ ದಿನೇ ಶಿಕ್ಷಣವನ್ನು ಖಾಸಗೀಕರಣದ ಕೂಪಕ್ಕೆ ತಳ್ಳುತ್ತಿದೆ. ಭಾರತದ ನವೋದಯ ಕಾಲದ ಈಶ್ವರಚಂದ್ರ ವಿದ್ಯಾಸಾಗರ್, ಸಾವಿತ್ರಿಬಾಯಿ-ಜ್ಯೋತಿರಾವ್ ಪುಲೆರವರ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳಾದ ಭಗತ್ಸಿಂಗ್, ನೇತಾಜಿ ಇವರೆಲ್ಲರ ಕನಸಾಗಿದ್ದ ಬಡವರ, ಕಾರ್ಮಿಕರ, ಹಿಂದುಳಿದವರಿಗೆ ಸಿಗಬೇಕಾಗಿದ್ದ ಪ್ರಜಾತಾಂತ್ರಿಕ ಶಿಕ್ಷಣದ ಎಲ್ಲಾ ಆಶಯಗಳನ್ನು ಬದಿಗೊತ್ತಿ ಇಂದು ಸರ್ಕಾರವು ಸರ್ಕಾರಿ ಸಂಸ್ಥೆಗಳನ್ನು ಖಾಸಗಿ ಒಡೆತನದ ಕೈಗಿಡುತ್ತಿದೆ. ಶಿಕ್ಷಣವು ಇನ್ನು ಪ್ರಜಾತಾಂತ್ರಿಕವಲ್ಲ, ಇಂಜಿನಿಯರಿಂಗ್, ಮೆಡಿಕಲ್ ನಂತಹ ಕೋರ್ಸುಗಳಿಗೆ ಬಡವರ ಮಕ್ಕಳಿಗೆ ಪ್ರವೇಶವಿಲ್ಲ. ಇನ್ನು ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಹಕ್ಕಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರ ಈ ಮೂಲಕ ನೀಡುತ್ತಿದೆ. ರಾಜ್ಯದ ಬಡ ರೈತರ ಮಕ್ಕಳು, ದಿನಗೂಲಿ ನೌಕರರ, ಹಣ್ಣು ತರಕಾರಿ ಮಾರುವವರ ಮಕ್ಕಳ ಪಾಲಿಗೆ ಉನ್ನತ ಶಿಕ್ಷಣದ ಬಾಗಿಲು ಮುಚ್ಚುತ್ತಲಿದೆ ಎಂದು ಆರೋಪಿಸಿದ್ದಾರೆ.
ದಾವಣಗೆರೆಯ ಹೆಮ್ಮೆ ಯುಬಿಡಿಟಿ ಇನ್ನು ಈ ಎಲ್ಲಾ ಬಡ ಮಕ್ಕಳ ಪಾಲಿಗೆ ಮರೀಚಿಕೆಯುಗಲಿದೆ. ಯಾವ ಅಧಿಕೃತ ಆದೇಶ, ಸುತ್ತೋಲೆಯೂ ಇಲ್ಲದೆ ಹಿಂಬಾಗಿಲಿನಿಂದ ಸರ್ಕಾರಿ ಸಂಸ್ಥೆಯಾದ ಯುಜಿಡಿಟಿ ಕಾಲೇಜಿನಲ್ಲಿ ಖಾಸಗಿ ಕೋಟಾ ತರಲಾಗುತ್ತಿದೆ. ಕಳೆದೊಂದು ತಿಂಗಳಿನಿಂದ ಕಾಲೇಜಿನ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟದಲ್ಲಿದ್ದರೂ ಸರ್ಕಾರ ಕಿವುಡಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಕಾಲೇಜನ್ನು ಉಳಿಸಲೇಬೇಕೆಂದು ಯುಬಿಡಿಟಿ ಕಾಲೇಜಿನ ವಿದ್ಯಾರ್ಥಿಗಳೀಗ ಟೊಂಕ ಕಟ್ಟಿ ನಿಂತಿದ್ದಾರೆ. ದಾವಣಗೆರೆಯ ಜನರಿಗೆ ತಮ್ಮ ಅಹವಾಲು ಸಲ್ಲಿಸುತ್ತಿದ್ದಾರೆ. ಯುಬಿಡಿಟಿ ಕಾಲೇಜನ್ನು ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಉಳಿಸಲು ಅಕ್ಟೋಬರ್ 16ರಂದು ದಾವಣಗೆರೆ ಬಂದ್ ಕರೆದಿದ್ದು, ಸಂಪೂರ್ಣ ಬೆಂಬಲ ನೀಡುವುದಾಗಿ ಕರ್ನಾಟಕ ರಾಜ್ಯ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘ, ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕೆ. ಜಿ. ಯಲ್ಲಪ್ಪ, ಜಿಲ್ಲಾಧ್ಯಕ್ಷ ಬಾಬುರಾವ್ ಅವರು ತಿಳಿಸಿದ್ದಾರೆ.