SUDDIKSHANA KANNADA NEWS/ DAVANAGERE/ DATE:26-12-2024
ಬೆಂಗಳೂರು: ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ವೈದ್ಯರಿದ್ದ ಕಾರಣ ಒಬ್ಬರ ಪ್ರಾಣ ಉಳಿದ ಘಟನೆ ನಡೆದಿದೆ.
44 ವರ್ಷ ವಯಸ್ಸಿನ ಮಾಜಿ ಸೈನಿಕರಿಗೆ ಇದ್ದಕ್ಕಿದ್ದಂತೆ ಆರೋಗ್ಯ ಹದಗೆಟ್ಟಿತು. ಕೂಡಲೇ ಡಾ. ರಿತಿನ್ ಮೊಹಿಂದ್ರಾ ಅವರು ಚಿಕಿತ್ಸೆ ನೀಡಿದರು. ಈ ಮೂಲಕ ವಿಮಾನವು ತುರ್ತು ಲ್ಯಾಂಡಿಂಗ್ ಆಗುವುದನ್ನು ತಪ್ಪಿಸಿದರು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ರಿಂದ ಬೆಳಿಗ್ಗೆ 5:45ಕ್ಕೆ 6ಇ 6021 ವಿಮಾನ ಟೇಕ್ ಆಫ್ ಆಗಿತ್ತು. ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿರುವ ಆಂತರಿಕ ವೈದ್ಯಕೀಯ ವಿಭಾಗದ ತೀವ್ರ ನಿಗಾ ಮತ್ತು ತುರ್ತು ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮೊಹಿಂದ್ರಾ ಮಾತನಾಡಿ “ವಿಮಾನವು ಬೆಂಗಳೂರಿನಿಂದ ಹೊರಟಿತ್ತು. ಸುಮಾರು 45 ನಿಮಿಷಗಳ ಕಾಲ ವಿಮಾನದಲ್ಲಿದ್ದ ಕ್ಯಾಬಿನ್ ಸಿಬ್ಬಂದಿ ಪ್ರಯಾಣಿಕರಿಗೆ ಸಹಾಯ ಮಾಡಲು ಮುಂದೆ ಬರುವಂತೆ ಸೂಚಿಸಿದಾಗ ನಾನು ತಕ್ಷಣ ಅವರನ್ನು ಸಂಪರ್ಕಿಸಿದೆ ಎಂದು ತಿಳಿಸಿದರು.
ಪ್ರಯಾಣಿಕನು ತನ್ನ ದೇಹದ ಎಡಭಾಗದಲ್ಲಿ ಅಸ್ವಸ್ಥತೆ, ತಲೆನೋವು ಮತ್ತು ದೌರ್ಬಲ್ಯ ಹೊಂದಿ ಅಸ್ವಸ್ಥಗೊಂಡರು. ಪಾರ್ಶ್ವವಾಯುವಿನಿಂದಲೂ ಇದು ಉಂಟಾಗುತ್ತದೆ. ಈ ಕಾರಣದಿಂದ ಎಚ್ಚರಿಕೆಯಿಂದ ಚಿಕಿತ್ಸೆ ನೀಡಬೇಕಿತ್ತು. ಅವರು ಮಧುಮೇಹಿ ಮತ್ತು ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಬಳಿಕ ಸಕ್ಕರೆ ಖಾಯಿಲೆಯಿಂದ ಬಳಲುತ್ತಿರಬಹುದು ಎಂಬ ಅನುಮಾನ ಬಂತು. ಕೋಮಾಕ್ಕೆ ಹೋಗುವ ಸಾಧ್ಯತೆಯೂ ಇತ್ತು.
ಸಕಾಲದಲ್ಲಿ ಚಿಕಿತ್ಸೆ ನೀಡಿದ ಪರಿಣಾಮ ಬದುಕುಳಿದರು ಎಂದು ಹೇಳಿದರು.
ಡಾ ಮೊಹಿಂದ್ರಾ ಕ್ಯಾಬಿನ್ ಸಿಬ್ಬಂದಿಗೆ ನೀರಿನಲ್ಲಿ ಸಕ್ಕರೆಯನ್ನು ಬೆರೆಸಿ ಪ್ರಯಾಣಿಕರು ತಕ್ಷಣ ಸೇವಿಸುವಂತೆ ಕೇಳಿಕೊಂಡರು. ಅದನ್ನು ಕುಡಿದ 15 ನಿಮಿಷಗಳಲ್ಲಿ, ಪ್ರಯಾಣಿಕ ಸಹಜಸ್ಥಿತಿಗೆ ಮರಳಿದ. ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವವರೆಗೆ ಪಕ್ಕದಲ್ಲಿಯೇ ಕುಳಿತಿದ್ದೆ ಎಂದು ವೈದ್ಯರು ವಿವರಿಸಿದರು.
ನಿವೃತ್ತ ಯೋಧರು ಮೈಸೂರು ಮೂಲದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಅವರು ಮತ್ತು ಅವರ ಪತ್ನಿ ಜೊತೆ ದೆಹಲಿಗೆ ಪ್ರವಾಸ ಮಾಡುತ್ತಿದ್ದರು.