SUDDIKSHANA KANNADA NEWS/ DAVANAGERE/ DATE:26-07-2024
ಬೆಂಗಳೂರು: ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಪ್ರತಿ ಪುಟವೂ ಪಾರದರ್ಶಕ, ಪ್ರಾಮಾಣಿಕತೆಯಿಂದ ಕೂಡಿದೆ. ನಾನು ಎರಡನೇ ಬಾರಿ ಸಿಎಂ ಆದ ಕಾರಣಕ್ಕೆ ಹೊಟ್ಟೆ ಕಿಚ್ಚಿನಿಂದ ಬಿಜೆಪಿ- ಜೆಡಿಎಸ್ ಆರೋಪ ಮಾಡುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಣ್ಣದೊಂದು ಕಪ್ಪು ಚುಕ್ಕೆ ಇಲ್ಲದಂತೆ ರಾಜಕೀಯದ ಪಾವಿತ್ರ್ಯತೆ ಕಾಪಾಡಿಕೊಂಡಿದ್ದೇನೆ ಎಂದು ತಿಳಿಸಿದರು.
ಅಧಿವೇಶನದಲ್ಲಿ ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಆಡಳಿತ ಪಕ್ಷದವರು ಬೆಳಕು ಚೆಲ್ಲಿ ಚರ್ಚಿಸಿದರು. ಆದ್ರೆ ವಿರೋಧ ಪಕ್ಷದವರು ನೆಪಕ್ಕೂ ರಾಜ್ಯದ ಜನರ ಸಂಕಷ್ಟಗಳ ಬಗ್ಗೆ ಚಕಾರವನ್ನೇ ಎತ್ತಲಿಲ್ಲ. ಅಧಿವೇಶನದಲ್ಲಿ ವಿರೋಧ ಪಕ್ಷಗಳ ಹೊಣೆಗೇಡಿತನವನ್ನು ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಬಿಜೆಪಿ, ಜೆಡಿಎಸ್ ಹತಾಶರಾಗಿದ್ದಾರೆ. ನಾವು 135 ಸ್ಥಾನ ಗೆದ್ದ ಬಳಿಕ ರಾಜಕೀಯ ಪ್ರೇರಿತವಾದ ಹೇಳಿಕೆಗಳನ್ನು ಕೊಡ್ತಾರೆ. ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಎರಡನೇ ಬಾರಿ ಸಿಎಂ ಆಗಿರುವುದು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎರಡು ವಾರವೂ ವಾಲ್ಮೀಕಿ ನಿಗಮದ ಒಂದೇ ವಿಚಾರ ಪ್ರಸ್ತಾಪ ಆಗಿದೆ. ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಚಕಾರವನ್ನೇ ಎತ್ತಲಿಲ್ಲ. ಆಡಳಿತ ಪಕ್ಷದ ಶಾಸಕರು ರಾಜ್ಯದ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸಿ ಚರ್ಚೆ ನಡೆಸಿದರು. ಇದನ್ನೆಲ್ಲಾ ನೋಡಿದಾಗ ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಅಧಿವೇಶನವನ್ನು ದುರುಪಯೋಗ ಪಡಿಸಿಕೊಳ್ಳುವುದು ಬಿಟ್ಟರೆ ಬೇರೆ ಜನಪರವಾದ ಉದ್ದೇಶ ವಿರೋಧ ಪಕ್ಷಗಳಿಗೆ ಇರಲಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದರು.
ನಾನು ಶಾಸಕನಾಗಿ, ಮಂತ್ರಿಯಾಗಿ, ಸಿಎಂ ಆಗಿ ರಾಜಕಾರಣದಲ್ಲಿ 40 ವರ್ಷ ಅನುಭವವಿದೆ. ಇವತ್ತಿನವರೆಗೆ ನನ್ನ ಮೇಲೆ ಸಣ್ಣ ಕಪ್ಪುಚುಕ್ಕೆ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಜನರ ವಿಶ್ವಾಸ ಕಳೆದುಕೊಂಡಿರುವ ಬಿಜೆಪಿ+ಜೆಡಿಎಸ್ ಲೋಕಸಭಾ ಚುನಾವಣೆಯಲ್ಲೂ ಹಿಂದಿನ ಬಾರಿಗಿಂತ ಹೆಚ್ಚು ಸೀಟು, ಮತ ಗಳಿಸಲು ಸಾದ್ಯವಾಗಲಿಲ್ಲ. ನಮಗೆ ಕಳೆದ ಲೋಕಸಭಾ ಚುನಾವಣೆಗಿಂತ ಶೇ13 ರಷ್ಟು ಮತಗಳನ್ನು ಈ ಚುನಾವಣೆಯಲ್ಲಿ ಹೆಚ್ಚು ಗಳಿಸಿದೆವು. ಇದರಿಂದ ಹತಾಶರಾಗಿ ಮತ್ತೆ ಜನರ ವಿಶ್ವಾಸ ಗಳಿಸಲು ತಪ್ಪು ದಾರಿಯಲ್ಲಿ ವಾಮ ಮಾರ್ಗ ಹಿಡಿದಿದ್ದಾರೆ ಎಂದು ಕಿಡಿಕಾರಿದರು.