SUDDIKSHANA KANNADA NEWS/ DAVANAGERE/ DATE:11-09-2024
ದಾವಣಗೆರೆ: ಕಾಂಗ್ರೆಸ್ ಹೈಕಮಾಂಡ್ ಆಶೀರ್ವಾದ ಇರುವವರೆಗೂ ಸಿಎಂ ಸಿದ್ದರಾಮಯ್ಯರು ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.
ದಾವಣಗೆರೆಯ ಎಂಸಿಸಿ ಬಿ ಬ್ಲಾಕ್ ನಲ್ಲಿನ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಗೃಹಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.
ಅವರೇ ಮುಂದುವರಿಯುತ್ತಾರೆ. ಮುಡಾ ಪ್ರಕರಣ ಸಂಬಂಧ ಸಿದ್ದರಾಮಯ್ಯರ ವಿರುದ್ಧ ಮಾಡಿರುವ ಕೇಸ್ ನಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದರು.
ರಾಜಕೀಯದಲ್ಲಿ ಸೀನಿಯರ್, ಜ್ಯೂನಿಯರ್ ಎಂಬ ಪ್ರಶ್ನೆ ಬರುವುದಿಲ್ಲ. ಹೈಕಮಾಂಡ್ ಯಾರನ್ನು ಮುಖ್ಯಮಂತ್ರಿಯನ್ನಾಗಿಸಬೇಕೆಂಬ ಮನಸ್ಸು ಮಾಡುತ್ತದೆಯೋ ಅವರು ಆಗುತ್ತಾರೆ. ಇಂಥ ಪ್ರಸಂಗ ಎದುರಾದರೆ ನಾನೂ ಸಿಎಂ ಆಕಾಂಕ್ಷಿ. ಶಾಸಕರ ಅಭಿಪ್ರಾಯ ಸಂಗ್ರಹಿಸಿ ಮತ ಹಾಕಿದರೆ ಮುಖ್ಯಮಂತ್ರಿಯಾಗುತ್ತಾರೆ ಎಂದು ತಿಳಿಸಿದ ಅವರು ನಾನೂ ಸಿಎಂ ಹುದ್ದೆ ಬಿಡುವುದಿಲ್ಲ. ನಾನೂ ಸ್ಪರ್ಧೆಯಲ್ಲಿರುತ್ತೇನೆ ಎಂದು ಹೇಳಿದರು.
ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಶಾಸಕರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಂತಿಮವಾಗಿ ತೀರ್ಮಾನಿಸುವುದು ಹೈಕಮಾಂಡ್. ಸದ್ಯಕ್ಕೆ ಈ ಪರಿಸ್ಥಿತಿ ಇಲ್ಲ. ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡುವುದರಲ್ಲಿ ಪ್ರಯೋಜನವಿಲ್ಲ. ನಾನು
ಹಿರಿಯನಿದ್ದು, ಸಿಎಂ ಆಗಬೇಕೆಂದು ಓಡಾಡಿಕೊಂಡಿದ್ದರೆ ಹಗುರ ಆಗ್ತಾರೆ ಅಷ್ಟೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.