SUDDIKSHANA KANNADA NEWS/ DAVANAGERE/ DATE:01-03-2024
ದಾವಣಗೆರೆ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಹತ್ತು ತಿಂಗಳಲ್ಲಿ ಎಲ್ಲ ರಂಗಗಳಲ್ಲೂ ವೈಫಲ್ಯ ಕಂಡಿದೆ. ಇಡೀ ಕರ್ನಾಟಕದಲ್ಲಿ ಬರಗಾಲ ಆವರಿಸಿದ್ದರೂ ರಾಜ್ಯ ಕಾಂಗ್ರೆಸ್ ಸರಕಾರ ಬರಪರಿಹಾರ ಕಾರ್ಯದಲ್ಲಿ ಸಂಪೂರ್ಣ ವಿಫಲವಾಗಿದೆ . 875 ಕ್ಕೂ ಹೆಚ್ಚು ರೈತರು ಅತ್ಮಹತ್ಯೆ ಮಾಡಿಕೊಂಡಿದ್ದು, ಜನರು ಗುಳೆ ಹೋಗುತ್ತಿದ್ದಾರೆ. ಆದರೆ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ನಾಗಪ್ಪ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು, ಶಾಸಕರು ರಾಜ್ಯ ಪ್ರವಾಸ ಮಾಡುತ್ತಿಲ್ಲ. ಗ್ಯಾರಂಟಿಗಳನ್ನೂ ಸರಿಯಾಗಿ ಅನುಷ್ಠಾನ ಮಾಡುತ್ತಿಲ್ಲ. ಕರ್ನಾಟಕ ರಾಜ್ಯದಲ್ಲಿ ಒಂದೇ ಒಂದು ಕಡೆ ಚರಂಡಿ, ರಸ್ತೆ ಯಾವುದೇ ಅಭಿವೃದ್ಧಿ ಕೆಲಗಳು ಆಗಿಲ್ಲ. ಇದು ಶೂನ್ಯ ಅಭಿವೃದ್ಧಿ ಸರ್ಕಾರ. ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ದೂರಿದರು.
ರಾಜ್ಯದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮುಚ್ಚುತ್ತಾ ಬಂದಿದೆ ಸರ್ಕಾರ. ಟ್ಯಾಂಕರ್ ನೀರಿನ ಮಾಫಿಯಾಗಳಿಗೆ ಜತೆಯಾಗಿ ನೀರಿನ ದರ ದುಪ್ಪಟ್ಟು ಮಾಡಿದೆ. ಕೈಗಾರಿಕಾ ಪ್ರದೇಶಗಳಿಗೆ ನೀರು ಸರಬರಾಜು
ಮಾಡದೇ ಉದ್ಯಮಗಳು ಬಾಗಿಲು ಮುಚ್ಚಿ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಒಟ್ಟಾರೆಯಾಗಿ ಕಾಂಗ್ರೆಸ್ ಜನರ ಬದುಕನ್ನು ನರಕ ಮಾಡುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಅಭಿವೃದ್ಧಿಗೆ ಸಂಬಂಧಿಸಿದ 11 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಹಣವನ್ನು ಬೇರೆ ಉದ್ದೇಶಕ್ಕೆ ಗ್ಯಾರಂಟಿಗಳಿಗೆ ಬಳಸಿಕೊಂಡಿದೆ. ದಲಿತರು , ಶೋಷಿತ ವರ್ಗದವರ ಕುರಿತು ಸಿದ್ದರಾಮಯ್ಯನವರ ಮೊಸಳೆ ಕಣ್ಣೀರಿಗೆ ಇದು ಸಾಕ್ಷಿ. ಶೋಷಿತ, ಪೀಡಿತ, ವಂಚಿತ ತಳ ಸಮುದಾಯಗಳ ಮೇಲಿನ ನಿರಂತರ ಅನ್ಯಾಯ ಮುಂದುವರೆದಿದೆ. ಇದು ದಲಿತ ವಿರೋಧಿ ಸರ್ಕಾರ. ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರವೇ ತಾಂಡವವಾಡುತ್ತಿದೆ. ಸಿಕ್ಕಲ್ಲೆಲ್ಲ ಲಂಚಕ್ಕೆ ಕಾದು ಕೂತಿದೆ ಕಾಂಗ್ರೆಸ್ ಎಂದು ದೂರಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಇದಾಕ್ಕೆ ಸಾಕ್ಷಿ ವಿಧಾನಸೌಧದ ಆವರಣದಲ್ಲಿ ಶತ್ರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು. ಇವೆಲ್ಲವೂ ಕಾಂಗ್ರೆಸ್ಸಿನ ಓಲೈಕೆ ರಾಜಕಾರಣದ ಫಲ. ನಾಸಿರ್ ಅಹ್ಮದ್ ರಾಜ್ಯಸಭೆಗೆ ಆಯ್ಕೆಯಾದ ಕ್ಷಣವೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೇಳಿದ್ದು ಅತ್ಯಂತ ಕೆಟ್ಟ ಬೆಳವಣಿಗೆ. ಕಾಂಗ್ರೆಸ್ ಎಂದೆಂದಿಗೂ ದೇಶದ್ರೋಹಿಗಳ ಪರವಾಗಿಯೇ ಇದೆ. ಕಾಂಗ್ರೆಸ್ಸಿಗರದ್ದು ಜಿನ್ನಾ ಮನಸ್ಥಿತಿ ಎಂದು ಕಿಡಿಕಾರಿದರು.
ಕಿಸಾನ್ ಸಮ್ಮಾನ್ ಯೋಜನೆಯಡಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರವು 6 ಸಾವಿರ ನೀಡುತ್ತಿದೆ. ರಾಜ್ಯದಲ್ಲಿ ಅಂದಿನ ಯಡಿಯೂರಪ್ಪ ಅವರ ಸರಕಾರ ಆರಂಭಿಸಿದ್ದ ಹೆಚ್ಚುವರಿ 4 ಸಾವಿರ ನೀಡುವ ವ್ಯವಸ್ಥೆಯನ್ನು ರಾಜ್ಯ ಕಾಂಗ್ರೆಸ್ ಸರಕಾರ ನಿಲ್ಲಿಸಿದೆ. ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಪಾದಿಸಿದರು.
ಹಿಂದೂ ದೇವಸ್ಥಾನಗಳ ಹುಂಡಿಯಿಂದ ಹಣ ಕಿತ್ತುಕೊಂಡು ಅದನ್ನು ಅನ್ಯ ಉದ್ದೇಶಕ್ಕೆ ಬಳಸುವ ಹುನ್ನಾರ ಕಾಂಗ್ರೆಸ್ ಸರಕಾರದ್ದು. ಬೆಲೆ ಏರಿಕೆಯ ಕೊಡುಗೆ ಕಾಂಗ್ರೆಸ್ ಸರಕಾರದ ದೊಡ್ಡ ಸಾಧನೆ. ವಿದ್ಯುತ್, ಹಾಲಿನ ದರ ಏರಿಕೆ ಮಾತ್ರವಲ್ಲದೆ, ಅಬಕಾರಿ ಸುಂಕ, ಆಸ್ತಿ ನೋಂದಣಿ, ವಾಹನ ನೋಂದಣಿ ದರವನ್ನು ಹೆಚ್ಚಿಸಿದೆ ಎಂದು ಆರೋಪಿಸಿದ ಅವರು, ಭಾರತವನ್ನು ದಕ್ಷಿಣ ಭಾರತ ಉತ್ತರ ಭಾರತ ಎಂದು ಒಡೆಯುವ ಕುರಿತು ಕರ್ನಾಟಕದ ಏಕೈಕ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಮಾತನಾಡಿದ್ದರು. ಆದರೆ ಅದನ್ನು ಖಂಡಿಸಿ ದೇಶ ಒಂದು ಎನ್ನುವ ಮಾತನ್ನು ಕಾಂಗ್ರೆಸ್ಸಿಗರು ಯಾರೂ ಆಡಲಿಲ್ಲ. ಕಾಂಗ್ರೆಸ್ಸಿಗೆ ದೇಶ ಒಂದಾಗುವುದು ಬೇಕಿಲ್ಲ, ಒಡೆಯುವುದಷ್ಟೇ ಬೇಕು ಎಂದು ಕಿಡಿಕಾರಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಡ್ಲೇಬಾಳು ಧನಂಜಯ್, ಅನಿಲ್ ಕುಮಾರ್ ನಾಯ್ಕ್, ಸತೀಶ್ ಕೊಳೇನಹಳ್ಳಿ, ಶಿವರಾಜ್ ಪಾಟೀಲ್, ಕೊಟ್ರೇಶ್ ಗೌಡ್ರು, ಹೆಚ್. ಪಿ. ವಿಶ್ವಾಸ್, ಕೊಟ್ರೇಶ್ ಗೌಡ್ರು, ಶಶಿಕುಮಾರ್, ಐಗೂರು ಲಿಂಗರಾಜ್ ಮತ್ತಿತರರು ಹಾಜರಿದ್ದರು.