SUDDIKSHANA KANNADA NEWS/ DAVANAGERE/ DATE:28-11-2024
ದಾವಣಗೆರೆ: ಸೋಲಿಲ್ಲದ ಸರದಾರ. ಲಕ್ಷಾಂತರ ಮಂದಿಯ ಮನ ಗೆದ್ದಿದ್ದ ಬೆಳ್ಳೂಡಿ ಕಾಳಿ ಇನ್ನಿಲ್ಲ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಿದಾಡಿತ್ತು. ಯಾಕೆಂದರೆ ಕರ್ನಾಟಕದಲ್ಲಿ ಬೆಳ್ಳೂಡಿ ಕಾಳಿ ಹೆಸರು ಕೇಳಿದರೆ ಸಾಕು ಜೂಜು ಕಟ್ಟುವರ ಎದೆಯಲ್ಲಿ ನಡುಕ ಶುರುವಾಗುತಿತ್ತು. ಗುಮ್ಮಿದ್ರೆ ಗೆಲುವು ಗ್ಯಾರಂಟಿ ಎಂಬ ಮಾತು ಜನಜನಿತವಾಗಿತ್ತು. ಹಾಗಾಗಿ, ಈ ಟಗರು ಎಲ್ಲೆಡೆ ಪ್ರಸಿದ್ಧಿ ಹೊಂದಿತ್ತು. ಕಳೆದ ಮೂರು ದಿನಗಳ ಹಿಂದೆ ಸಾವನ್ನಪ್ಪಿದ ಈ ಕಾಳಿಗೆ ಅರ್ಥಪೂರ್ಣ ಶ್ರದ್ಧಾಂಜಲಿ ಜೊತೆಗೆ ಸ್ಮಾರಕ ನಿರ್ಮಾಣ ಮಾಡುತ್ತಿರುವುದು ಎಲ್ಲರ ಗಮನ ಸೆಳೆದಿದೆ.
ಕರ್ನಾಟಕ ಟಗರು ಕಾಳಗದ ಅಖಾಡದಲ್ಲಿ ಕಾಳಿ ಹೆಸರು ಕೇಳದ ಜನರಿಲ್ಲ, ಅಷ್ಟರ ಮಟ್ಟಿಗೆ ಕಿಂಗ್ ಕಾಳಿ ರಾಜ್ಯಾದ್ಯಂತ ಹೆಸರು ಮಾಡಿತ್ತು, ಸೋಲಿಲ್ಲದ ಸರದಾರ ಹೆಸರು ಗಿಟ್ಟಿಸಿದ್ದ ಬೆಳ್ಳೂಡಿ ಕಾಳಿ ಅನಾರೋಗ್ಯದಿಂದ ನಿಧನ ಹೊಂದಿದ್ದು ಸಾವಿರಾರು ಅಭಿಮಾನಿಗಳಲ್ಲಿ ನೋವು ತಂದಿದೆ.
ಸೋಲಿಲ್ಲದ ಸರದಾರ ಎಂದು ಕರೆಯಲು ಕಾರಣವಿದೆ. ಯಾಕೆಂದರೆ ಒಮ್ಮೆಯೂ ಸೋಲು ಕಾಣದ ಬೆಳ್ಳೂಡಿ ಕಾಳಿ ಎಷ್ಟರ ಮಟ್ಟಿಗೆ ಪ್ರಖ್ಯಾತಿ ಆಗಿತ್ತೆಂದರೆ ದಾವಣಗೆರೆ ಜಿಲ್ಲೆ ಮಾತ್ರವಲ್ಲ, ಬೇರೆ ಜಿಲ್ಲೆಗಳಲ್ಲಿಯೂ ನಡೆದ ಟಗರು ಕಾಳಗದಲ್ಲಿ ಸೋಲೇ ಕಂಡಿರಲಿಲ್ಲ. ಅಖಾಡಕ್ಕೆ ಇಳಿದರೆ ಸಾಕು ಬೆಳ್ಳೂಡಿ ಕಾಳಿಯ ಹೊಡೆತಕ್ಕೆ ಬೇರೆ ಟಗರುಗಳು ಪತರುಗುಟ್ಟುತ್ತಿದ್ದವು. ಡಿಚ್ಚಿ ಅಷ್ಟೊಂದು ಪವರ್ ಫುಲ್ ಆಗಿರುತಿತ್ತು. ಇಂಥ ಕಾಳಿಗೆ ಎಲ್ಲೆಡೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ. ಜೊತೆಗೆ ಕಾಳಿ ಸವಿನೆನಪಿಗಾಗಿ ಸ್ಮಾರಕವನ್ನು ನಿರ್ಮಾಣ ಮಾಡಲಾಗುತ್ತಿದೆ.
ಎಲ್ಲಿ ಸ್ಮಾರಕ ನಿರ್ಮಾಣ?
ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಹೊಸಪೇಟೆ – ಶಿವಮೊಗ್ಗ ಹೆದ್ದಾರಿ ಪಕ್ಕದಲ್ಲಿ ಕಾಳಿಯ ಅಂತ್ಯಸಂಸ್ಕಾರ ನೆರವೇರಿತ್ತು. ಗ್ರಾಮಸ್ಥರೆಲ್ಲರೂ ಸೇರಿ ಬೆಳ್ಳೂಡಿ ಕಾಳಿಯ ಮೆರವಣಿಗೆ ನಡೆಸಿದರು. ಈ ಮೆರವಣಿಗೆ ಭಾವಪೂರ್ಣವಾಗಿತ್ತು. ಹೂಳಲಾದ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡುವ ಸಿದ್ಧತೆ ನಡೆಯುತ್ತಿವೆ.
ಬೆಳ್ಳೂಡಿ ಕಾಳಿ ಬದುಕಿದ್ದು ಕೇವಲ ಎಂಟು ವರ್ಷ. ಆದ್ರೆ, ರೆಕಾರ್ಡ್ ಮಾತ್ರ ಅಚ್ಚಳಿಯದಂತೆ ಉಳಿಯುವಂಥದ್ದು. ಮರಿ ಆಗಿದ್ದಾಗಲೇ ಕುರಿ ಕಾಳಗದಲ್ಲಿ ಪ್ರಥಮ ಬಹುಮಾನ ಪಡೆದಿತ್ತು. 2 ಹಲ್ಲು ಇದ್ದಾಗ 8, 4 ಹಲ್ಲು ಇದ್ದಾಗ 3, ಆರು ಹಲ್ಲಿನ ಟಗರು ಆಗಿದ್ದಾಗ 5, 8 ಹಲ್ಲಿನ ಟಗರು ಆಗಿದ್ದಾಗ 8 ಬಾರಿ ಸೇರಿ ಒಟ್ಟು 25 ಟೂರ್ನಿಗಳಲ್ಲಿ ಗೆದ್ದು ಬೀಗಿದೆ.
ಬೆಟ್ಟಿಂಗ್ ಜೋರು:
ಬೆಳ್ಳೂಡಿ ಕಾಳಿ ಅಖಾಡಕ್ಕೆ ಇಳಿಯುತ್ತಿದ್ದಂತೆ ಬೆಟ್ಟಿಂಗ್ ಭರಾಟೆ ಜೋರಾಗಿರುತಿತ್ತು. ಮೊದ ಮೊದಲು ಬೆಳ್ಳೂಡಿ ಕಾಳಿ ವಿರುದ್ಧ ಬೆಟ್ಟಿಂಗ್ ಕಟ್ಟುತ್ತಿದ್ದರು. ಕಾಳಿಯ ಡಿಚ್ಚಿ ಹೊಡೆತಕ್ಕೆ ಬೆಟ್ಟಿಂಗ್ ಕಟ್ಟುವವರ ಎದೆ ನಡುಕ ಶುರುವಾಗುವಂತೆ ಮಾಡಿತ್ತು. ಬೆಳ್ಳೂಡಿ ಕಾಳಿ ಬರೋಬ್ಬರಿ 25 ಲಕ್ಷ ರೂಪಾಯಿ ಹಣ, 2 ರಾಯಲ್ ಎನ್ ಫೀಲ್ಡ್, 1 ಬಜಾಜ್ ಪರ್ಲ್ಸ್, 1 ಎನ್ ಎಸ್, 220 ಬೈಕ್, ಬಂಗಾರ, ಬೆಳ್ಳಿ, ಟಿವಿ, 4 ಟಿವಿ ಸ್ಟ್ಯಾಂಡ್ ಸೇರಿದಂತೆ ಹತ್ತಾರು ಗೆಲುವು ಸಾಧಿಸಿ ಮಾಲೀಕನ ಜೇಬು ತುಂಬಿಸಿದೆ.
ಎಲ್ಲಿಂದ ಬಂತು ಈ ಮರಿ?
ಬೆಳಗಾವಿ ಜಿಲ್ಲೆಯ ನಾಗರಮುನವಳ್ಳಿ ಗ್ರಾಮದಲ್ಲಿ 8 ತಿಂಗಳ ಮರಿಯಾಗಿದ್ದಾಗಲೇ 21 ಸಾವಿರ ರೂಪಾಯಿ ಕೊಟ್ಟು ಖರೀದಿಸಲಾಗಿತ್ತು. ಬೆಳ್ಳೂಡಿ ಗ್ರಾಮದ ಪೂಜಾರ ದೊಡ್ಡಕೆಂಚಪ್ಪಳರ ಮನೆಯ ಯುವಕ ರಾಘವೇಂದ್ರ ಹಾಗೂ ದಾವಣಗೆರೆಯ ಮೋಹನ್ ಅವರು ಖರೀದಿಸಿದ್ದರು. ಇದನ್ನು ನೋಡುತ್ತಿದ್ದಂತೆ ಕಾಳಿ ಎಂಬ ಹೆಸರು ಇಟ್ಟಿದ್ದರು. ಬೆಳ್ಳೂಡಿ ಗ್ರಾಮವಾಗಿದ್ದ ಕಾರಣ ಬೆಳ್ಳೂಡಿ ಕಾಳಿ ಎಂಬ ಹೆಸರು ಬರಬರುತ್ತಾ ಬಂತು.
ಪುಣೆಯಿಂದ ಬರ್ತಿದ್ದಾರೆ ಶಿಲ್ಪಿ:
ಇನ್ನು ಕಾಳಿಯ ನೆನಪು ಮಾಲೀಕರಿಂದ ಮಾಸಿಲ್ಲ. ಇನ್ನೂ ಹಚ್ಚಹಸಿರಾಗಿಯೇ ಇದೆ. ಹಾಗಾಗಿ, ಕಾಳಿ ಸವಿನೆನಪಿಗಾಗಿ ಪುಣೆಯಿಂದ ಶಿಲ್ಪಿಯನ್ನು ಕರೆತಂದು ಸ್ಮಾರಕ ನಿರ್ಮಾಣ ಮಾಡುತ್ತೇವೆ. ಈ ಸಂಬಂಧ ಶಿಲ್ಪಿ ಜೊತೆ ಮಾತುಕತೆ ನಡೆಸಲಾಗಿದೆ ಎಂದು ರಾಘವೇಂದ್ರ, ಮೋಹನ್ ಅವರು ಮಾಹಿತಿ ನೀಡಿದ್ದಾರೆ.
ಆರಂಭದಲ್ಲಿ ಕಾಳಿ ಪೊಗರು ತೋರಿಲ್ಲ. ತನ್ನ ಪಾಡಿಗೆ ಇತ್ತು. ದಿನಗಳು ಕಳೆದಂತೆ ತನ್ನ ನಿಜ ವರಸೆ ಶುರು ಮಾಡಿತು. ಆಮೇಲೆ ಕಾಳಿಯ ಅವತಾರ ಕಂಡು ಮಾಲೀಕರೇ ಆಶ್ಚರ್ಯಗೊಂಡಿದ್ದರು. ತಾಲೂಕು, ಜಿಲ್ಲೆ, ರಾಜ್ಯಮಟ್ಟದ ಸ್ಪರ್ಧೆಗಳಲ್ಲಿಯೂ ಗೆದ್ದು ಬೀಗಿತ್ತು.
“ಬೆಳ್ಳೂಡಿ ಕಾಳಿ”, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲೂ ಸಹ ಕುರಿ ಕಾಳಗದ ಟೂರ್ನಮೆಂಟ್ ನಡೆಯುತ್ತದೆ. ಈ ಒಂದು ಕುರಿ ಕಾಳಗ ಟೂರ್ನಮೆಂಟ್ ಅಲ್ಲಿ ಎಷ್ಟೋ ಮರಿಗಳು ಹೆಸರು ಮಾಡಿದೆ, ಅದೇ ರೀತಿ ಬೆಳ್ಳೂಡಿ ಕಾಳಿ ಕೂಡ ಒಂದು. ಇದೇ ತಿಂಗಳ ಕೊಣ್ಣೂರು ಕಣದ ಟೂರ್ನಮೆಂಟ್ ನಲ್ಲಿ ತನ್ನ ವಯಸ್ಸು ಮೀರಿ ಪ್ರದರ್ಶನ ನೀಡಿದ್ದು, ನಾಲ್ಕನೇ ಸುತ್ತಿನಲ್ಲಿ ಕಾರಣಾಂತರಗಳಿಂದ ಹಿಂದಕ್ಕೆ ತೆಗೆದುಕೊಳ್ಳಲಾಗಿದೆ.
ಬೆಳ್ಳೂಡಿ ಕಾಳಿ ಸಾವಿಗೆ ಕಾಗಿನೆಲೆ ಶ್ರೀ ನಿರಂಜನಾ ನಂದಪುರಿ ಸ್ವಾಮಿಗಳು ಸಂತಾಪ ಸೂಚಿಸಿದ್ದಾರೆ. ಯಾವುದೇ ಕುರಿ ಕಾಳಗಕ್ಕೆ ಹೋಗಬೇಕಾದ್ರು ಸ್ವಾಮಿಜಿ ಆಶೀರ್ವಾದ ಪಡೆದು ಹೋಗ್ತಾ ಇತ್ತು, ಅಷ್ಟೆ ಅಲ್ಲದೇ ರಾಜ್ಯಾದ್ಯಂತ ಸಾವಿರಾರು ಜನ ಅಭಿಮಾನಿಗಳನ್ನ ಹೊಂದಿದ್ದ ಕಾಳಿ ಅಗಲಿಕೆ ತುಂಬಲಾರದ ನಷ್ಟವಾಗಿದ್ದು, ಜನರು ತಂಡೋಪ ತಂಡವಾಗಿ ಆಗಮಿಸಿ ಕಾಳಿ ಅಂತಿಮ ದರ್ಶನ ಪಡೆದಿದ್ದಾರೆ.
ಏನಾಗಿತ್ತು “ಕಾಳಿ”ಗೆ?
ನಿರಂತರ ಕಾದಾಟದಿಂದ ಹಿಂಗಾಲಿನ ನರಗಳ ದೌರ್ಬಲ್ಯ ಹಾಗೂ ದಿಢೀರ್ ಆಗಿ ಜ್ವರ ಕಾಣಿಸಿಕೊಂಡಿತ್ತು. ಕಾಳಿ ಬದುಕಿಸಿಕೊಳ್ಳಲು ಮಾಲೀಕ ರಾಘವೇಂದ್ರ ಹಾಗೂ ಮೋಹನ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಂತಿಮವಾಗಿ ನವೆಂಬರ್ 25ರಂದು ಕೊನೆಯುಸಿರುಬಿಟ್ಟಿತು.
ಒಟ್ಟಿನಲ್ಲಿ ಬೆಳ್ಳೂಡಿ ಕಾಳಿಯ ಕಾದಾಟ, ಡಿಚ್ಚಿ, ಓಡಾಟ, ಚಿನ್ನಾಟ ಎಲ್ಲವೂ ಮರೆಯುವಂಥದ್ದಲ್ಲ. ಎಂದೆಂದಿಗೂ ಟಗರು ಕಾಳಗ ಪ್ರಿಯರ ಮನದಲ್ಲಿ ಹಚ್ಚಹಸಿರಾಗಿಯೇ ಉಳಿದಿರುತ್ತದೆ. ಹಾಗಾಗಿ, ಬೆಳ್ಳೂಡಿಯಲ್ಲಿ ಬೆಳ್ಳೂಡಿ ಕಾಳಿ ನೆನಪಿಗಾಗಿ ಕಟ್ಟಿಸಲಾಗುತ್ತಿರುವ ಸ್ಮಾರಕ ವಿಶೇಷತೆಗಳಿಂದ ಕೂಡಿರಲಿದೆ, ಅದು ನಿರ್ಮಾಣ ಪೂರ್ಣಗೊಂಡ ಬಳಿಕ ಗೊತ್ತಾಗುತ್ತದೆ ಎನ್ನುತ್ತಾರೆ ಮಾಲೀಕರು.