SUDDIKSHANA KANNADA NEWS/ DAVANAGERE/ DATE:09-02-2024
ದಾವಣಗೆರೆ: ಸಂಸದ ಡಿ. ಕೆ. ಸುರೇಶ್, ಶಾಸಕ ವಿನಯ್ ಕುಲಕರ್ಣಿ ಅವರಂಥವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೊಳಿಸಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕೂಡಲೇ ಬಂಧಿಸಬೇಕು ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಒತ್ತಾಯಿಸಿದ್ದಾರೆ.
ಮೊದಲಿನಿಂದಲೂ ವಿವಾದಾತ್ಮಕ ಹೇಳಿಕೆ ನೀಡುವ ಕೆ. ಎಸ್. ಈಶ್ವರಪ್ಪ ಅವರು ಸಮಾಜದಲ್ಲಿ ಅಶಾಂತಿ ಉಂಟು ಮಾಡುವಂಥ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಈ ಹಿಂದೆಯೂ ಕೈ ಕಡಿಯಿರಿ, ನಾಲಗೆ ಕತ್ತರಿಸಿ ಅಂತೆಲ್ಲಾ ವಿವಾದ ಹೇಳಿಕೆ ನೀಡಿದ್ದ ಈಶ್ವರಪ್ಪ ಅವರು ಕಾಂಗ್ರೆಸ್ ಸರ್ಕಾರದ ಸಾಧನೆ ಸಹಿಸಲಾಗದೇ ಹತಾಶರಾಗಿ ಇಂಥ ಹೇಳಿಕೆ ನೀಡುತ್ತಿದ್ದಾರೆ. ಪೊಲೀಸರು ಈ ಹೇಳಿಕೆ ಗಂಭೀರವಾಗಿ ಪರಿಗಣಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರವು ಜಿಎಸ್ ಟಿ, ತೆರಿಗೆ ಕಡಿತ ಸೇರಿದಂತೆ ಅನ್ಯಾಯ ಮಾಡಿರುವುದರ ವಿರುದ್ಧ ಡಿ. ಕೆ. ಸುರೇಶ್ ಹಾಗೂ ವಿನಯ್ ಕುಲಕರ್ಣಿ ಧ್ವನಿ ಎತ್ತಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಹಣ ಬಿಡುಗಡೆ ಮಾಡಲು ಪ್ರಯತ್ನಿಸುವ ಬದಲು ಪ್ರಚೋದನಾಕಾರಿ, ಅಶಾಂತಿ ಮಾತನಾಡುತ್ತಿರುವ ಈಶ್ವರಪ್ಪ ಅವರಂಥ ಹಿರಿಯ ರಾಜಕಾರಣಿಗೆ ಶೋಭೆ ತರುವಂಥದ್ದಲ್ಲ ಎಂದು ಕಿಡಿಕಾರಿದ್ದಾರೆ.
ದೇಶ ಇಬ್ಬಾಗದ ಮಾತನ್ನು ಡಿ. ಕೆ. ಸುರೇಶ್ ಆಡಿಲ್ಲ. ಕರ್ನಾಟಕಕ್ಕೆ ಅನ್ಯಾಯ ಎಸಗುವುದು ಮುಂದುವರಿದರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗಿ ಬರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ತಿರುಚಿ ದೇಶ ಇಬ್ಬಾಗ ಮಾಡುತ್ತಿದ್ದಾರೆ ಎಂದೆಲ್ಲಾ ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿಗರು ಹಾಗೂ ಕೆ. ಎಸ್. ಈಶ್ವರಪ್ಪ ಅವರು ಮೊದಲು ಡಿ. ಕೆ. ಸುರೇಶ್ ಅವರ ಹೇಳಿಕೆ ಗಮನಿಸಲಿ, ಅದನ್ನು ಪರಾಮರ್ಶಿಸುವುದು ಬಿಟ್ಟು ಇಂಥ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಅಶಾಂತಿ ಹುಟ್ಟುಹಾಕುವ ಷಡ್ಯಂತ್ರ ರೂಪಿಸಿದ್ದಾರೆ ಎಂದು ಸೈಯದ್ ಖಾಲಿದ್ ಅಹ್ಮದ್ ಆರೋಪಿಸಿದ್ದಾರೆ.
ಈಗಾಗಲೇ ಹೆಚ್. ಕೆ. ಪಾಟೀಲ್ ಅವರು 24 ಗಂಟೆಯೊಳಗೆ ಕೆ. ಎಸ್. ಈಶ್ವರಪ್ಪ ಹೇಳಿಕೆ ವಾಪಸ್ ಪಡೆಯಬೇಕು ಎಂದಿದ್ದಾರೆ. ಇಲ್ಲದಿದ್ದರೆ ಮುಂದಿನ ಕ್ರಮ ಜರುಗಿಸುವುದು ಅನಿವಾರ್ಯ ಎಂದಿದ್ದಾರೆ. ಕೂಡಲೇ ಈಶ್ವರಪ್ಪರು ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.