SUDDIKSHANA KANNADA NEWS/ DAVANAGERE/ DATE:13-10-2024
ದಾವಣಗೆರೆ: ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿ ವಿಜಯದಶಮಿ ಹಾಗೂ ದಸರಾ ಪ್ರಯುಕ್ತ ಪೌರ ಕಾರ್ಮಿಕರಿಗೆ ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ಸದಸ್ಯರೂ ಆದ ಸದಸ್ಯ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ನೇತೃತ್ವದಲ್ಲಿ ಉಡುಗೊರೆ ನೀಡಿ ಗೌರವಿಸಲಾಯಿತು.
ಬಳಿಕ ಮಾತನಾಡಿದ ಗಡಿಗುಡಾಳ್ ಮಂಜುನಾಥ್ ಅವರು, ಪೌರಕಾರ್ಮಿಕರು ಮಳೆ, ಗಾಳಿ, ಚಳಿ ಎನ್ನದೇ ನಗರದ ಸ್ವಚ್ಛತೆಗೆ ಶ್ರಮಿಸುತ್ತಾರೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡುವ ಜೊತೆಗೆ ನಗರ ಸ್ವಚ್ಛತೆಯಾಗಿರಲು ಅವರೇ ಕಾರಣ. ಅವರಿಗೆ ಗೌರವಿಸಬೇಕೆಂಬ ಸದುದ್ದೇಶದಿಂದ ಉಚಿತವಾಗಿ ಉಡುಗೊರೆ ನೀಡಿ ಅಭಿನಂದಿಸಲಾಗುತ್ತದೆ. ಕಳೆದ ವರ್ಷವೂ ಪೌರಕಾರ್ಮಿಕರಿಗೆ ಸನ್ಮಾನಿಸಲಾಗಿತ್ತು. ಈ ವರ್ಷವೂ ಈ ಪರಂಪರೆ ಮುಂದುವರಿದಿದೆ ಎಂದು ತಿಳಿಸಿದರು.
ಪೌರ ಕಾರ್ಮಿಕರ ಶ್ರಮದಿಂದಲೇ 38 ನೇ ವಾರ್ಡ್ ಎಂ ಸಿ ಸಿ ಬಿ ಬ್ಲಾಕ್ ಇಷ್ಟೊಂದು ಸ್ವಚ್ಛವಾಗಿರಲು ಕಾರಣ. ತಮಗೆ ವಹಿಸಿದ ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾರೆ. ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಸ್ವಚ್ಛತೆ ವಿಚಾರದಲ್ಲಿ ಜನರ ಸಮಸ್ಯೆಗೆ ಕೂಡಲೇ ಸ್ಪಂದಿಸುತ್ತಾರೆ. ಪೌರಕಾರ್ಮಿಕರ ಕಾರ್ಯಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಬೇಕು ಎಂದು ಹೇಳಿದರು.
ಈ ಬಾರಿ ದೇವರ ಕೃಪೆಯಿಂದ ಒಳ್ಳೆಯ ಮಳೆಯಾಗಿದೆ. ರೈತರು ಸಮೃದ್ಧವಾಗಿರಲಿ. ಎಲ್ಲರಿಗೂ ಒಳಿತು ಮಾಡಲಿ ಎಂದು ದುರ್ಗಾಂಬಿಕಾ ದೇವಿಯಲ್ಲಿ ಪ್ರಾರ್ಥಿಸಿದ್ದೇವೆ. ದಸರಾ ಮತ್ತು ವಿಜಯದಶಮಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದ್ದು, ಕಳೆದ ವರ್ಷ ಬರಗಾಲದ ಕಾರಣ ಕಳೆಗುಂದಿತ್ತು. ಚೆನ್ನಾಗಿ ಬೆಳೆ ಬಂದು ರೈತರ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿದರು.
ಉಡುಗೊರೆ ಸ್ವೀಕರಿಸಿದ ಪೌರಕಾರ್ಮಿಕರು, ಪ್ರತಿವರ್ಷವೂ ನಮ್ಮನ್ನು ಗುರುತಿಸಿ, ಉಡುಗೊರೆ ನೀಡುವ ಜೊತೆ ಅಭಿನಂದನೆ ಸಲ್ಲಿಸುತ್ತಿರುವ ಗಡಿಗುಡಾಳ್ ಮಂಜುನಾಥ್ ರ ಕಾರ್ಯವೈಖರಿಗೆ ಧನ್ಯವಾದ ಸಲ್ಲಿಸುತ್ತೇವೆ ಎಂದು ತಿಳಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ಕಾಂಗ್ರೆಸ್ ಮುಖಂಡರು, ವಾರ್ಡ್ ನ ಪ್ರಮುಖರು, ಹಿರಿಯರು ಹಾಜರಿದ್ದರು.