SUDDIKSHANA KANNADA NEWS/ DAVANAGERE/ DATE:13-10-2024
ಸವದತ್ತಿ: ಮೈಸೂರಿನಲ್ಲಿ ಪೇಟ ನಿರಾಕರಿಸಿ ಸಾಕಷ್ಟು ಟೀಕೆಗಳಿಗೆ ಒಳಗಾಗಿದ್ದ ಸಿಎಂ ಸಿದ್ದರಾಮಯ್ಯನವರು ಸವದತ್ತಿಯಲ್ಲಿ ಯಲ್ಲಮ್ಮನ ದರ್ಶನ ಪಡೆದ ಬಳಿಕ ಅಭಿಮಾನಿಗಳತ್ತ ಕೈಬೀಸುವಾಗ ಅವರ ಹಣೆಯಲ್ಲಿ ಧರಿಸಿದ್ದ ಕುಂಕುಮ ಗಮನ ಸೆಳೆಯಿತು.
ಮೂಡಾ ಪ್ರಕರಣದ ಬಳಿಕ ದೇವಸ್ಥಾನಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಿರುವ ಸಿಎಂ ಸಿದ್ದರಾಮಯ್ಯರು ಈ ಹಗರಣದಿಂದ ಕಾಪಾಡುವಂತೆ ದೇವಿಯರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಮಾತ್ರವಲ್ಲ, ಮೈಸೂರು ದಸರಾ ವೇಳೆ ಪೇಟ ಹಾಕುವಾಗ ಬೇಡವೆಂದು ಹೇಳಿದ್ದ ವಿಡಿಯೋ ಸಖತ್ ವೈರಲ್ ಆಗಿತ್ತು. ಆದ್ರೆ, ಸವದತ್ತಿಯಲ್ಲಿ ಕುಂಕುಮ ಧಾರಣೆ ಮಾಡಿದ್ದು ಎಲ್ಲರ ಗಮನ ಸೆಳೆಯಿತು.
ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗಾಗಿ ಯಲ್ಲಮ್ಮ ಸನ್ನಿಧಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಬಳಿಕ, ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಮತ್ತು ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಪ್ರಥಮ ಸಭೆಯನ್ನು ತಮ್ಮದೇ ಅಧ್ಯಕ್ಷತೆಯಲ್ಲಿ ನಡೆಸಿದರು. ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕ್ಷೇತ್ರದ ಶಾಸಕರಾದ ವಿಶ್ವಾಸ್ ವ ವೈದ್ಯ ಮತ್ತು ಜಿಲ್ಲೆಯ ಶಾಸಕರುಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.