ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹಾಗೂ ಇಂಧನ ಉಳಿತಾಯದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಮಿತವ್ಯಯದ ಕರೆಗೆ ಒತ್ತು ನೀಡಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಪ್ಲೇ-ಆಫ್ ಪಂದ್ಯಗಳನ್ನು ಪ್ರೇಕ್ಷಕರಿಲ್ಲದೆ (Behind Closed Doors) ನಡೆಸುವಂತೆ ಚರ್ಚೆಗಳು ಆರಂಭವಾಗಿವೆ.
ದೇಶದಲ್ಲಿ ಅನಗತ್ಯ ಇಂಧನ ಬಳಕೆಯನ್ನು ಕಡಿಮೆ ಮಾಡಲು ಪ್ರಧಾನಿ ಮೋದಿ ಇತ್ತೀಚೆಗೆ ಕರೆ ನೀಡಿದ್ದರು.
ಇದರ ಬೆನ್ನಲ್ಲೇ ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ (CTI) ಅಧ್ಯಕ್ಷ ಬ್ರಿಜೇಶ್ ಗೋಯಲ್ ಅವರು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ಪತ್ರ ಬರೆದಿದ್ದಾರೆ. ಐಪಿಎಲ್ ಪಂದ್ಯಾವಳಿಗಳಿಗಾಗಿ ತಂಡಗಳು ನಿರಂತರವಾಗಿ ವಿಮಾನ ಮತ್ತು ರಸ್ತೆ ಮೂಲಕ ಪ್ರಯಾಣಿಸುತ್ತಿರುವುದರಿಂದ ಲಕ್ಷಾಂತರ ಲೀಟರ್ ಇಂಧನ ವ್ಯಯವಾಗುತ್ತಿದೆ. ಆದ್ದರಿಂದ, ವಿಮಾನ ಪ್ರಯಾಣವನ್ನು ಕಡಿತಗೊಳಿಸಲು, ಪಂದ್ಯಗಳನ್ನು ಸೀಮಿತ ಕ್ರೀಡಾಂಗಣಗಳಲ್ಲಿ ಹಾಗೂ ಪ್ರೇಕ್ಷಕರಿಲ್ಲದೆ ನಡೆಸಲು ಮರುಚಿಂತನೆ ನಡೆಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್, “ಇಲ್ಲಿಯವರೆಗೆ ಬಿಸಿಸಿಐಗೆ (BCCI) ಭಾರತ ಸರ್ಕಾರದಿಂದ ಯಾವುದೇ ಅಧಿಕೃತ ನಿರ್ದೇಶನಗಳು ಬಂದಿಲ್ಲ. ಸ್ವತಂತ್ರ ಸಂಸ್ಥೆಗಳು ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿರಬಹುದು, ಆದರೆ ನಾವು ಸರ್ಕಾರಕ್ಕೆ ಉತ್ತರದಾಯಿಯಾಗಿದ್ದೇವೆ. ಸರ್ಕಾರದಿಂದ ಯಾವುದೇ ಆದೇಶ ಬಂದರೆ ಅದನ್ನು ಖಂಡಿತವಾಗಿ ಪಾಲಿಸುತ್ತೇವೆ,” ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ, ಪ್ಲೇ-ಆಫ್ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲವಾದರೂ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.





Leave a comment