SUDDIKSHANA KANNADA NEWS/ DAVANAGERE/ DATE:15-10-2024
ದಾವಣಗೆರೆ: ರಾಜ್ಯದ ಪ್ರಥಮ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಯುಬಿಡಿಟಿ ಉಳಿವಿಗೆ ಒತ್ತಾಯಿಸಿ ಕರೆ ನೀಡಿರುವ ದಾವಣಗೆರೆ ಬಂದ್ ಗೆ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿಸಿದೆ.
1951ರಲ್ಲಿ ದಾವಣಗೆರೆಯ ದಾನಿಗಳು ನೀಡಿದ ಜಾಗ, ಹಣದಲ್ಲಿ ಕಟ್ಟಿರುವ ಕಾಲ ಈಗ 73 ವರ್ಷಗಳನ್ನು ಪೂರೈಸಿ ಅಮೃತಮಹೋತ್ಸವದ ಹೊಸ್ತಿಲಲ್ಲಿದೆ. 7 ದಶಕಗಳಿಂದ ರಾಜ್ಯದ ಬಡ ರೈತ ಕಾರ್ಮಿಕರ ಹಾಗೂ ಮಧ್ಯಮ ವರ್ಗದವರ ಮಕ್ಕಳಿಗೆ ಅನುಕೂಲ ಆಗುತ್ತದೆ. ಆದ್ರೆ, ಶೇಕಡಾ 50ರಷ್ಟು ಪೇಮೆಂಟ್ ಸೀಟ್ ಜಾರಿಗೊಳಿಸಿರುವುದು ಖಂಡನೀಯ. ಈ ಪ್ರಕ್ಷಣಿಕ ವರ್ಷದಿಂದ ಪ್ರಥಮ ವರ್ಷದ 504 ಸೀಟುಗಳಲ್ಲಿ 254 ಸೀಟಗಳನ್ನು 97ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂದು ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿ. ಅವಿನಾಶ್ (ಅಭಿ) ಆರೋಪಿಸಿದ್ದಾರೆ.
ಇನ್ನುಳಿದ 250 ಮೆರಿಟ್ ಸೀಟುಗಳಿಗೆ ನಿಗದಿಪಡಿಸಿರುವ 43 ಸಾವಿರ ಶುಲ್ಕವೇ ಬಡ ವಿದ್ಯಾರ್ಥಿಗಳಿಗೆ ದೊಡ್ಡ ಹೊರೆಯಾಗಿದೆ. ಹೀಗಿರುವಾಗ, ಶುಲ್ಕ, ಕಡಿಮೆ ಮಾಡಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಓದಲು ಇದ್ದ ಅವಕಾಶವನ್ನು ತಪ್ಪಿಸಲಾಗುತ್ತಿದೆ. ಶುಲ್ಕವೂ ಹೆಚ್ಚಳ ಮಾಡಿ, ಪೇಮೆಂಟ್ ಸೀಟ್ ವ್ಯವಸ್ಧೆ ಜಾರಿಗೊಳಿಸುತ್ತಿರುವ ಸರ್ಕಾರದ ನಡೆಯ ವಿರುದ್ಧ ಈಗಾಗಲೇ ಎಐಡಿಎಸ್ಓ ನೇತೃತ್ವದಲ್ಲಿ ‘ಯುಬಿಡಿಟಿ ಉಳಿಸಿ’ ಹೋರಾಟದಲ್ಲಿ ವಿದ್ಯಾರ್ಥಿಗಳು ನಿರತರಾಗಿದ್ದಾರೆ.
ಕೂಡಲೇ ಪೇಮೆಂಟ್ ಕೋಟಾ ರದ್ದುಗೊಳಿಸಿ ಕಾಲೇಜಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಬೇಕು. ಪ್ರತಿಷ್ಠಿತ ಯುಬಿಡಿಟಿ ಕಾಲೇಜಿನ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರವ ವಹಿಸಬೇಕು ಎಂಬುದು ವಿದ್ಯಾರ್ಥಿಗಳ ಒತ್ತಾಸೆಯಾಗಿದೆ. ಆದ ಕಾರಣ ಸಮಗ್ರ ಕರ್ನಾಟಕ ವೇದಿಕೆಯು 16ರಂದು ಕರೆ ನೀಡಿರುವ ಬಂದ್ ಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅವಿನಾಶ್ ವಿ. (ಅಭಿ) ಅವರು ತಿಳಿಸಿದ್ದಾರೆ.