SUDDIKSHANA KANNADA NEWS/ DAVANAGERE/ DATE:13-12-2024
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಎಪಿಎಲ್ ಕಾರ್ಡ್ ಗಳಾಗಿ ಪರಿವರ್ತನೆಯಾಗಿದ್ದ ಬಿಪಿಎಲ್ ಕಾರ್ಡ್ ಗಳು ಪುನಃ ಬಿಪಿಎಲ್ ಕಾರ್ಡ್ ಗಳಾಗಿ ಪರಿವರ್ತನೆಯಾಗಿವೆ. ಇದರಿಂದಾಗಿ ಬಿಪಿಎಲ್ ಕಾರ್ಡ್ ಕಳೆದುಕೊಂಡು ಆತಂಕದಲ್ಲಿದ್ದ ಎಲ್ಲಾ ಬಿಪಿಎಲ್ ಫಲಾನುಭವಿಗಳು ನಿರಾಳರಾಗಿದ್ದಾರೆ.
ಆಹಾರ ಇಲಾಖೆಯಿಂದ ಕಳೆದ ತಿಂಗಳು ಬಿಪಿಎಲ್ ಕಾರ್ಡ್ ಗಳನ್ನು ಪರಿಷ್ಕರಣೆ ನಡೆಸಿ ವಿವಿಧ ಕಾರಣಗಳಿಂದ ಕಾರ್ಡ್ ಗಳನ್ನು ಗುರುತಿಸಿ ಅವುಗಳನ್ನು ಎಪಿಎಲ್ ಕಾರ್ಡ್ ಗಳನ್ನಾಗಿ ಬದಲಾವಣೆ ಮಾಡಲಾಗಿತ್ತು. ಇದರಿಂದಾಗಿ ಬಿಪಿಎಲ್ ಕಾರ್ಡ್ ಗಳನ್ನು ಕಳೆದುಕೊಂಡಿದ್ದ ಗ್ರಾಹಕರು ಸರ್ಕಾರಕ್ಕೆ ಮನವಿ ಸಲ್ಲಿಸಿ ನಮ್ಮ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಪಡಿಸಬಾರದು ಎಂದು ಕೇಳಿಕೊಂಡಿದ್ದರು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರ ಸಹ ಈ
ಬಗ್ಗೆ ಸರ್ಕಾರದ ಗಮನವನ್ನು ಸೆಳೆದಿತ್ತು.
ಶಿವಮೊಗ್ಗ ಜಿಲ್ಲೆಯಲ್ಲಿ ನಿಗದಿತ ಮಾರ್ಗಸೂಚಿಯಂತೆ ಆಹಾರ ಇಲಾಖೆ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಿ ಎಪಿಎಲ್ ಕಾರ್ಡ್ ಗಳನ್ನಾಗಿ ಪರಿವರ್ತಿಸಿ ಕಳೆದ ಎರಡು ತಿಂಗಳಿಂದ ಪಡಿತರ ನೀಡುವುದನ್ನು ನಿಲ್ಲಿಸಿದಾಗ, ಈ ಬಗ್ಗೆ ಶಿವಮೊಗ್ಗ
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಿ ಬಿಪಿಎಲ್ ಕಾರ್ಡ್ ಕಳೆದುಕೊಂಡವರ ಸಮೀಕ್ಷೆ ನಡೆಸಲು ಅದಾಲತ್ ನಡೆಸಿ ಅರ್ಹ ಬಿಪಿಎಲ್ ಕಾರ್ಡ್ದಾರರಿಗೆ ನ್ಯಾಯ
ಒದಗಿಸಬೇಕೆಂದು ಸರ್ಕಾರಕ್ಕೆ ಒತ್ತಾಯಪಡಿಸಲಾಗಿತ್ತು.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಬಿಪಿಎಲ್ ಕಾರ್ಡ್ ಗಳ ಪರಿಷ್ಕರಣೆ ಮಾಡಿ ಅನೇಕ ಕಾರಣಗಳಿಂದ ಬಿಪಿಎಲ್ ಕಾರ್ಡ್ ಗಳು ರದ್ದುಗೊಳಿಸಿದ್ದರಿಂದ ಬಡವರು ಪಡಿತರ ಪಡೆಯಲು ಸಮಸ್ಯೆಯಾಗಿತ್ತು. ಅಲ್ಲದೇ ಆರೋಗ್ಯ ಸೇವೆ ಪಡೆಯುವಲ್ಲಿಯೂ ತೊಂದರೆಯಾಗುತ್ತದೆ ಎಂದು ಬಿಪಿಎಲ್ ಕಾರ್ಡ್ದಾರರು ಆಕ್ರೋಶ ವ್ಯಕ್ತಪಡಿಸಿದ್ದನ್ನು ಗಮನಿಸಿದ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪರವರು ರದ್ದಾದ ಬಿಪಿಎಲ್ ಕಾರ್ಡ್ ಗಳನ್ನು ಸಕ್ರಿಯಗೊಳಿಸುವ ಭರವಸೆ ನೀಡಿದ್ದರು.
ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಬೇರೆ ಯಾರೊಬ್ಬರ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸದಂತೆ ಆಹಾರ ಇಲಾಖೆಗೆ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಕಟ್ಟು ನಿಟ್ಟಿನ ಆದೇಶ ನೀಡಿದ್ದರಿಂದ ಎಪಿಎಲ್ ಆಗಿ ಪರಿವರ್ತನೆಯಾಗಿದ್ದ ಬಿಪಿಎಲ್ ಕಾರ್ಡ್ ಗಳು ಪುನಃ ಬಿಪಿಎಲ್ ಆಗಿ ಮುನ್ನಡೆಯಲು ಕಾರಣವಾಯಿತು.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ರವರು ಈ ಬಗ್ಗೆ ಆಸಕ್ತಿ ವಹಿಸಿ ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ರದ್ದಾಗಿದ್ದ ಬಿಪಿಎಲ್ ಕಾರ್ಡ್ ಗಳನ್ನು ಸಕ್ರಿಯಗೊಳಿಸುವ ಕಾರ್ಯವನ್ನು ಭರದಿಂದ ನಡೆಸಬೇಕೆಂದು ಸೂಚಿಸಿದ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕೈತಪ್ಪಿ ಹೋಗಿದ್ದ ಬಿಪಿಎಲ್ ಕಾರ್ಡ್ ಅನ್ನು ಎಲ್ಲಾ ಬಡವರಿಗೆ ಪೂರ್ಣ ಪ್ರಮಾಣದಲ್ಲಿ ಮತ್ತೆ ಮರಳಿಸುವ ಮೂಲಕ ಎಲ್ಲಾ ಸೌಲಭ್ಯ ದೊರೆಯಲು ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಸೂಚಿ ಸಹಕಾರಿಯಾಗಿದೆ.