Home ದಾವಣಗೆರೆ ಸಿದ್ದರಾಮಯ್ಯ ಸಮಾಜವಾದಿಯಲ್ಲ, ಮಜಾವಾದಿ: ದಾವಣಗೆರೆಯಲ್ಲಿ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ
ದಾವಣಗೆರೆಬೆಂಗಳೂರು

ಸಿದ್ದರಾಮಯ್ಯ ಸಮಾಜವಾದಿಯಲ್ಲ, ಮಜಾವಾದಿ: ದಾವಣಗೆರೆಯಲ್ಲಿ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

Share
ದಾವಣಗೆರೆ
Share

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅನ್ನರಾಮಯ್ಯ ಅಲ್ಲ. ಅವರೊಬ್ಬ ಡೋಂಗಿ ರಾಜಕಾರಣಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವ್ಯಂಗ್ಯವಾಡಿದರು.

ಇಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಅಕ್ಕಿ ಬಿಟ್ಟು ಬೇರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಏನೂ ಕೊಟ್ಟಿಲ್ಲ. ಅವರು ಕನ್ನ ರಾಮಯ್ಯ. ಎಲ್ಲಕ್ಕೂ ಕನ್ನ ಹಾಕ್ತ ಇದ್ದಾರೆ. ದಲಿತರ ಹಣವನ್ನೂ ಅವರು ಕೊಳ್ಳೆ ಹೊಡೆದರು. ಸಿದ್ದರಾಮಯ್ಯ ಹೇಳುವುದೊಂದು ಮಾಡುವುದೊಂದು. ಒಂದು ಒಂದು ಕಡೆ ಘೋಷಣೆ, ಮತ್ತೊಂದು ಕಡೆ ಶೋಷಣೆ ಅವರ ನೀತಿ. ಅವರ ಈ ಡಬಲ್ ಸ್ಟ್ಯಾಂಡರ್ಡ್‍ನಿಂದಾಗಿಯೇ ಜನ ತಿರಸ್ಕರಿಸಿದರು ಎಂದರು.

ದಲಿತರಿಗೆ 42 ಸಾವಿರ ಕೋಟ ಇಟ್ಟಿದ್ದೇನೆ ಅಂತ ಹೇಳಿದರು. ಅದರ ಹಣವನ್ನು ಗ್ಯಾರಂಟಿಗಳಿಗೆ ಬಳಸಿದರು. ಎಲ್ಲಾ ಕಡೆ ಸುಳ್ಳು ಹೇಳಿದರು. ಆದರೆ ಅವರ ಹಣ ಬೇರೆ ಕಡೆ ಬಳಸಿ ದಲಿತರಿಗೆ ಮೋಸ ಮಾಡಿದರು ಎಂದು ಹೇಳಿದರು. 56 ಸಾವಿರ ಖಾಲಿ ಹುದ್ದೆ ತುಂಬುತ್ತೇನೆ ಅಂತ ಸಿದ್ದರಾಮಯ್ಯ ಹೇಳಿದರು. ಆದರೆ ರಾಜ್ಯದಲ್ಲಿ ನಾಲ್ಕು ಲಕ್ಷ ಹುದ್ದೆ ಖಾಲಿ ಇವೆ. ಅವರನ್ನು ಯಾಕೆ ತುಂಬಿಲ್ಲ. ಅದಕ್ಕೆ ಯಾರ ಅನುಮತಿ ಬೇಕು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಅವರ ಅನುಮತಿ ಬೇಕೇ ಎಂದು ಪ್ರಶ್ನಿಸಿದರು.

ಬಾಗಲಕೋಟೆಯಲ್ಲಿ ರಸ್ತೆಗಳಿಗೆ ಕೆಂಪುಮಣ್ಣು ಹಾಕಿ ಮುಚ್ಚಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನೂ ಜನರು ಕೆಂಪು ಮಣ್ಣು ಹಾಕಿ ಮುಚ್ಚುತ್ತಾರೆ. ರಾಜ್ಯದ ಜನ ಕಾಂಗ್ರೆಸ್ ಆಡಳಿತದಿಂದ ಕೋಪಗೊಂಡಿದ್ದಾರೆ. ಈ ಬಾರಿಯ ಎರಡು ಸೀಟು ಮಾತ್ರವಲ್ಲ ಮುಂದಿನ ಬಾರಿಯ ಚುನಾವಣೆಯಲ್ಲೂ ಕಾಂಗ್ರೆಸ್ ಸ್ಥಿತಿ ಗಂಭೀರವಾಗುತ್ತೆ ಅನ್ನೋದು ಸಿದ್ದರಾಮಯ್ಯ ಅವರಿಗೆ ಮನದಟ್ಟಾಗಿದೆ. ಯಾಕೆಂದರೆ ಸರ್ಕಾರ ಕೆಟ್ಟ ಸ್ಥಿತಿಯಲ್ಲಿದೆ. ಫಲಿತಾಂಶ ಏನೇ ಬರಬಹುದು ಆದರೆ ಸಿಎಂ ಮಾತ್ರ ಊಟ ತಿಂಡಿ ಬಿಟ್ಟಿದ್ದಾರೆ. ರಾಜ್ಯದಲ್ಲಿ ನಾವು ನಡೆದುಕೊಂಡ ರೀತಿ ಸರಿಯಾಗಿಲ್ಲ ಅಂತ ಅವರಿಗೆ ಮನದಟ್ಟಾಗಿದೆ ಎಂದರು.

ಸಿದ್ದರಾಮಯ್ಯ ಅವರು ಹಳ್ಳಿಗೆ ಹೋಗುವ ಮೊದಲು ದೇವಸ್ಥಾನದ ಮುಂದೆ ಒತ್ತಾಯದ ಮೇರೆ ಜನ ಸೇರಿಸಿ ಭಾಷಣ ಮಾಡೋದು. ಹಳ್ಳಿಗೆ ಹತ್ತು ಲಕ್ಷ ಹಣ ಕೊಡೋದು ಇದೇ ಇವರ ಕೆಲಸ ಎಂದು ನುಡಿದರು. ಒಳ ಮೀಸಲಾತಿಯನ್ನು ಹಾಳು ಮಾಡಿ ಎಲ್ಲಾ ಪರಿಶಿಷ್ಟ ಜಾತಿಯವರನ್ನು ಬೀದಿಯಲ್ಲಿ ನಿಲ್ಲಿಸಿರುವ ದಲಿತರು ಯಾಕೆ ಕಾಂಗ್ರೆಸ್‍ಗೆ ಓಟು ಹಾಕಬೇಕು. ಅವರ ಬಳಿ ಓಟು ಕೇಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಬಸವರಾಜ ಬೊಮ್ಮಾಯಿ ಅವರು, ಎಸ್‍ಟಿ ಮತ್ತು ಎಸ್‍ಸಿಗಳಿಗೆ ಸೂಕ್ತ ಮೀಸಲಾತಿ ಹೆಚ್ಚಿಸಿದ್ದರು. ಅದನ್ನೂ ಸರಿಯಾಗಿ ಈಗಿನ ಕಾಂಗ್ರೆಸ್ ಸರ್ಕಾರ ಪಾಲಿಸಲಿಲ್ಲ. ನ್ಯಾಯಾಲಯಕ್ಕೆ ಹೇಳಲು ಇವರಿಗೆ ಬುದ್ಧಿ ಇಲ್ಲ. ಪರಿಶಿಷ್ಟ ವರ್ಗಕ್ಕೆ ಜಾತಿ ಆಧಾರಿತವಾಗಿ ಮೀಸಲಾತಿ ಕೊಡಬೇಕು ಎಂಬುದು ಇದೆ. ಈ ಬಗ್ಗೆ ಪರಿಜ್ಞಾನವೇ ಕಾಂಗ್ರೆಸ್‍ಗೆ ಇಲ್ಲ ಎಂದರು.

ಈ ಕ್ಷೇತ್ರದಲ್ಲಿ ಮುಸ್ಲಿಮರ ಸ್ಥಿತಿ ಕೇಳುವಂತೆಯೇ ಇಲ್ಲ. ಇಲ್ಲಿ ಅವರು ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ನಂಬಿದ್ದರು. ಬಿಜೆಪಿ ಬಂದರೆ ಹಾಗೆ ಮಾಡ್ತಾರೆ ಹೀಗೆ ಮಾಡ್ತಾರೆ ಅಂತ ಕಾಂಗ್ರೆಸ್‍ನವರು ಸುಳ್ಳು ಹೇಳಿದ್ದರು. ಕಳೆದ 12 ವರ್ಷದಿಂದ ನರೇಂದ್ರ ಮೋದಿ ಅವರು ದೇಶದಲ್ಲಿ ಆಡಳಿತ ನಡೆಸುತ್ತಾ ಇದ್ದಾರೆ. ಸಂವಿಧಾನ ಎಲ್ಲರಿಗೂ ಒಂದೇ. ಸಮಾನ ಹಕ್ಕು ಕರ್ತವ್ಯ ನೀಡಿದೆ. ಬಿಜೆಪಿ ಸರ್ಕಾರ ಯಾರಿಗೂ ಅನ್ಯಾಯ ಮಾಡಲ್ಲ. ದಲಿತರನ್ನು ಕೂಡಿಸುವ, ಶಕ್ತಿ ತುಂಬಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿದೆ ಎಂದರು.

ದಾವಣಗೆರೆಯ ಈ ಚುನಾವಣೆಯಲ್ಲಿ ಮುಸ್ಲಿಮರ ಸ್ವಾಭಿಮಾನದ ಪ್ರಶ್ನೆ ಬಂದಿದೆ. ಅವರ ಸ್ವಾಭಿಮಾನವನ್ನು ಅವರೇ ಕಾಪಾಡಿಕೊಳ್ಳಬೇಕು. ಕಾಂಗ್ರೆಸ್ ಸೋತರೆ ಮಾತ್ರ ಮುಸ್ಲಿಮರ ಸ್ವಾಭಿಮಾನ ಗೆಲ್ಲುತ್ತೆ. ಅದನ್ನು ಅವರು ಅರ್ಥ ಮಾಡಬೇಕು. ಈ ಬಾರಿ ಕಾಂಗ್ರೆಸ್ ಸೋಲಿಸುತ್ತೇನೆ ಅಂತ ಮುಸ್ಲಿಮರೇ ಎಲ್ಲಾ ಕಡೆ ಹೇಳ್ತಾ ಇದ್ದಾರೆ ಎಂದರು.

ಸಿದ್ದರಾಮಯ್ಯ ಅವರು ಸಮಾಜವಾದಿ ಅಲ್ಲ. ಅವರೊಬ್ಬ ಮಜಾವಾದಿ. ಅವರು ಕಾಂಗ್ರೆಸ್ ಬಾಗಿಲು ತುಳಿಯುವವರೆಗೆ ನಾನೂ ಅವರ ಅಭಿಮಾನಿಯಾಗಿದ್ದೆ. ಜನತಾ ದಳದಲ್ಲಿ ಇದ್ದಾಗ ಚೆನ್ನಾಗಿದ್ದರು. ಆನಂತರ ಬದಲಾದರು. ಅಪ್ಪಟ ಕಾಂಗ್ರೆಸ್ ನವರು ಹೇಳುವ ಸುಳ್ಳಿಗಿಂತ ಹೆಚ್ಚು ಸುಳ್ಳನ್ನು ಸಿದ್ದರಾಮಯ್ಯ ಹೇಳ್ತಾರೆ. ಏಕೆಂದರೆ ಅವರು ಬದುಕಬೇಕು. ಸುಳ್ಳು ಹೇಳದಿದ್ದರೆ ಹಾಗೂ ವಂಚನೆ ಮಾಡದಿದ್ರೆ ಕಾಂಗ್ರೆಸ್‍ನಲ್ಲಿ ಬದುಕಲು ಆಗಲ್ಲ ಎಂದು ಹೇಳಿದರು.

ಬಿಜೆಪಿ ದಲಿತರನ್ನು ಒಡೆದರು ಅಂತ ಗೃಹ ಸಚಿವ ಪರಮೇಶ್ವರ್ ಅವರು ಸುಳ್ಳು ಹೇಳಿದರು. ಅವರು ಇಷ್ಟು ಚೆನ್ನಾಗಿ ಸುಳ್ಳು ಹೇಳ್ತಾರೆ ಅಂತ ಅಂದುಕೊಂಡಿರಲಿಲ್ಲ. ಅವರು ನಾಯಕ ಅಲ್ಲ ಖಳನಾಯಕ. ಒಳಮೀಸಲಾತಿ ಸಮಸ್ಯೆಯನ್ನು ಸಚಿವ ಮಹದೇವಪ್ಪ ಅವರೇ ಬಗೆಹರಿಸಬೇಕಿತ್ತು. ಅವರಿಗೆ ಆ ಜ್ಞಾನವೇ ಇಲ್ಲ. ಇಂದು ಪರಿಶಿಷ್ಟ ವರ್ಗಗಳು ಮೀಸಲಾತಿಯಲ್ಲಿ ನ್ಯಾಯ ಸಿಗದೆ ಬೀದಿಯಲ್ಲಿ ನಿಂತಿದ್ದರೆ ಅದಕ್ಕೆ ಕಾರಣ ಮಹದೇವಪ್ಪ ಎಂದರು.

ಕಾಂಗ್ರೆಸ್ ಬದುಕಿರುವವರೆಗೆ ದೇಶದ ಭವಿಷ್ಯ ಅಡಕತ್ತರಿಯಲ್ಲಿ ಸಿಕ್ಕಿದಂತೆ ಇರುತ್ತೆ. ಆದ್ದರಿಂದ ಯುವಜನ ಅರ್ಥ ಮಾಡಿಕೊಳ್ಳಬೇಕು. ಓಟ್ ಬ್ಯಾಂಕ್ ರಾಜಕಾರಣ ಮಾಡಿ ಬದುಕುವುದನ್ನು ಇವರು ಮಾಡ್ತಾ ಇದ್ದಾರೆ. ಆದಷ್ಟು ಬೇಗ ಕಾಂಗ್ರೆಸ್ ಅನ್ನು ಮುಗಿಸುವ ಕೆಲಸವನ್ನು ಯುವಕರು ಮಾಡಬೇಕು ಎಂದು ಮನವಿ ಮಾಡಿದರು.

Share

Leave a comment

Leave a Reply

Your email address will not be published. Required fields are marked *