Home ಡಾರ್ಕ್ ವೆಬ್‌ನಲ್ಲಿ ‘ಜಿಹಾದಿ ಡ್ರಗ್’ ಕಪ್ಟಾಗನ್ ಕರಾಳ ದಂಧೆ: 180 ಕೋಟಿ ದಾಳಿ ಬೆನ್ನಲ್ಲೇ ಬಯಲಾಯ್ತು ಭಾರತೀಯ ಲಿಂಕ್!
Home

ಡಾರ್ಕ್ ವೆಬ್‌ನಲ್ಲಿ ‘ಜಿಹಾದಿ ಡ್ರಗ್’ ಕಪ್ಟಾಗನ್ ಕರಾಳ ದಂಧೆ: 180 ಕೋಟಿ ದಾಳಿ ಬೆನ್ನಲ್ಲೇ ಬಯಲಾಯ್ತು ಭಾರತೀಯ ಲಿಂಕ್!

Share
ಡಾರ್ಕ್ ವೆಬ್‌
Share

ನವದೆಹಲಿ: ಭಾರತದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಇತ್ತೀಚೆಗಷ್ಟೇ ಸುಮಾರು 180 ಕೋಟಿ ರೂಪಾಯಿ ಮೌಲ್ಯದ ಕಪ್ಟಾಗನ್ (Captagon) ಮಾದಕ ವಸ್ತುವನ್ನು ಜಪ್ತಿ ಮಾಡಿ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿತ್ತು. ಆದರೆ, ಈ ಭಾರಿ ಬೆನ್ನಟ್ಟುವಿಕೆಯ ಹೊರತಾಗಿಯೂ ಡಾರ್ಕ್ ವೆಬ್ (Dark Web) ಜಗತ್ತಿನಲ್ಲಿ ಇದರ ನೆರಳು ವ್ಯಾಪಕವಾಗಿ ಹರಡಿಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಭಾರತೀಯ ಮತ್ತು ಅಂತರರಾಷ್ಟ್ರೀಯ ಡ್ರಗ್ಸ್ ಪೂರೈಕೆದಾರರು ಇಂದಿಗೂ ಸಕ್ರಿಯವಾಗಿ ಈ ನಿಷೇಧಿತ ಉತ್ತೇಜಕವನ್ನು ಮಾರಾಟ ಮಾಡುತ್ತಿದ್ದಾರೆ.

‘ಇಂಡಿಯಾ ಟುಡೇ’ ನಡೆಸಿದ ತನಿಖೆಯ ಪ್ರಕಾರ, ಡಾರ್ಕ್ ನೆಟ್‌ನಲ್ಲಿ “ಇಂಡಿಯನ್ ಕೆಟಮೈನ್” (Indian Ketamine) ಎಂಬ ಹೆಸರಿನ ಪೋರ್ಟಲ್ ಸಕ್ರಿಯವಾಗಿದ್ದು, ಇದು ಭಾರತದ ಒಳಗಡೆ ಮಾತ್ರವಲ್ಲದೆ ಜಾಗತಿಕವಾಗಿಯೂ ಡ್ರಗ್ಸ್ ಪೂರೈಕೆ ಮಾಡುವುದಾಗಿ ಹೇಳಿಕೊಂಡಿದೆ. ಈ ಜಾಲವು ಕಪ್ಟಾಗನ್ ಅನ್ನು ಪೌಡರ್ ರೂಪದಲ್ಲಿ ಮತ್ತು ಇತರ ಸೈಕೋಟ್ರೋಪಿಕ್ ದ್ರವ್ಯಗಳನ್ನು ರಾಜಾರೋಷವಾಗಿ ಮಾರಾಟ ಮಾಡುತ್ತಿದೆ.

ಏನಿದು ಜಿಹಾದಿ ಡ್ರಗ್?

ಮೂಲತಃ ‘ಫೆನೆಥೈಲಿನ್’ (Fenethylline) ಎಂಬ ಬ್ರ್ಯಾಂಡ್ ಹೆಸರನ್ನು ಹೊಂದಿರುವ ಈ ಕಪ್ಟಾಗನ್, ಪಶ್ಚಿಮ ಏಷ್ಯಾದ ಸಂಘರ್ಷಗಳ ಸಮಯದಲ್ಲಿ ಐಸಿಸ್ (ISIS) ನಂತಹ ಉಗ್ರಗಾಮಿ ಸಂಘಟನೆಗಳ ಬಳಕೆಯಿಂದಾಗಿ ‘ಜಿಹಾದಿ ಡ್ರಗ್’ ಎಂಬ ಕುಖ್ಯಾತಿ ಪಡೆಯಿತು. ಇದನ್ನು ಸೇವಿಸುವುದರಿಂದ ಹಸಿವು ಇರುವುದಿಲ್ಲ, ಭಯ ಕಡಿಮೆಯಾಗುತ್ತದೆ ಮತ್ತು ದೀರ್ಘಕಾಲದವರೆಗೆ ನಿದ್ದೆಯಿಲ್ಲದೆ ಸಕ್ರಿಯವಾಗಿರಲು ಸಹಾಯ ಮಾಡುತ್ತದೆ.

ಪತ್ತೆ ಹಚ್ಚಲಾಗದ ‘ಆಂಟಿ ಎಕ್ಸ್-ರೇ’ ಪ್ಯಾಕೇಜಿಂಗ್ ತಂತ್ರ:

ಕಾನೂನು ಜಾರಿಯಿಂದ ತಪ್ಪಿಸಿಕೊಳ್ಳಲು ಈ ಡ್ರಗ್ ಮಾಫಿಯಾ ಕ್ರಿಪ್ಟೋಕರೆನ್ಸಿ ಮೂಲಕ ಹಣದ ವಹಿವಾಟು ನಡೆಸುತ್ತದೆ. ಅಷ್ಟೇ ಅಲ್ಲದೆ, ವಿಮಾನ ನಿಲ್ದಾಣ ಮತ್ತು ಕಾರ್ಗೋ ಸ್ಕ್ಯಾನರ್‌ಗಳ ಕಣ್ಣು ತಪ್ಪಿಸಲು ‘ಸ್ಕ್ಯಾನರ್-ರೆಸಿಸ್ಟೆಂಟ್’ (Anti X-Ray) ಪ್ಯಾಕೇಜಿಂಗ್ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ವಿಶೇಷ ಮಿಶ್ರಲೋಹಗಳು (Alloys) ಮತ್ತು ಸಿಂಥೆಟಿಕ್ ಪದರಗಳನ್ನು ಬಳಸಿ ಬ್ಯಾಗ್‌ಗಳನ್ನು ಸೀಲ್ ಮಾಡುವುದರಿಂದ, ಎಕ್ಸ್-ರೇ ಯಂತ್ರಗಳಲ್ಲಿ ಇವು ಕಪ್ಪು ಅಪಾರದರ್ಶಕವಾಗಿ ಕಾಣಿಸುತ್ತವೆ. ಇದರಿಂದಾಗಿ ಕಸ್ಟಮ್ಸ್ ಅಧಿಕಾರಿಗಳಿಗೆ ಇವುಗಳನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ.

ವಿಶ್ವಸಂಸ್ಥೆಯ (UNODC) ವರದಿ ಪ್ರಕಾರ, ಗಲ್ಫ್ ರಾಷ್ಟ್ರಗಳು ಇಂದಿಗೂ ಕಪ್ಟಾಗನ್ ಮಾದಕ ವಸ್ತುವಿನ ಪ್ರಮುಖ ಮಾರುಕಟ್ಟೆಯಾಗಿದ್ದು, ಅರಬ್ ವಲಯದಲ್ಲಿ ಬರೋಬ್ಬರಿ 177 ಮಿಲಿಯನ್ ಮಾತ್ರೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *