SUDDIKSHANA KANNADA NEWS/ DAVANAGERE/ DATE:22-02-2024
ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ 32 ನೇ ವಾರ್ಡ್ ನ ಆವರಗೆರೆ ಸರ್ವೇ ನಂಬರ್ 242 ಮತ್ತು 243 ಮತ್ತು 244ರ ಉಪ ನಂಬರ್ ಗಳಲ್ಲಿ ಅಕ್ರಮವಾಗಿ ಪಡೆದಿದ್ದ ನಿವೇಶನ ಸಂಖ್ಯೆಗಳನ್ನು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಅವರು ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ. ಇದು ಸ್ವಾಗತ ವಿಚಾರ: ಭೂಗಳ್ಳರ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದು ಮಹಾನಗರ ಪಾಲಿಕೆ ಮಾಜಿ ಮೇಯರ್ ಹಾಗೂ ಹಾಲಿ ಸದಸ್ಯೆ ಉಮಾ ಪ್ರಕಾಶ್ ತಿಳಿಸಿದ್ದಾರೆ.
ದಾವಣಗೆರೆ ಹರಿಹರ ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಅಂತಿಮ ಮಂಜೂರಾತಿ ಪಡೆದಿದ್ದ, ಬಡಾವಣೆ ನಕ್ಷೆಗಳಲ್ಲಿ ಬಿಟ್ಟಿದ್ದ ಸುಮಾರು 34 ಸಾವಿರ ಅಡಿ ಬಯಲು ಜಾಗಕ್ಕೆ ಮಹಾನಗರ ಪಾಲಿಕೆಯ ಕೆಲವು ಅಧಿಕಾರಿಗಳು ಶಾಮೀಲಾಗಿ 2017 ಮತ್ತು 2018 ರಲ್ಲಿ ನೀಡಲಾಗಿದ್ದ ಅಕ್ರಮ ನಿವೇಶನ ಸಂಖ್ಯೆಗಳನ್ನು ನೀಡಿದ್ದರು. ಡಿಸೆಂಬರ್ 7ರಂದು ರದ್ದುಪಡಿಸಿ ಆಯುಕ್ತರು ಆದೇಶ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ 32ನೇ ವಾರ್ಡಿನ ಪಾಲಿಕೆ ಸದಸ್ಯೆ ಉಮಾ ಮಾ ಪ್ರಕಾಶ್ ಅವರು, 2019ರಲ್ಲಿ ಎರಡನೇ ಬಾರಿ ಮಹಾನಗರ ಪಾಲಿಕೆ ಸದಸ್ಯಳಾಗಿ ಆಯ್ಕೆಯಾದ ನಂತರ ಮೊದಲ ಸಾಮಾನ್ಯ ಸಭೆಯಿಂದ ಪ್ರತಿ ಸಭೆಯಲ್ಲಿ ಈ ಬಗ್ಗೆ
ಪ್ರಸ್ತಾಪಿಸಿ ರದ್ದುಪಡಿಸಲು ಹೋರಾಟ ಮಾಡಿದ್ದರ ಪ್ರತಿಫಲವಾಗಿ ಈ ನಿರ್ಧಾರ ಆಗಿದೆ ಎಂದು ಹೇಳಿದ್ದಾರೆ.
ರದ್ದುಪಡಿಸಲು ಕ್ರಮ ಕೈಗೊಳ್ಳುವಲ್ಲಿ ಉಪಯುಕ್ತೆಲಕ್ಷ್ಮಿ, ಸಹಾಯಕ ಕಂದಾಯ ಅಧಿಕಾರಿ ಸುನಿಲ್, ಇತರ ಅಧಿಕಾರಿಗಳು ಪರಿಶೀಲಿಸಿ ಅಕ್ರಮ ಡೋರ್ ನಂಬರ್ ನೀಡಿರುವುದನ್ನು ರದ್ದುಪಡಿಸಲು ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ವರದಿ
ನೀಡಿ ನಂತರ ಬೆಂಗಳೂರು ವಿಭಾಗೀಯ ಆಯುಕ್ತರ ಸೂಚನೆಯಂತೆ ಸದರಿ ಅಕ್ರಮ ಡೋರ್ ನಂಬರ್ ಗಳನ್ನು ರದ್ದುಪಡಿಸಲು ಕ್ರಮ ಕೈಗೊಂಡಿರುತ್ತಾರೆ. ರದ್ದುಪಡಿಸಲು ಕ್ರಮ ಕೈಗೊಂಡ ಅಧಿಕಾರಿ ವರ್ಗಕ್ಕೆ, ಆಯುಕ್ತರು ಮತ್ತು ಉಪ ಆಯುಕ್ತರಿಗೆ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಈ ಡೋರ್ ನಂಬರ್ ರದ್ದುಪಡಿಸಿರುವ ಜಾಗದಲ್ಲಿ ಫೆನ್ಸಿಂಗ್ ಅಳವಡಿಸಿ ಸಾರ್ವಜನಿಕ ಸ್ವತ್ತನ್ನು ಹದ್ದುಬಸ್ತಿ ನಲ್ಲಿ ಇಟ್ಟುಕೊಳ್ಳಲು ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಉದ್ಯಾನವನ ಅಥವಾ ಆಟದ ಮೈದಾನಕ್ಕೆ ಅನುಕೂಲ ಮಾಡಿಕೊಡಲು ಮತ್ತು ಅಕ್ರಮ ಡೋರ್ ನಂಬರ್ ನೀಡಿರುವಂತಹ ಪಾಲಿಕೆಯ ನೌಕರ ನೌಕರರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮುಂದಿನ ವಾರ ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡುವುದಾಗಿ ಹೇಳಿದ್ದಾರೆ.
ಈ ಅಕ್ರಮ ನಿವೇಶನಗಳನ್ನು ಬಡಾವಣೆ ನಿರ್ಮಿಸಿದ ಮಾಲೀಕರು ಕೆಲವರಿಗೆ ಮಾರಾಟ ಮಾಡಿ ಮೋಸ ಮಾಡಿರುವುದು ತಿಳಿದು ಬಂದಿದೆ. ಎರಡು ಮೂರು ಮನೆಗಳನ್ನು ನಿರ್ಮಿಸಿ ಮಾರಾಟ ಮಾಡಿರುವುದು ಸಹ ತಿಳಿದುಬಂದಿದೆ. 32ನೇ ವಾರ್ಡಿನ ಅಂಬಿಕಾ ಬಡಾವಣೆಯಲ್ಲಿಯೂ ಸಹ ಬಯಲು ಜಾಗಕ್ಕೆ ಮತ್ತು ಸಾರ್ವಜನಿಕ ಸೌಲಭ್ಯಕ್ಕೆ ಬಿಟ್ಟಿದ್ದ ಸುಮಾರು 40 ಸಾವಿರ ಅಡಿಗಳಷ್ಟು ಜಾಗಗಳಿಗೂ ಸಹ ಅಕ್ರಮ ಡೋರ್ ನಂಬರ್ ನೀಡಿರುವುದನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.
ಅಲ್ಲದೇ ಶಕ್ತಿನಗರದ ಹತ್ತಿರ ಬನಶಂಕರಿ ದೇವಸ್ಥಾನದ ಎಡಭಾಗದಲ್ಲಿ ಡಿಸಿಎಂ ಟೌನ್ ಶಿಪ್ ನ ದಕ್ಷಿಣ ಭಾಗಕ್ಕೆ ಸುಮಾರು 30 ಅಡಿ ರಸ್ತೆ ಇದ್ದು ಸದರಿ ರಸ್ತೆಯನ್ನು ವತ್ತುವರಿ ಮಾಡಿ ಮನೆ ನಿರ್ಮಿಸಿ ಮಾರಾಟ ಮಾಡಿರುವುದು ತಿಳಿದು ಬಂದಿರುತ್ತದೆ. ಸದರಿ ಡಿಸಿಎಂ ಟೌನ್ ಶಿಪ್ ನ ದಕ್ಷಿಣ ಭಾಗದಲ್ಲಿ ಬಿಟ್ಟಿರುವ 30ಅಡಿ ರಸ್ತೆಯನ್ನು ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಲು ಒತ್ತಾಯಿಸುವುದಾಗಿ ತಿಳಿಸಿದ್ದಾರೆ. ಅಕ್ರಮ ಡೋರ್ ನಂಬರ್ ಗಳು ಸೇರಿದಂತೆ ಸಾರ್ವಜನಿಕ ಸ್ವತ್ತು ಒತ್ತುವರಿ, ಉದ್ಯಾನವನ ಒತ್ತುವರಿ, ರಸ್ತೆ ಒತ್ತುವರಿಗೆ ಸಂಬಂಧಿಸಿದಂತೆ ತನ್ನ ಹೋರಾಟ ಮುಂದುವರಿಯುತ್ತದೆ ಎಂದು ಉಮಾ ಪ್ರಕಾಶ್ ಅವರು ಹೇಳಿದ್ದಾರೆ.
ಸಾರ್ವಜನಿಕರು ನಿವೇಶನ ಕೊಳ್ಳುವಾಗ ಆ ನಿವೇಶನಗಳು ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಯಾಗಿ ಮಹಾನಗರ ಪಾಲಿಕೆಯಿಂದ ಡೋರ್ ನಂಬರ್ ಪಡೆದಿವೆಯೇ ಎಂಬುದನ್ನು ಪರಿಶೀಲಿಸಿ ನಿವೇಶನ ಖರೀದಿಸುವಂತೆ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.