SUDDIKSHANA KANNADA NEWS/ DAVANAGERE/ DATE:18-08-2023
ಶನಿವಾರ ಸಂಭ್ರಮ: ಬೆಳಗಾಯಿತೆಂದರೆ ಶಾಲೆಗೆ ಹೋಗುವ ಮಕ್ಕಳ (Childrens’) ತಲೆಯಲ್ಲಿ ಇವತ್ತಿನ ಹೋಂವರ್ಕ್ ಏನಿತ್ತು.? ಎಲ್ಲಾ ಮಾಡಿದ್ದೀನಾ..? ಮತ್ತೆ ಏನಾದರೂ ಇದಿಯಾ..? ಅಯ್ಯೋ..ರಾತ್ರಿ ಕರೆಂಟ್ ಹೋಗಿತ್ತು, ಪದ್ಯ ಹೇಳುವುದನ್ನು ಕಲಿತಿಲ್ಲ. ಏನ್ ಮಾಡೋದು ಇವತ್ತೊಂದಿನ ಮಿಸ್ ಶಾಲೆಗೆ ಬರದೇ ಇದ್ರೆ ಸಾಕು, ನಾಳೆ ಕಲೀತೀನಿ ಅಥವಾ ಮಿಸ್ ಬಂದ್ರು ಪದ್ಯ ಕೇಳದಿದ್ರೆ ಸಾಕು ದೇವರೇ… ಅಂತ ಒಳಗೊಳಗೆ ಆತಂಕದ ಮೂಟೆಯನ್ನು ತಲೆ ತುಂಬಾ ಹೊತ್ತು, ಅದರೊಟ್ಟಿಗೆ ಪಠ್ಯಪುಸ್ತಕ, ನೋಟ್ ಬುಕ್, ಜಾಮಿಟ್ರಿ ಬಾಕ್ಸ್, ಮಳೆಗಾಲವಾದ್ದರಿಂದ ಛತ್ರಿ ಹೀಗೆ ಎಲ್ಲವನ್ನೂ ಒಳಗೊಂಡಂತೆ ಕೆ. ಜಿ.ಗಟ್ಟಲೆ ತೂಗುವ ತೂಕದ ಬ್ಯಾಗ್ ನ್ನು ಬೆನ್ನಿಗೇರಿಸಿಕೊಂಡು ಬರುವ ಮಕ್ಕಳ(Childrens’)ಲ್ಲಿ ನಗುವೆಂಬ ಆಭರಣವೇ ಮಾಯವಾಗಿ ಹೋಗಿದೆ.
ಮಕ್ಕಳ (Childrens’) ಬಾಲ್ಯದ ತುಂಟಾಟ:
ಬಾಲ್ಯದಲ್ಲಿನ ಅವರ ಕುಣಿತ, ನೆಗೆತ, ಕೇಕೆ ತಮಾಷೆ, ತುಂಟಾಟ, ಚಪ್ಪಾಳೆ ತಟ್ಟಿ ನಕ್ಕುನಲಿಯುವ ಸಂಭ್ರಮ ಇವುಗಳೆಲ್ಲಾ ಮಸುಕಾಗಿ ಪರದೆಯ ಹಿಂದೆ ಸರಿಯುತ್ತಿವೆ. ಮುಗ್ಧ ಬಾಲ್ಯದ ಆಟೋಟಗಳು ತುಕ್ಕು ಹಿಡಿಯುತ್ತಿವೆ. ಓದು – ಬರಹವಷ್ಟೇ… ಕಲಿಕೆಯ ಮಾನದಂಡ ಎಂದು ಪರಿಗಣಿಸುವ ನಾವು ಒಮ್ಮೆ ನಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುವ ಅನಿವಾರ್ಯತೆ ಇಲ್ಲಿದೆ.
ಎಷ್ಟು ಸೊಗಸಾಗಿತ್ತು…!
ಆ ಬಾಲ್ಯ… ಎಷ್ಟು ಸೊಗಸಾಗಿತ್ತು.. ಅಜ್ಜ – ಅಜ್ಜಿಯರ ಕಥೆಗಳು, ಅಕ್ಕ- ಅಣ್ಣಂದಿರೊಟ್ಟಿಗೆ ಪೈಪೋಟಿಗಿಳಿಯುವುದು, ತಮ್ಮ – ತಂಗಿಯರನ್ನು ಹೊತ್ತು ಮೆರೆಸುವುದು, ಅಪ್ಪ – ಅಮ್ಮನ ಮಡಿಲಲ್ಲಿ ಮಲಗಿ ಸುಖಿಸುವುದು, ರಜೆ ಎಂದರೆ ಸಾಕು, ಅಜ್ಜ- ಅಜ್ಜಿ ಊರಿಗೆ ಹೋಗಿ ಅಲ್ಲಿನ ಕೆರೆ, ತೊರೆ, ಕಾಲುವೆಗಳಲ್ಲಿ ಮೀನಿನಂತೆ ಸರಾಗವಾಗಿ ತೇಲುತ್ತಾ – ಮುಳುಗುತ್ತಾ, ಈಜುವುದು . ತೋಟ, ಗದ್ದೆ, ತೋಪು, ಹೊಲದ ಬದುಗಳಲ್ಲಿ ತರೇವಾರಿ ಆಟವಾಡುತ್ತಾ ಹಕ್ಕಿಗಳಂತೆ ಹಾರಿ, ಬಣ್ಣ- ಬಣ್ಣದ ಚಿಟ್ಟೆಗಳಂತೆ ಜಿಗಿಯುವುದು. ಹಸಿರು ಹಾಸಿನ ಗಿಡ,ಮರ, ಬಳ್ಳಿಗಳನ್ನು ತಬ್ಬಿ ಕುಣಿಯುವ ಆ ಮೊಗದಲ್ಲಿ ಯಾವುದೇ ಆತಂಕ, ಭಯದ ಛಾಯೆಗಳು ಮೂಡುತ್ತಿರಲಿಲ್ಲ.
ಸುಂದರ ಬದುಕೊಂದು ಕಾವ್ಯ:
ಬಾಲ್ಯದ ಸಂಭ್ರಮ ಸ್ವಚ್ಛಂದ ಹಕ್ಕಿಗಳಂತೆ ಮನಸೋ ಇಚ್ಛೆ ಹಾಡಿ ಕುಣಿಯುತ್ತಾ.. ಅನುಭವ ಜನ್ಯ ಕಲಿಕೆಯ ಸವಿಯೊಂದಿಗೆ ಹಿರಿಯರ ಮಾರ್ಗದರ್ಶನ, ಪ್ರೋತ್ಸಾಹದಲ್ಲಿ ತೆರೆದುಕೊಳ್ಳುತ್ತ ಸಾಗುವ ಬದುಕು, ಮುಗ್ಧ ಮನಸಿನ ನಾಳೆಯ ದಿನಗಳಿಗೆ ಸುಂದರ ರಂಗಸಜ್ಜಿಕೆಯಂತಿರುತ್ತಿತ್ತು. ಇಂತಹ ಸಮೃದ್ಧ ಬಾಲ್ಯವನ್ನು ಪಡೆದ ಮಗು ತನ್ನ ಮುಂದಿನ ಬದುಕನ್ನು ಉತ್ತಮ ಸಾತ್ವಿಕ ನೆಲೆಯಲ್ಲಿ ವಿಸ್ತರಿಸಿಕೊಳ್ಳುತ್ತಾ “ಸುಂದರ ಬದುಕೊಂದು ಕಾವ್ಯ” ಎಂಬಂತೆ ಬದುಕಿನ ಎಲ್ಲಾ ತಿರುವುಗಳಲ್ಲಿ ಸದೃಢವಾಗಿ ಸಾಗುವ ಸಾಮರ್ಥ್ಯವನ್ನು ಪಡೆಯುತ್ತಿತ್ತು.
ಒತ್ತಡದಲ್ಲಿ ಮಕ್ಕಳು (Childrens’) :
ಆದರೆ ಇಂದಿನ ಮಕ್ಕಳು ಇಂತಹ ಯಾವುದೇ ಸಂಭ್ರಮವನ್ನು ಅನುಭವಿಸಲಾಗದಂತಹ ಸ್ಥಿತಿಯಲ್ಲಿದ್ದಾರೆ ಶಾಲೆ, ಟ್ಯೂಷನ್, ಹೋಮ್ ವರ್ಕ್ ಇಂತಹ ಕಟ್ಟುನಿಟ್ಟಿನ ಟೈಮ್ ಟೇಬಲ್ ಜೊತೆಯಲ್ಲಿ ಹೊಂದಾಣಿಕೆ ಮಾಡಿಕೊಂಡು, ಬೆಳಗ್ಗೆಯಿಂದ ರಾತ್ರಿಯವರೆಗೂ ಸಣ್ಣ ವಿರಾಮವನ್ನು ಪಡೆಯದಂತಹ ಒತ್ತಡದಲ್ಲಿ ಮಕ್ಕಳು ಸಾಗುತ್ತಿದ್ದಾರೆ. ಮಗು ಕೇವಲ ಅಂಕಗಳಿಕೆಯ ಯಂತ್ರವಲ್ಲ,ಭಾವನಾತ್ಮಕವಾಗಿ ಬೆಸೆಯುವ, ಬೆಳೆಯುವ ಜೀವಸಂಪತ್ತು. ಇಂತಹ ಸಂಪನ್ಮೂಲ ನಮಗೆ ನೈಜವಾಗಿ, ವೈವಿಧ್ಯಮಯಪೂರ್ಣವಾಗಿ ಲಭಿಸಿದೆ.
ಬ್ಯಾಗ್ ರಹಿತ ದಿನ:
ಆದರೆ ನಾವು ಅದನ್ನು ಒಂದು ಚೌಕಟ್ಟಿಗೆ ಒಳಪಡಿಸಿ,ಪುಸ್ತಕದ ಹುಳುವನ್ನಾಗಿಸಿ ಪಠ್ಯೇತರ ಚಟುವಟಿಕೆಗಳನ್ನು ನಿರ್ಲಕ್ಷಿಸಿ, ಸಂಕುಚಿತಗೊಳಿಸುವುದರೊಟ್ಟಿಗೆ ಭಾವನಾತ್ಮಕ ಮತ್ತು ಭೌತಿಕ ವಲಯದಲ್ಲಿ ಸೀಮಿತ ಅವಕಾಶಗಳನ್ನು ನೀಡಿ ಬಾಲ್ಯದ ಹಸಿ – ಹಸಿ ಭಾವನೆಗಳನ್ನು ಚಿವುಟುತ್ತಿದ್ದೇವೆ. ಹೀಗೆ ಭೌತಿಕ ಮತ್ತು ಮಾನಸಿಕ ಒತ್ತಡದ ಭಾರವನ್ನು ಹೊತ್ತು ಬರುವ ಮಕ್ಕಳಿಗೆ ತಿಂಗಳಲ್ಲಿ ಒಂದು ದಿನವಾದರೂ ಅಂದರೆ ಪ್ರತಿ ತಿಂಗಳು ಮೂರನೇ ಶನಿವಾರದಂದು ಆಯೋಜಿಸುವ ಚಟುವಟಿಕೆ ಇಂತಹ ಭಾರದಿಂದ ಮುಕ್ತಿಗೊಳಿಸುವಂತಹ ಇಲಾಖೆಯ ಯೋಜನೆಯಾದ “ಸಂಭ್ರಮ ಶನಿವಾರ “, “ಬ್ಯಾಗ್ ರಹಿತ ದಿನ ” ಅಭಿನಂದನಾರ್ಹ ಹಾಗೂ ಸ್ವಾಗತಾರ್ಹವಾಗಿದೆ.
ಅಕ್ಷರಕ್ಷಃ “ಮಕ್ಕಳ (Childrens’) ಶನಿವಾರ”
ಹುಟ್ಟಿದ ಪ್ರತಿಯೊಂದು ಮಗುವು ತನ್ನದೇ ಆದಂತಹ ವೈಶಿಷ್ಟ್ಯಪೂರ್ಣ ಪ್ರತಿಭೆಯನ್ನು ಹೊಂದಿದ್ದು ಅಭಿವ್ಯಕ್ತಿಗಾಗಿ ಸದಾವಕಾಶವನ್ನು ಕಾಯುತ್ತಿರುತ್ತದೆ. ಕೆಲವೊಂದು ಮಕ್ಕಳಿಗೆ ಪಠ್ಯಪುಸ್ತಕ ಓದುವುದು ಕಷ್ಟವಾಗಿರಬಹುದು. ಆದರೆ ಪ್ರಕೃತಿ ಮತ್ತು ಸಮುದಾಯದೊಂದಿಗೆ ಆಪ್ತವಾಗಿ ಬೆರೆಯುವ ಕೌಶಲ್ಯ ಅತ್ಯುತ್ತಮವಾಗಿರುತ್ತದೆ. ಇಂತಹ ಮಕ್ಕಳು ಒಗಟು,ಕಥೆ,ಹಾಡು, ನೃತ್ಯ, ಚಿತ್ರಕಲೆ, ರಂಗೋಲಿ, ಮಣ್ಣಿನಮಾದರಿ ತಯಾರಿಕೆ, ನಾಟಕ,ಸಿನಿಮಾ ಡೈಲಾಗ್, ಮಿಮಿಕ್ರಿ, ಕರಕುಶಲ ವಸ್ತುಗಳ ತಯಾರಿಕೆ ಹೀಗೆ ಹತ್ತುಹಲವು ಕೌಶಲ್ಯತೆಯಲ್ಲಿ ನೈಪುಣತೆಯನ್ನು ಹೊಂದಿರುತ್ತಾರೆ.
ಈ ಸುದ್ದಿಯನ್ನೂ ಓದಿ:
Ambulance: ಸಾವಿರಾರು ಜನರ ಜೀವ ರಕ್ಷಿಸಿದ್ದ ಆಂಬ್ಯುಲೆನ್ಸ್ ಆಪದ್ಬಾಂಧವ: ಜೀವರಕ್ಷಕನ ಸಾವು, ಮನಮಿಡಿಯುವ ಸ್ಟೋರಿ… ವಿಧಿಯ ಘೋರ ನರ್ತನಕ್ಕೆ ಕುಟುಂಬಕ್ಕೆ ಬರಸಿಡಿಲು
ಈ ತರಹದ ಮಕ್ಕಳನ್ನು ನಾವು ಕೇವಲ ಪಠ್ಯಕ್ಕೆ ಸೀಮಿತಗೊಳಿಸಿ, ಅವರನ್ನು ಅಂಕಗಳ ಮಾಪನದಿಂದ ಅಳೆಯುವುದು ಸೂಕ್ತವಲ್ಲ. ಇಂತಹ ಮಕ್ಕಳ ಕೌಶಲ್ಯಾಭಿವೃದ್ಧಿಗಾಗಿಯೇ ಎಂಬಂತೆ ರೂಪುಗೊಂಡಿರುವ ಇಲಾಖೆಯ ಹಲವಾರು ಕಾರ್ಯಕ್ರಮಗಳಲ್ಲಿ ಸಂಭ್ರಮ ಶನಿವಾರವೂ ಒಂದು. ಇದು ಅಕ್ಷರಕ್ಷ: “ಮಕ್ಕಳ ಶನಿವಾರ” ವಾಗಿದೆ.
ಶಿಕ್ಷಕರ ಪಾತ್ರ ಮಹತ್ವದ್ದು:
ಮಕ್ಕಳಲ್ಲಿ ಪರಿಣಾಮಕಾರಿಯಾದ ಆತ್ಮವಿಶ್ವಾಸ , ಉತ್ತಮ ನಾಗರೀಕ ಪ್ರಜ್ಞೆಯನ್ನು ಮೂಡಿಸುವಂತಹ, ಆರೋಗ್ಯವಂತ ನಾಳೆಗಾಗಿ, ಮಕ್ಕಳ ಹಕ್ಕುಗಳ ಸಹ ಪಯಣಕ್ಕಾಗಿ, ಸ್ವತ: ಅರಿವು – ಅನುಭವದ ಮೂಸೆಯಲ್ಲಿ ಅರಳುವ ಪ್ರತಿಭೆಯ ಪೋಷಣೆಗಾಗಿ, ಯೋಜನೆಯನ್ನು ರೂಪಿಸುವುದು, ಸಾರಾಂಶೀಕರಿಸುವಂತಹ ಕೌಶಲ್ಯ ಅಭಿವೃದ್ಧಿಗಾಗಿ, ಹಿಂಜರಿಕೆಯ ಸ್ವಭಾವವನ್ನು ಹಿಂದೆಸರಿಸಿ , ವೈಜ್ಞಾನಿಕ, ತಾರ್ಕಿಕ, ತಾಂತ್ರಿಕಯೋಜಿತ ಚಟುವಟಿಕೆಗಳ ಅನುಷ್ಠಾನಕ್ಕಾಗಿ, ನಿರಾತಂಕವಾಗಿ ತನಗೆ ಬೇಕಾದ ಚಟುವಟಿಕೆಯಲ್ಲಿ ಭಾಗವಹಿಸಿ ತನ್ನ ಕೌಶಲ್ಯಯುಕ್ತ ಕಲಾವಂತಿಕೆಯನ್ನು ಪ್ರದರ್ಶಿಸಲು ಸೂಕ್ತ ದಿನವಾಗಿದೆ. ಮಕ್ಕಳಲ್ಲಿನ ವಿಶಿಷ್ಟ ಕೌಶಲ್ಯವನ್ನು ಗುರುತಿಸುವಲ್ಲಿ ಶಿಕ್ಷಕರಾದ ನಮ್ಮ ಪಾತ್ರವೂ ತುಂಬಾ ಮಹತ್ತರವಾಗಿದೆ.
ಕ್ರಿಯಾತ್ಮಕ ಚಟುವಟಿಕೆ ಮಕ್ಕಳಿಗೆ ಬೇಕು:
ಇಡೀ ದಿನ ಪಠ್ಯಪುಸ್ತಕವಿಲ್ಲದೆ ಮಕ್ಕಳನ್ನು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿ ಅವರನ್ನು ನಿಭಾಯಿಸುವ ಜಾಣ್ಮೆಯೂ ನಮ್ಮಲ್ಲಿರಬೇಕು.ಸೂಕ್ಷ್ಮ ಗ್ರಹಿಕೆಯಿಂದ ಮಗುವನ್ನು ಅವಲೋಕಿಸಿ ಅವನ ಆಸಕ್ತಿಯನ್ನು ಅರಿತು ಅಂತಹದ್ದೆ ಅಭಿರುಚಿಯುಳ್ಳ ಮಕ್ಕಳನ್ನು ಒಂದೊಂದು ಗುಂಪುಗಳಾಗಿ ರಚಿಸಿ, ಅವರವರ ಸೃಜನಶೀಲತೆಗೆ ತಕ್ಕಂತೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅನುವುಮಾಡಿಕೊಡಬೇಕು.ಇಂತಹ ಸಮಯದಲ್ಲಿ ಮಕ್ಕಳು ಗುಂಪಿನಲ್ಲಿ ಚರ್ಚಿಸಿ, ತೀರ್ಮಾನಿಸಿ, ವಸ್ತುಗಳನ್ನು ಮುಟ್ಟಿ ,ಅವಲೋಕಿಸಿ ಅವರೇ ತೀರ್ಮಾನಿಸಿದಂತೆ ನಿರ್ಣಯಕ್ಕೆ ಬಂದು ಚಟುವಟಿಕೆಯಲ್ಲಿ ಪಾಲ್ಗೊಳ್ಳಲಿ.
ಅವರ ಅಭಿಪ್ರಾಯ, ನಿರ್ಣಯ, ಶಿಸ್ತು, ಸಮಯ ಪ್ರಜ್ಞೆ, ಉತ್ತಮ ಸಂವಹನ ಕೌಶಲ ಮತ್ತು ಭಾಷಾ ಕೌಶಲವನ್ನು ವೃದ್ಧಿಸುವಂತಿರಲಿ ಹಾಗೂ ಸಾರಾಂಶೀಕರಿಸುವಂತೆ ಸರಳವಾಗಿದ್ದರೆ ಸೂಕ್ತ.ಇಲ್ಲಿ ಶಿಕ್ಷಕ ಕೇವಲ ಸುಗಮಕಾರರಾಗಿದ್ದು ಅವರಿಗೆ ಅವಶ್ಯವೆನಿಸಿದಾಗ ಸಲಹೆ ನೀಡಬೇಕು.ವಿಕಲಚೇತನ ಮಕ್ಕಳನ್ನು , ಹಿಂಜರಿಕೆಯುಳ್ಳ ಮಕ್ಕಳನ್ನು ಮೂದಲಿಸುವಂತಹ, ಲಿಂಗತಾರತಮ್ಯ ಮಾಡುವಂತಹ, ಅವರ ಆಸಕ್ತಿಯನ್ನು ಕುಂದಿಸುವಂತಹ ಮಾತುಗಳನ್ನಾಡದೆ ಧನಾತ್ಮಕವಾಗಿ ಹೇಳುತ್ತಾ ಅವರನ್ನು ಚಟುವಟಿಕೆಗೆ ಬೆಂಬಲಿಸುವಂತಹ ಮಾತುಗಳು ನಮ್ಮದಾಗಿದ್ದರೆ ಒಳಿತು.
ಮುಂಜಾಗ್ರತೆ ವಹಿಸಬೇಕು ಶಿಕ್ಷಕರು:
ಹಂತಗಳಿಗನುಗುಣವಾಗಿ ವರ್ಗವಾರು ಮಕ್ಕಳು ಗುಂಪಿನಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ಗುಂಪಿನ ಎಲ್ಲಾ ಮಕ್ಕಳು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ, ಸ್ಥಳೀಯ ಸಂಪನ್ಮೂಲಗಳ ಬಳಕೆಯನ್ನು ಮಾಡುವಂತೆ ಪ್ರೇರೇಪಿಸಬೇಕು. ಅವರ ಉತ್ತಮ ಭಾಗವಹಿಸುವಿಕೆಗೆ ಪ್ರಶಂಸಿಸುತ್ತಿರಬೇಕು. ಆಯೋಜಿಸುವ ಚಟುವಟಿಕೆಗಳು ಮಕ್ಕಳ ಭೌತಿಕ, ಮಾನಸಿಕ ಮತ್ತು ಭಾವನಾತ್ಮಕ ವಲಯವನ್ನು ಕೆರಳಿಸುವ, ಉದ್ರೇಕಿಸುವ ಹಾಗೂ ಹಾನಿಯನ್ನುಂಟು ಮಾಡುವಂತಹ ಅಪಾಯಕಾರಿಯಾದ ರೀತಿಯಲ್ಲಿರದಂತೆ ಶಿಕ್ಷಕರಾದ ನಾವು ಮುಂಜಾಗ್ರತೆ ವಹಿಸಬೇಕು.
ಇಂತಹ ಎಲ್ಲಾ ಅಂಶಗಳನ್ನು ಆಧರಿಸಿ ಹಿಂದಿನ ದಿನವೇ ಪೂರ್ವಯೋಜಿತ ಗುಂಪುಗಳ ರಚನೆ, ಆಯೋಜಿಸುವ ಚಟುವಟಿಕೆಗಳ ರೂಪುರೇಷೆ , ಚಟುವಟಿಕೆಗೆ ಬೇಕಾದ ಸಾಮಗ್ರಿಗಳು, ಹಾಗೂ ಸೂಕ್ತ ಜಾಗವನ್ನು ತರಗತಿ ಕೋಣೆಯ ಒಳಗೆ ಅಥವಾ ಹೊರಗಡೆ ಮೈದಾನ) ಸಹ ಹಿಂದಿನ ದಿನವೆ ನಿರ್ಧರಿಸಿಕೊಂಡಿದ್ದರೆ ಮಾತ್ರ ಪರಿಣಾಮಕಾರಿಯಾದಂತಹ ಸಂಭ್ರಮದ ಕಲಿಕೆಯಾಗುತ್ತದೆ.
ಮಗು ತಾನೆ ಮೊದಲನೆಯ ಸ್ಥಾನದಲ್ಲಿ ನಿಂತು ಪ್ರಾರಂಭದಿಂದ ಕೊನೆಯವರೆಗೂ,ಅನುಭವದ ಮೂಲಕ ಕಲಿಯುವುದರಿಂದ ಇಲ್ಲಿನ ಕಲಿಕೆ ಪರಿಣಾಮಕಾರಿಯಾಗುವುದರ ಜೊತೆಗೆ, ನೈಜಸ್ವರೂಪದ್ದಾಗಿರುತ್ತದೆ. ಮಕ್ಕಳಿಗೆ
ಆತ್ಮವಿಶ್ವಾಸವನ್ನು ಕಟ್ಟಿಕೊಡುವ, ತನ್ನಲ್ಲಿರುವ ಸುಪ್ತ ಆಲೋಚನೆಗಳಿಗೆ ಗರಿಮೂಡಿಸುವ, ಹಲವಾರು ಸೃಜನಾತ್ಮಕ ಯೋಜನೆಗಳನ್ನು ಅನಾವರಣಗೊಳಿಸುವ ಭೂಮಿಕೆಯಾಗುತ್ತದೆ.
ಸಮುದಾಯದ ಪಾತ್ರವೂ ಮುಖ್ಯ:
ಹೀಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಇಲಾಖೆ ಮತ್ತು ಶಿಕ್ಷಕರ ಪಾತ್ರವಷ್ಟೇ ಮುಖ್ಯವಲ್ಲ. ವೈಶಿಷ್ಟ್ಯಪೂರ್ಣ ಯೋಜನೆಗಳಲ್ಲಿ ಸಮುದಾಯ ಮತ್ತು ಪಾಲಕರ ಪಾತ್ರವು ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ. ಇಂತಹ ದಿನಗಳಲ್ಲಿ ಪಾಲಕರು ಮಕ್ಕಳ ಕ್ರಿಯಾಶೀಲ ಚಟುವಟಿಕೆಗೆ ಬೆಂಬಲಿಸಿ ಸಹಕಾರ ನೀಡಿ ಉತ್ತೇಜಿಸಬೇಕು. ಅವಶ್ಯಕತೆ ಇದ್ದಾಗ ಶಿಕ್ಷಕರನ್ನು ಭೇಟಿಯಾಗಿ ಆರೋಗ್ಯಕರ ಚರ್ಚೆಯಲ್ಲಿ ಪಾಲ್ಗೊಂಡು ಸಹಕರಿಸಬೇಕು. ಇಂತಹ ಯೋಜನೆಗಳನ್ನು ಶಿಕ್ಷಕರು ಪಾಲಕರಿಗೆ ಮತ್ತು ಎಸ್. ಡಿ. ಎಂ. ಸಿ. ಯವರ ಗಮನಕ್ಕೆ ತಂದರೆ ಉದ್ದೇಶ ಇನ್ನಷ್ಟು ಪರಿಪೂರ್ಣತೆಯನ್ನು ಪಡೆಯುತ್ತದೆ. ಹಾಗಾದಾಗ ಮಾತ್ರವೆ ಮಗು ಶಿಕ್ಷಕ, ಸಹಪಾಠಿ, ಸಮುದಾಯ, ಪಾಲಕರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡು ಕಲಿಯಲು ಹವಣಿಸುತ್ತದೆ.
ತಾರಾಲೋಕ ಸೃಷ್ಟಿಸಲು ಬೀಜ ಬಿತ್ತೋಣ:
ತನ್ನ ಆಸಕ್ತಿಯುಕ್ತ ಚಟುವಟಿಕೆಯಲ್ಲಿ ಪಾಲ್ಗೊಂಡು ವಿವಿಧ ಕ್ಷೇತ್ರದಲ್ಲಿ ಸಾಧನೆಗೈಯುವುದರ ಜೊತೆಗೆ, ಇಡೀ ವಿಶ್ವವನ್ನೇ ಗುರುವಾಗಿ ಸ್ವೀಕರಿಸಿ ಭಾವನಾತ್ಮಕ ವಲಯದಲ್ಲಿ ವಿಹರಿಸುತ್ತಾ ತನ್ನ ಮುಗ್ಧ ನಗುವಿನೊಂದಿಗೆ ಕನಸುಗಳ ಹಂದರದಲ್ಲಿ ವೈಭವೀಕರಿಸುವಂತಹ ತಾರೆಯಾಗಿ ಮಿನುಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಬನ್ನಿ ನಾವು ನೀವೆಲ್ಲಾ ಸೇರಿ ಇಂತಹ ತಾರಾಲೋಕವನ್ನು ಸೃಜಿಸಲು ಬೆಳಕಿನ ಬೀಜಗಳನ್ನು ಬಿತ್ತೋಣ.
ಶನಿವಾರ ಸಂಭ್ರಮ. ಸರ್ಕಾರಿ ಶಾಲೆಗಳಲ್ಲಿನ ಅದ್ಭುತ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮಕ್ಕಳ ಇಡೀ ದಿನದ ಚಟುವಟಿಕೆ ತುಂಬಾ ಚೆನ್ನಾಗಿರುತ್ತದೆ. ಈ ಕುರಿತಾದ ವಿಶೇಷ ಲೇಖನ ಬರೆದಿದ್ದಾರೆ ಶಿಕ್ಷಕಿ ಗೀತಾಮಂಜು ಬೆಣ್ಣೆಹಳ್ಳಿ ಅವರು.
ಲೇಖಕಿ: ಗೀತಾಮಂಜು ಬೆಣ್ಣೆಹಳ್ಳಿ, ಶಿಕ್ಷಕಿ