SUDDIKSHANA KANNADA NEWS/ DAVANAGERE/ DATE:28-06-2024
ಬೆಂಗಳೂರು: ಹಾವೇರಿ ಜಿಲ್ಲೆಯ ಗುಂಡೇನಹಳ್ಳಿ ಕ್ರಾಸ್ ಬಳಿ ಪೂನಾ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 4 ವರ್ಷ ಹಾಗೂ 6 ವರ್ಷದ ಇಬ್ಬರು ಮಕ್ಕಳು ಸೇರಿ 13 ಜನ ಮೃತಪಟ್ಟ ಘಟನೆ ಮಮ್ಮಲ ಮರುಗುವಂತೆ ಮಾಡಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಸಂತಾಪ ಸೂಚಿಸಿದ್ದಾರೆ.
ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದವರಾಗಿದ್ದು ಮೃತರ ಕುಟುಂಬಕ್ಕೆ ಆಘಾತ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ, ಅಗಲಿದ ಆತ್ಮಗಳಿಗೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
ಡಿ. ಕೆ. ಶಿವಕುಮಾರ್ ಸಂತಾಪ:
ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಶಿವಮೊಗ್ಗ ಮೂಲದ 13ಕ್ಕೂ ಹೆಚ್ಚು ಜನರು ಸಾವಿಗೀಡಾದ ಸಂಗತಿಯಿಂದ ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರ ನೋವಿನಲ್ಲಿ ನಾನು ಕೂಡ ಭಾಗಿ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
ಬಿ. ವೈ. ರಾಘವೇಂದ್ರ ಸಂತಾಪ:
ಸವದತ್ತಿಯ ಎಲ್ಲಮ್ಮನ ದರ್ಶನ ಮುಗಿಸಿ ತವರಿಗೆ ಹಿಂದಿರುವ ಸಂದರ್ಭದಲ್ಲಿ ಹಾವೇರಿಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ರಸ್ತೆಯ ಬದಿಯಲ್ಲಿ ನಿಂತಿದ್ದ ಲಾರಿಗೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದ ಪರಿಣಾಮ ಭದ್ರಾವತಿಯ ಎಮ್ಮೆಹಟ್ಟಿ ಗ್ರಾಮದ ಒಂದೇ ಕುಟುಂಬದ 13 ಮಂದಿ ಸ್ಥಳದಲ್ಲಿಯೇ ಮೃತಪಟ್ಟ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಸಂತಾಪ ಸೂಚಿಸಿದ್ದಾರೆ.
ಮೃತಪಟ್ಟವರೆಲ್ಲರೂ ನನ್ನ ಕ್ಷೇತ್ರದವರು ಎಂಬುದು ಮತ್ತೊಂದು ನೋವಿನ ಸಂಗತಿಯಾಗಿದೆ. ಮೃತರ ಆತ್ಮಕ್ಕೆ ಭಗವಂತನು ಶಾಂತಿ ನೀಡಲಿ, ಅವರ ಅವಲಂಬಿತರಿಗೆ ಹಾಗೂ ಕುಟುಂಬ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಹಾವೇರಿಯಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ರಾಜಕಾರಣಿಗಳು ಸೇರಿದಂತೆ, ಶಾಸಕರು, ಸಚಿವರು ಸೇರಿದಂತೆ ಗಣ್ಯಾತಿ ಗಣ್ಯರು ಕಂಬನಿ ಮಿಡಿದಿದ್ದಾರೆ.