SUDDIKSHANA KANNADA NEWS/ DAVANAGERE/ DATE:17-02-2024
ದಾವಣಗೆರೆ (Davanagere): ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆ. ಜಿಲ್ಲೆಯಾದಾಗಿನಿಂದಲೂ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆ. ಎರಡು ಬಾರಿ ಮಲ್ಲಿಕಾರ್ಜುನಪ್ಪ, ನಾಲ್ಕು ಬಾರಿ ಹಾಲಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಗೆಲುವಿನ ನಗಾರಿ ಬಾರಿಸಿದ್ದಾರೆ. ಆದ್ರೆ, ಇದುವರೆಗೆ ಕಾಂಗ್ರೆಸ್ ಗೆ ಗೆಲ್ಲಲು ಸಾಧ್ಯವಾಗಿಲ್ಲ ಎನ್ನೋದು ಇತಿಹಾಸ. ಆದ್ರೆ, ಈ ಬಾರಿ ಬಿಜೆಪಿಯಲ್ಲಿ ಕಳೆದ 26 ವರ್ಷಗಳ ಕಾಲ ಇದ್ದ ಪರಿಸ್ಥಿತಿ ಇಲ್ಲ. ಬಹಿರಂಗವಾಗಿಯೇ ಈ ಬಾರಿ ಕೇಸರಿ ಕಲಿಗಳು ಭಿನ್ನರಾಗ ಹಾಡಿದ್ದಾರೆ.
2024ರ ಲೋಕಸಭೆ ಚುನಾವಣೆಗೆ ದಾವಣಗೆರೆಯಿಂದ ಸ್ಪರ್ಧಿಸಲು ಸಿದ್ದೇಶ್ವರ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡುತ್ತದೆಯೋ ಅಥವಾ ಹೊಸ ಮುಖಕ್ಕೆ ಅವಕಾಶ ನೀಡುತ್ತದೆಯೋ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿ ಮುಖಂಡರು, ಕಾರ್ಯಕರ್ತರು ಸೇರಿದಂತೆ ಎಲ್ಲರಲ್ಲಿಯೂ ಈ ಪ್ರಶ್ನೆ ಕಾಡಲಾರಂಭಿಸಿದೆ.
ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅವರಂತೂ ಬಹಿರಂಗವಾಗಿಯೇ ನಾನೂ ಆಕಾಂಕ್ಷಿ ಎಂದು ಹಲವಾರು ಬಾರಿ ಹೇಳಿದ್ದಾರೆ. ಮಾತ್ರವಲ್ಲ, ಸಂಸದ ಸಿದ್ದೇಶ್ವರ ವಿರುದ್ದ ಬಹಿರಂಗ ಸಮರ ಸಾರಿದ್ದರು. ಈಗ ಮೆತ್ತಗಾಗಿದ್ದರೂ ಆಕಾಂಕ್ಷೆ ಮಾತ್ರ ಬಿಟ್ಟಿಲ್ಲ. ಪಾರದರ್ಶಕವಾಗಿ ಸರ್ವೆ ನಡೆಸಿ ಟಿಕೆಟ್ ನೀಡಿ ಎಂದು ನೂರಾರು ಬಾರಿ ಹೇಳಿದ್ದರೂ ರೇಣುಕಾಚಾರ್ಯ ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದಾರೆ. ಇದಕ್ಕೆ ಕಾರಣ ಮಾಜಿ ಸಿಎಂ ಯಡಿಯೂರಪ್ಪ ಕೊಟ್ಟ ಎಚ್ಚರಿಕೆ.
READ ALSO THIS STORY: BIG BREAKING: ಜಗಳೂರು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಹೆಚ್. ಪಿ. ರಾಜೇಶ್ ಬಿಜೆಪಿಗೆ…?
ಹೈಕಮಾಂಡ್ ಟಿಕೆಟ್ ಘೋಷಣೆಯಾಗುವವರೆಗೂ ನಾನೇ ಬಿಜೆಪಿ ಅಭ್ಯರ್ಥಿ ಎಂದು ಸಿದ್ದೇಶ್ವರ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಯಾರಿಗೆ ಟಿಕೆಟ್ ನೀಡಿದರೂ ತನು, ಮನ, ಧನ ನೀಡಿ ಗೆಲುವಿಗೆ ಶ್ರಮಿಸುತ್ತೇನೆ ಎಂದಿದ್ದಾರೆ. ಈ ಹಿಂದೆ ನಾಲ್ಕು ಬಾರಿ ಟಿಕೆಟ್ ಅನಾಯಾಸವಾಗಿ ಸಿದ್ದೇಶ್ವರ ಅವರಿಗೆ ಸಿಕ್ಕಿತ್ತು. ಈ ಬಾರಿ ಕಬ್ಬಿಣದ ಕಡಲೆಯಂತಾಗಿಬಿಟ್ಟಿದೆ.
ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಶಿವಯೋಗಿಸ್ವಾಮಿ, ಮಾಡಾಳ್ ವಿರೂಪಾಕ್ಷಪ್ಪ, ಮಾಡಾಳ್ ಮಲ್ಲಿಕಾರ್ಜುನ್, ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್ ಸೇರಿದಂತೆ ಹಲವರು ಸ್ಛಳೀಯರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಬೆಂಗಳೂರಿಗೆ ಹೋಗಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ
ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿ ಒತ್ತಾಯ ಮಾಡಿದ್ದರು.
ಆಮೇಲೆ ಯಡಿಯೂರಪ್ಪ ದಾವಣಗೆರೆಗೆ ನೂತನ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಆಡಿದ ಒಂದು ಮಾತು ಈಗ ಬಹು ಚರ್ಚೆಯಾಗುತ್ತಿದೆ. ಸಂಸದ ಸಿದ್ದೇಶ್ವರ ಅವರನ್ನು ಬಿಜೆಪಿ ಗೌರವಯುತವಾಗಿ ನಡೆಸಿಕೊಳ್ಳುತ್ತದೆ ಎಂಬುದು. ಈ ಹಿಂದೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವಾಗ, ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಸೇರಿದಂತೆ ಪಕ್ಷದ ಹಿರಿಯರಿಗೆ ಟಿಕೆಟ್ ನಿರಾಕರಣೆ ಮಾಡಿದಾಗ ಗೌರವಯುತವಾಗಿ ನಡೆಸಿಕೊಳ್ಳಲಿದೆ ಪಕ್ಷ ಎಂಬ ಮಾತು ಕೇಳಿ ಬಂದಿತ್ತು. ಈಗ ಮತ್ತೆ ಈ ಮಾತು ಚರ್ಚೆ ಹುಟ್ಟುಹಾಕಿದೆ.
ಸಿದ್ದೇಶ್ವರ ಅವರ ಶಕ್ತಿ ಕೇವಲ ದಾವಣಗೆರೆಗೆ ಮಾತ್ರವಲ್ಲ,ರಾಜ್ಯಕ್ಕೆ ಗೊತ್ತಿದೆ ಎನ್ನುವ ಮೂಲಕ ಸಿದ್ದೇಶ್ವರ ಅವರನ್ನು ರಾಜ್ಯ ಬಿಜೆಪಿಗೆ ಸಂಘಟನೆಗೋಸ್ಕರ ಬಳಸಿಕೊಳ್ಳುವ ಇರಾದೆಯೂ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಿದ್ದೇಶ್ವರರೂ ಆಕಾಂಕ್ಷಿ:
ಜಿ. ಎಂ. ಸಿದ್ದೇಶ್ವರ ಅವರು ನಾಲ್ಕು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ತನಗೆ ಟಿಕೆಟ್ ಕೊಡದಿದ್ದರೆ ತನ್ನ ಪುತ್ರ ಅನಿತ್ ಕುಮಾರ್ ಅವರಿಗೆ ಟಿಕೆಟ್ ಕೇಳುತ್ತಿದ್ದಾರೆ. ಇಲ್ಲವೇ ನಮ್ಮ ಕುಟುಂಬದ ಸದಸ್ಯರಿಗೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಂಶಾಡಳಿತ ರಾಜಕಾರಣಕ್ಕೆ ಬ್ರೇಕ್ ಹಾಕುವ ವಿಚಾರವೇ ಈಗ ಮತ್ತೆ ಮನ್ನೆಲೆಗೆ ಬಂದಿದೆ.
ಮಲ್ಲಿಕಾರ್ಜುನಪ್ಪ, ಅವರ ಪುತ್ರ ಸಿದ್ದೇಶ್ವರ, ಸಿದ್ದೇಶ್ವರ ಅವರ ಪುತ್ರ ಅನಿತ್ ಅವರಿಗೆ ಟಿಕೆಟ್ ನೀಡಿದರೆ ಮೂರು ತಲೆಮಾರು ಒಂದೇ ಜಿಲ್ಲೆಯಲ್ಲಿ ಟಿಕೆಟ್ ನೀಡಿದ ಅಪಕೀರ್ತಿಗೆ ಬಿಜೆಪಿ ಪಾತ್ರವಾಗಲಿದೆ. ಇದು ಕಾಂಗ್ರೆಸ್ ವಿರುದ್ಧ ಮಾತನಾಡುವ ನೈತಿಕತೆ ಜಿಲ್ಲೆಯಲ್ಲಿ ಕಳೆದುಕೊಂಡಂತಾಗುತ್ತದೆ. ಈ ಕಾರಣಕ್ಕೆ ಹೊಸಬರಿಗೆ ಟಿಕೆಟ್ ನೀಡುವ ಯೋಚನೆಯೂ ಇದೆ ಎನ್ನಲಾಗಿದ್ದು, ಇದನ್ನು ಬಳಸಿಕೊಂಡು ರೇಣುಕಾಚಾರ್ಯ ಅವರು ಲೋಕಸಭೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಮಾತ್ರವಲ್ಲ, ಇವರ ಜೊತೆಗೆ ಇತರರೂ ಆಕಾಂಕ್ಷಿಗಳಿದ್ದಾರೆ.
ಎಂ. ಪಿ. ರೇಣುಕಾಚಾರ್ಯ:
ಹೊನ್ನಾಳಿ – ನ್ಯಾಮತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಶಾಂತನಗೌಡರ ವಿರುದ್ಧ 17 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಹೀನಾಯ ಸೋಲು ಕಂಡ ರೇಣುಕಾಚಾರ್ಯ ಲೋಕಸಭೆಗೆ ಸ್ಪರ್ಧಿಸಲು ಉತ್ಸುಹಕರಾಗಿದ್ದಾರೆ. ಯಾಕೆಂದರೆ ಕಳೆದ ನಾಲ್ಕೈದು ತಿಂಗಳಿನಿಂದ ದಾವಣಗೆರೆಗೆ ನೀಡುತ್ತಿರುವ ಭೇಟಿ ಇದಕ್ಕೆ ಪುಷ್ಟಿ ನೀಡುತ್ತಿದೆ. ಈಗಾಗಲೇ ಹೊನ್ನಾಳಿಯಲ್ಲಿ ಸೋತಿರುವ ಕಾರಣ ರೇಣುಕಾಚಾರ್ಯರಿಗೆ ಟಿಕೆಟ್ ನೀಡಲು ಹೈಕಮಾಂಡ್ ಮನಸು ಮಾಡುತ್ತಿಲ್ಲ. ಸೋತ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಜಾತಿ ಬಲವನ್ನೂ ನೋಡಿದಾಗ ಗೆಲುವು ಕಷ್ಟವಾಗಬಹುದು ಎಂಬುದು ರಾಜ್ಯ ನಾಯಕರು ಹಾಗೂ ವರಿಷ್ಠರ ಲೆಕ್ಕಾಚಾರ.
ಆದರೂ
ನಾನು ಆಕಾಂಕ್ಷಿ. ನಾಲ್ಕು ಗೋಡೆಗಳ ಮಧ್ಯೆ ಮಾತನಾಡುತ್ತೇನೆ, ಬಹಿರಂಗವಾಗಿ ಮಾತನಾಡಲ್ಲ ಎನ್ನುವ ಮೂಲಕ ತಣ್ಣಗಾಗಿದ್ದಾರೆ.
ಕೆ. ಬಿ. ಕೊಟ್ರೇಶ್:
ಪರಿಸರ ಇಲಾಖೆ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದ ಕೆ. ಬಿ. ಕೊಟ್ರೇಶ್ ಅವರು ಎ. ಕೆ. ಫೌಂಡೇಶನ್ ಅಧ್ಯಕ್ಷರಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ. ಬಳ್ಳಾರಿಯಲ್ಲಿ ಅಧಿಕಾರಿಯಾಗಿದ್ದಾಗ 32 ಸಾವಿರಕ್ಕೂ ಹೆಚ್ಚು ಗಿಡ, ಮರ ಬೆಳೆಸುವ ಮೂಲಕ ಪರಿಸರ ಕಾಳಜಿ ತೋರಿದ್ದರು. ಒಳ್ಳೆಯ ಅಧಿಕಾರಿ ಎಂಬ ಹೆಸರು ಮಾಡಿದ್ದರು. ಮಾತ್ರವಲ್ಲ, ಫೌಂಡೇಶನ್ ಮೂಲಕ ಈಗಾಗಲೇ ಸಮಾಜಸೇವೆ ಮಾಡುತ್ತಿರುವ ಕೆ. ಬಿ. ಕೊಟ್ರೇಶ್ ಅವರು ಆರ್ ಎಸ್ ಎಸ್ ನ ನಿಷ್ಠಾವಂತ ಕಾರ್ಯಕರ್ತರು. ಹಿಂದೂ ಪರ ಸಂಘಟನೆಗಳ ಕಾರ್ಯಕ್ರಮ, ವೇದಿಕೆ, ಬೈಠಕ್, ಪ್ರತಿಭಟನೆ, ರೈತರ ಪರ ಕಾಳಜಿ, ರಾಮಮಂದಿರ ಉದ್ಘಾಟನೆ ದಿನ ಹಮ್ಮಿಕೊಂಡಿದ್ದ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದಿದ್ದರು.
ಆರ್ ಎಸ್ ಎಸ್ ಮುಖಂಡರ ಜೊತೆ ಉತ್ತಮ ಒಡನಾಟ ಹೊಂದಿರುವ ಕೊಟ್ರೇಶ್ ಅವರು ಬಿಜೆಪಿ ಮುಖಂಡರ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಬಾರಿ ಟಿಕೆಟ್ ನೀಡಿದರೆ ನಾನು ಸ್ಪರ್ಧೆ ಮಾಡುತ್ತೇನೆ. ನಾನೂ ಆಕಾಂಕ್ಷಿ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಯಾರೇ ಅಭ್ಯರ್ಥಿಯಾದರೂ
ಗೆಲುವಿಗೆ ಶ್ರಮಿಸುತ್ತೇನೆ ಎಂದಿದ್ದಾರೆ.
ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಿದರೂ ಕೆಲಸ ನಿರ್ವಹಿಸುವೆ. ಒಟ್ಟಾರೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದಾರೆ. ಹಾಗಾಗಿ, ಕೆ. ಬಿ. ಕೊಟ್ರೇಶ್ ಅವರ ಹೆಸರೂ ಸಹ ಲೋಕಸಭೆ ಚುನಾವಣೆಗೆ ಬಿಜೆಪಿ ಪಕ್ಷದಿಂದ ಕೇಳಿ ಬರುತ್ತಿದೆ. ಸಮಾಜದ ಬೆಂಬಲವೂ ಕೊಟ್ರೇಶ್ ಅವರಿಗೆ ಇದೆ.
ಎಸ್. ಎ. ರವೀಂದ್ರನಾಥ್ ಅವರು ಮಾಧ್ಯಮದವರ ಜೊತೆ ಮಾತನಾಡುವಾಗಲೂ, ಯಡಿಯೂರಪ್ಪ, ಬಿ. ವೈ. ವಿಜಯೇಂದ್ರರ ಜೊತೆ ಮಾತನಾಡುವಾಗಲೂ ಕೆ. ಬಿ. ಕೊಟ್ರೇಶ್ ಅವರ ಹೆಸರು ಪ್ರಸ್ತಾಪ ಮಾಡಿದ್ದಾರೆ. ಜೊತೆಗೆ ರವಿಕುಮಾರ್, ಶಿವಯೋಗಿಸ್ವಾಮಿ, ರೇಣುಕಾಚಾರ್ಯ ಸೇರಿದಂತೆ ಹಲವು ಆಕಾಂಕ್ಷಿಗಳಿದ್ದು, ಸರ್ವೆ ನಡೆಸಿ ಟಿಕೆಟ್ ನೀಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಿ. ಜಿ. ರವಿಕುಮಾರ್:
ಟಿ. ಜಿ. ರವಿಕುಮಾರ್ ಅವರು ಆರೋಗ್ಯದಾಸೋಹ ಕಲ್ಪನೆಯಡಿ ಜಿಲ್ಲೆಯಾದ್ಯಂತ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದಾರೆ. ಅವರ ತಂದೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿ, ಜಗಳೂರು ಶಾಸಕರಾಗಿದ್ದ ಹಿರಿಯ ರಾಜಕಾರಣಿ. ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಪುತ್ರನಿಗೆ ಟಿಕೆಟ್ ಕೊಡಿಸಲು ಶ್ರಮಿಸುತ್ತಿದ್ದಾರೆ. ಅದೇ ರೀತಿಯಲ್ಲಿ ರವಿಕುಮಾರ್ ಅವರೂ ಸಹ ಟಿಕೆಟ್ ಗೆ ಪ್ರಯತ್ನ ಪಡುತ್ತಿದ್ದಾರೆ.
50ಕ್ಕೂ ಹೆಚ್ಚು ಜಿಲ್ಲೆಯಾದ್ಯಂತ ಆರೋಗ್ಯ ತಪಾಸಣೆ ಶಿಬಿರ ನಡೆಸಿ, ಪಕ್ಷದ ಕಾರ್ಯಕ್ರಮಗಳು, ಪ್ರತಿಭಟನೆ ಸೇರಿದಂತೆ ಎಲ್ಲೆಡೆ ಓಡಾಡುತ್ತಿದ್ದಾರೆ. ಇವರ ಹೆಸರು ಸಹ ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.
ರಾಮಮಂದಿರ ಉದ್ಘಾಟನೆ, ಪ್ರಖರ ಹಿಂದುತ್ವ, ಕೇಂದ್ರದ ನರೇಂದ್ರ ಮೋದಿ ಜನಪ್ರಿಯತೆ, ಬಿಜೆಪಿ ಮತಗಳು ಲಭಿಸಿದರೆ ಸುಲಭವಾಗಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿದ್ದು. ಆದರೂ ಬಿಜೆಪಿ ಹೈಕಮಾಂಡ್ ಈ ಬಾರಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಸಸ್ಪೆನ್ಸ್ ಆಗಿದೆ. ಈ ಹಿಂದೆ ಘೋಷಿಸಿದಂತೆ, ಪಡೆದಂತೆ ಸುಲಭವಾಗಿ ಬಿಜೆಪಿ ಟಿಕೆಟ್ ಸಿಗದು. ಕಷ್ಟಪಡಲೇಬೇಕು.
ನರೇಂದ್ರ ಮೋದಿ, ಅಮಿತ್ ಶಾ ಲೆಕ್ಕಾಚಾರದಂತೆ ಟಿಕೆಟ್ ಘೋಷಣೆಯಾಗಲಿದೆ. ಒಂದೇ ಕುಟುಂಬಕ್ಕೆ ಹೆಚ್ಚಿನ ಬಾರಿ ಟಿಕೆಟ್ ನೀಡಿರುವ ಕಾರಣ ಈ ವಿಚಾರ ಹೆಚ್ಚು ಚರ್ಚಿತವಾಗುತ್ತಿದೆ. ರವೀಂದ್ರನಾಥ್ ಅವರು ಅಖಾಡಕ್ಕಿಳಿದ ಬಳಿಕ ಸಮಸ್ಯೆ ಮತ್ತಷ್ಟು ಜಟಿಲಗೊಳ್ಳುವಂತೆ ಮಾಡಿದೆ.
ಇನ್ನು ಆರ್ ಎಸ್ ಎಸ್ ನ ಅಭಿಪ್ರಾಯವೂ ಮುಖ್ಯವಾಗುತ್ತದೆ. ಒಟ್ಟಾರೆ, ದಾವಣಗೆರೆ ಬಿಜೆಪಿ ಟಿಕೆಟ್ ವಿಚಾರ ಟಿಕ್.. ಟಿಕ್.. ಬಿಜೆಪಿ ಟಿಕೆಟ್ ಎಂಬಂತಾಗಿರುವುದಂತೂ ನಿಜ.