ಉತ್ತರಾಖಂಡ್: ಪ್ರೇಮಿಯ ಕುಟುಂಬದ ವಿರೋಧ ಹಾಗೂ ಪ್ರೇಮಿ ಇದ್ದಕ್ಕಿದ್ದಂತೆ ಸಂಪರ್ಕ ಕಡಿತಗೊಳಿಸಿದ ಮನಸ್ಸಾಪದಿಂದ ನೊಂದ ಯುವತಿಯೊಬ್ಬಳು ಚಲಿಸುತ್ತಿದ್ದ ಇ-ರಿಕ್ಷಾದಲ್ಲೇ ತನ್ನ ದೇಹಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರದ ಸಿತಾರ್‌ಗಂಜ್ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಘಟನೆಯ ವಿವರ: ಆಗಸ್ಟ್ 15 ರಂದು ಸಿತಾರ್‌ಗಂಜ್ ಬೈಪಾಸ್ ರಸ್ತೆಯಲ್ಲಿ ಈ ದುರಂತ ಸಂಭವಿಸಿತ್ತು. ಯುವತಿ ಇ-ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ, ತನ್ನೊಂದಿಗೆ ತಂದಿದ್ದ ಪೆಟ್ರೋಲ್ ಅನ್ನು ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಬೆಂಕಿಯ ಕೆನ್ನಾಲಿಗೆ ತೀವ್ರವಾಗಿದ್ದರಿಂದ ಇ-ರಿಕ್ಷಾ ಚಾಲಕ ಪವಿತ್ರ ಸರ್ಕಾರ್‌ಗೂ ತೀವ್ರ ಗಾಯಗಳಾಗಿದ್ದವು.
ಸುಮಾರು 80% ನಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಯುವತಿಯನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಂಡೀಗಢ/ಋಷಿಕೇಶದ AIIMS ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 19 ರಂದು ಯುವತಿ ಕೊನೆಯುಸಿರೆಳೆದಿದ್ದಾಳೆ.
ತನಿಖೆ ಮತ್ತು ಬಂಧನ:
ಘಟನೆ ಸಂಬಂಧ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರಿಗೆ ಪ್ರೇಮ ಪ್ರಕರಣದ ಕೋನ ಬೆಳಕಿಗೆ ಬಂದಿದೆ. ಮೃತ ಯುವತಿ ಮತ್ತು ಇ-ರಿಕ್ಷಾ ಚಾಲಕ ಪವಿತ್ರ ಸರ್ಕಾರ್ (35) ದೀರ್ಘಕಾಲದಿಂದ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಇಬ್ಬರ ಕುಟುಂಬಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕುಟುಂಬದ ಒತ್ತಡಕ್ಕೆ ಮಣಿದ ಪವಿತ್ರ ಸರ್ಕಾರ್, ಯುವತಿಯೊಂದಿಗೆ ಮಾತನಾಡುವುದು ಹಾಗೂ ಸಂಪರ್ಕ ಕಡಿತಗೊಳಿಸಿದ್ದ. ಇದರಿಂದ ತೀವ್ರ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಸಿಸಿಟಿವಿ ಆಧಾರದ ಮೇಲೆ ಪೊಲೀಸರು ಇ-ರಿಕ್ಷಾ ಚಾಲಕ ಪವಿತ್ರ ಸರ್ಕಾರ್ ಅಲಿಯಾಸ್ ಕನ್ಹೈ ಮತ್ತು ಆಕೆಯೊಂದಿಗೆ ಬಂದಿದ್ದ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.





Leave a comment