Home ದಾವಣಗೆರೆ “ನಿಮ್ಮ ಸಮಸ್ಯೆ ಬಗೆಹರಿಯುವವರೆಗೆ ಬಿಡಬೇಡಿ”: ಹೆಮ್ಮನಬೇತೂರಿನಲ್ಲಿ ‘ಸಂಸದರ ನಡೆ – ಹಳ್ಳಿಗಳ ಕಡೆ’ ಕಾರ್ಯಕ್ರಮದಲ್ಲಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್‌ ಕಿವಿಮಾತು!
ದಾವಣಗೆರೆನವದೆಹಲಿಬೆಂಗಳೂರು

“ನಿಮ್ಮ ಸಮಸ್ಯೆ ಬಗೆಹರಿಯುವವರೆಗೆ ಬಿಡಬೇಡಿ”: ಹೆಮ್ಮನಬೇತೂರಿನಲ್ಲಿ ‘ಸಂಸದರ ನಡೆ – ಹಳ್ಳಿಗಳ ಕಡೆ’ ಕಾರ್ಯಕ್ರಮದಲ್ಲಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್‌ ಕಿವಿಮಾತು!

Share
ಪ್ರಭಾ ಮಲ್ಲಿಕಾರ್ಜುನ್‌
Share

ದಾವಣಗೆರೆ: ಹಳ್ಳಿಗಳಿಗೆ ಭೇಟಿ ನೀಡಿದಾಗ ಮಾತ್ರ ಜನರ ನೈಜ ಸಮಸ್ಯೆಗಳು ಅರಿವಿಗೆ ಬರಲು ಸಾಧ್ಯ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ‘ಸಂಸದರ ನಡೆ – ಹಳ್ಳಿಗಳ ಕಡೆ’ ಹಾಗೂ ‘ಪ್ರಜಾ ಸ್ಪಂದನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ತಾಲೂಕಿನ ಹೆಮ್ಮನಬೇತೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸಂಸದರ ನಡೆ – ಹಳ್ಳಿಗಳ ಕಡೆ’ ಹಾಗೂ ‘ಪ್ರಜಾ ಸ್ಪಂದನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಸದರಾಗಿ ಆಯ್ಕೆಯಾಗಿ ಎರಡುವರೆ ವರ್ಷಗಳಾಗಿದ್ದು, ದೆಹಲಿಯಲ್ಲಿ ನೀತಿ-ನಿಯಮಗಳು ಹಾಗೂ ಕಾಯ್ದೆಗಳ ರೂಪಿಸುವಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಾಗುತ್ತಿದ್ದೇನೆ ಎಂದರು. ಆದರೆ ಗ್ರಾಮೀಣ ಭಾಗದ ಮಹಿಳೆಯರು, ವಯೋವೃದ್ಧರು, ಅಂಗವಿಕಲರು ಹಾಗೂ ವಿಶೇಷ ಚೇತನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಕಚೇರಿಗಳಿಗೆ ಬರಲು ಸಾಧ್ಯವಾಗುವುದಿಲ್ಲ. ಕಾಂಪೌಂಡ್, ಶಾಲಾ ಕಟ್ಟಡ ದುರಸ್ತಿ, ಶೌಚಾಲಯ ವ್ಯವಸ್ಥೆ, ಹೊಲಗಳಿಗೆ ಹೋಗುವ ರಸ್ತೆ ರಿಪೇರಿ, ಪಿಂಚಣಿ, ಇ-ಸ್ವತ್ತು, ಖಾತೆ ಬದಲಾವಣೆ ಹಾಗೂ ಗ್ಯಾರಂಟಿ ಯೋಜನೆಗಳ ಹಣ ತಲುಪದಿರುವ ಬಗ್ಗೆ ಅನೇಕ ದೂರುಗಳು ಬರುತ್ತಿವೆ. ಹೀಗಾಗಿ ನಾವೇ ಸ್ವತಃ ಹಳ್ಳಿಗಳಿಗೆ ಬಂದು ಜನರ ಸಮಸ್ಯೆ ಆಲಿಸುತ್ತಿದ್ದೇವೆ ಎಂದರು.

ಕ್ಷೇತ್ರದಲ್ಲಿ ಪಿಎಂ ರಿಲೀಫ್ ಫಂಡ್ ಅಡಿಯಲ್ಲಿ ಇದುವರೆಗೆ ಸುಮಾರು 60 ಫಲಾನುಭವಿಗಳಿಗೆ 1.25 ಕೋಟಿ ರೂಪಾಯಿಗಳಷ್ಟು ನೆರವು ತಲುಪಿಸಲಾಗಿದೆ. ಕ್ಯಾನ್ಸರ್, ಕಿಡ್ನಿ ಸಮಸ್ಯೆ, ಹೃದಯ ಶಸ್ತ್ರಚಿಕಿತ್ಸೆಗಳಂತಹ ಗಂಭೀರ ಕಾಯಿಲೆಗಳಿಗೆ ವೈದ್ಯರ ಧೃಡೀಕರಣ ಪತ್ರದೊಂದಿಗೆ ಅರ್ಜಿ ಸಲ್ಲಿಸಿದರೆ ಕೇಂದ್ರದಿಂದ ಪರಿಹಾರ ಒದಗಿಸಲಾಗುವುದು. ಜೊತೆಗೆ ಡಾ. ಶಾಮನೂರು ಶಿವಶಂಕರಪ್ಪ ಅವರ ಹೆಸರಿನ ಎಸ್‌ಎಸ್‌ ಕೇರ್ ಟ್ರಸ್ಟ್ ಮೂಲಕ ಉಚಿತ ಡಯಾಲಿಸಿಸ್, ಹೆರಿಗೆ ಸೇವೆ ಹಾಗೂ ಕಣ್ಣಿನ ಪೊರೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರತಿ ತಿಂಗಳು 650 ರಿಂದ 700 ಉಚಿತ ಡಯಾಲಿಸಿಸ್ ಸೈಕಲ್‌ಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಮಸ್ಯೆ ಬಗೆಹರಿಯುವವರೆಗೆ ಬಿಡಬೇಡಿ:

ನಿಮ್ಮ ಸಮಸ್ಯೆಗಳಿಗೆ ಸಂಪೂರ್ಣ ಪರಿಹಾರ ಸಿಗುವವರೆಗೆ ನಮ್ಮನ್ನು ಬಿಡಬೇಡಿ. ಪ್ರತಿಯೊಂದು ಅರ್ಜಿಗೂ ಕಾಲಮಿತಿ ನಿಗದಿಪಡಿಸಿ, ಅಧಿಕಾರಿಗಳಿಂದ ವರದಿ ಪಡೆಯಲಾಗುವುದು. ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ನಮ್ಮ ಸಿಬ್ಬಂದಿ ಒಟ್ಟಾಗಿ ಕಾರ್ಯನಿರ್ವಹಿಸಿ ಪಾರದರ್ಶಕ ಆಡಳಿತ ನೀಡಲು ಬದ್ಧರಾಗಿದ್ದೇವೆ ಎಂದು ಸಂಸದರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸಿಇಒ ಸಾಹಿತ್ಯ ಎಂ ಆಲದಕಟ್ಟೆ, ತಹಶೀಲ್ದಾರ್ ರಾಜೇಶ್, ಇಒ ರಾಂಬೋವಿ, ಮುಖಂಡರಾದ ಎಸ್.ಕೆ. ಚಂದ್ರಣ್ಣ, ಬಕ್ಕೇಶ್, ತಿಪ್ಪಣ್ಣ, ಪ್ರಕಾಶ್, ಬಸವರಾಜಪ್ಪ ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles