SUDDIKSHANA KANNADA NEWS/ DAVANAGERE/ DATE:01-03-2024
ದಾವಣಗೆರೆ: ನವಜಾತ ಶಿಶುಗಳ ಬಗ್ಗೆ ಹೆಚ್ಚಿನ ಕಾಳಜಿಯುಳ್ಳದ್ದಾಗಿದೆ. ಮಗುವಿಗೆ 6 ತಿಂಗಳು ತುಂಬುವ ತನಕ ಎದೆಹಾಲು ಅತಿ ಅವಶ್ಯಕ. ಮಗುವಿನ ಸರ್ವತೋಮುಖ ಬೆಳವಣಿಗೆಗೆ ಎದೆಹಾಲೇ ಶ್ರೇಷ್ಠ. ಆರು ತಿಂಗಳ ತನಕ ಮಗುವಿನ ಜೀರ್ಣ ಕ್ರಿಯೆಗೂ ಎದೆಹಾಲೇ ಉಪಯುಕ್ತ. ತಾಯಿಯ ಎದೆಹಾಲಿಗೆ ಸರಿಸಾಟಿಯಾದ ಮತ್ತೊಂದು ಜೀವಹನಿಗಳು ಯಾವುದು ಇಲ್ಲವೆಂದು ಹೇಳಬಹುದು. ಹಾಗಾಗಿ ಅವಶ್ಯಕತೆ ಇರುವ ಮಕ್ಕಳಿಗೆ ಇದೊಂದು ವರದಾನ.
ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆಗೆ ಮತ್ತೊಂದು ಚಿನ್ನದ ಗರಿ. ಬಾಪೂಜಿ ಎದೆಹಾಲಿನ ಭಂಡಾರ ಆರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತನ್ನ ಸೇವೆಯನ್ನು ಸಮಾಜಕ್ಕೆ ನೀಡಲಿದೆ. ಇದೊಂದು ವೈದ್ಯಕೀಯ ವಿಭಾಗದಲ್ಲಿ ವಿನೂತನ ಸೇವೆ. ಜೊತೆಗೆ ದಾವಣಗೆರೆಗೂ ಹೆಮ್ಮೆಯ ಸಂಗತಿ.
ದಾವಣಗೆರೆಯ ಸುತ್ತಮುತ್ತಲಿನ ಜಿಲ್ಲೆಗಳಿಗೆ ಇದು ಪ್ರಥಮ ಎದೆಹಾಲಿನ ಭಂಡಾರ. ಕರ್ನಾಟಕದಲ್ಲಿ ಸುಮಾರು 5 ಜಿಲ್ಲೆಗಳಲ್ಲಿ ಎದೆಹಾಲಿನ ಭಂಡಾರವು ಕಾರ್ಯ ನಿರ್ವಹಿಸುತ್ತಿದೆ. ಬಾಪೂಜಿ ಎದೆಹಾಲಿನ ಭಂಡಾರವು ವಿಶಾಲವಾದ ಪ್ರದೇಶದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಅನ್ವಯ ಅಚ್ಚುಕಟ್ಟಾಗಿ ನಿರ್ಮಾಣವಾಗಿದೆ.
ಎದೆಹಾಲು ಕೊಡುವ ತಾಯಿಗೆ ಮುಜುಗರವಾಗಲ್ಲ:
ಇಲ್ಲಿ ವುತಿಯೊಂದು ಹಂತಗಳಿಗೂ ಪ್ರತ್ಯೇಕ ಕೊಠಡಿಗಳಿದ್ದು, ಹಾಲನ್ನು ದಾನವಾಗಿ ಕೊಡಲು ಬರುವ ತಾಯಂದಿರಿಗೆ ಯಾವುದೇ ಮುಜುಗರವಾಗುವುದಿಲ್ಲ. ತಾಯಂದಿರು ತಮ್ಮ ಮಗುವಿಗೆ ಎದೆಹಾಲುಣಿಸಿ ಹೆಚ್ಚಾದ ಹಾಲನ್ನು ಈ ಭಂಡಾರಕ್ಕೆ ಬಂದು ದಾನವಾಗಿ ನೀಡುತ್ತಾರೆ. ಆ ಹಾಲನ್ನು ಅವಶ್ಯಕತೆ ಇರುವ ಆರು ತಿಂಗಳ ಒಳಗಿನ ಮಗುವಿಗೆ ನೀಡಲಾಗುವುದು. ಎದೆಹಾಲನ್ನು ಕೊಡುವುದು ಹಾಗೂ ನಡೆಯುವುದು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಎದೆಹಾಲನ್ನು ಪಡೆಯುವ ಮೊದಲು ತಾಯಂದಿರಿಗೆ ಯಾವುದೇ ಕಾಯಿಲೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ .
ಯಾವ ರೀತಿ ಪರೀಕ್ಷೆ ನಡೆಸಲಾಗುತ್ತೆ…?
ಹೆಚ್ ಐ ವಿ, ಹೆಪಟಿಟಿಸ್ ಬಿ, ಸೈಫಿಲ್ಸ್ ಇಲ್ಲವೆಂದು ಖಚಿತಪಡಿಸಿಕೊಳ್ಳಲಾಗುವುದು. ಹಾಗೆಯೇ ತಾಯಿಯ ಹಾಗೂ ಆಕೆಯ ಗಂಡನ ವೈದ್ಯಕೀಯ ಇತಿಹಾಸ ಪಡೆದು ಗಂಡನಿಗೂ ಕೂಡ ಯಾವುದೇ ಅಪಾಯಕಾರಿ ಚಟುವಟಿಕೆಗಳಿಲ್ಲವೆಂದ ಮೇಲೆಯೇ ತಾಯಿಯಿಂದ ಎದೆಹಾಲನ್ನು ಪಡೆಯಲಾಗುವುದು. ಪಡೆದ ಹಾಲನ್ನು ಲ್ಯಾಬ್ ಗೆ ಪರೀಕ್ಷೆಗೆ ಕಳುಹಿಸಲಾಗುವುದು. ಅಲ್ಲಿಯ ರಿರ್ಪೋಟ್ ನೆಗೆಟಿವ್ ಬಂದ ನಂತರವೇ ಹಾಲನ್ನು ಪರೀಕ್ಷೆಗೆ ಸಂಸ್ಕರಿಸಲಾಗುವುದು.
ಯಾವಾಗ ಉದ್ಘಾಟನೆ…?
ಈ ರೀತಿ ಸಂಸ್ಕರಿಸಿದ ಹಾಲನ್ನು ಮತ್ತೆ ಲ್ಯಾಬ್ ಕಳುಹಿಸಲಾಗುವುದು. ಎರಡು ಬಾರಿಯೂ ರಿಪೋಟ್ ನೆಗೆಟಿವ್ ಬಂದ ನಂತರವೇ ಹಾಲನ್ನು ಶೇಖರಿಸಲಾಗುವುದು. ಈ ಹಾಲನ್ನು ಆರು ತಿಂಗಳ ತನಕ ಶೇಖರಿಸಬಹುದು. ಡಾ.ನಿರ್ಮಲ ಕೇಸರಿ ಅವರ ಕನಸಿನ ಕೂಸಾದ ಎದೆಹಾಲಿನ ಭಂಡಾರವು ದಾವಣಗೆರೆಯಲ್ಲಿ ಸಮಾಜಕ್ಕೆ ಅರ್ಪಣೆಯಾಗುತ್ತಿದ್ದು, ಇದು ಮಧ್ಯ ಕರ್ನಾಟಕದಲ್ಲಿ ಸ್ಥಾಪನೆಯಾಗಿದೆ. ಸುತ್ತಮುತ್ತಲಿನ ಐದು ಜಿಲ್ಲೆಗಳಿಗೆ ವರದಾನವಾಗಲಿದೆ. ನವಜಾತ ಶಿಶುಗಳಿಗೆ ತಾಯಿಯ ಎದೆಹಾಲು ಸುಲಭವಾಗಿ ಸಿಗಲಿದೆ ಎಂದು ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ, ಬಾಪೂಜಿ ಆಸ್ಪತ್ರೆಯ ಮಕ್ಕಳ ವಿಭಾಗದ ನಿರ್ದೇಶಕ ಡಾ. ಗುರುಪ್ರಸಾದ್ ಅವರು ತಿಳಿಸಿದ್ದಾರೆ.
ಜೊತೆಗೆ ಯಾವ ತಾಯಿಗೆ ಆಪ್ತ ಸಮಾಲೋಚನೆಯ ಅವಶ್ಯಕತೆ ಇರುತ್ತದೆಯೋ ಅವರೊಂದಿಗೆ ಆಪ್ತ ಸಮಾಲೋಚನೆ ಕೂಡ ಮಾಡಲಾಗುವುದು. ಚೊಚ್ಚಲ ತಾಯಂದಿರಿಗೆ ಮಾಹಿತಿಯ ಕೊರತೆ ಇರಬಹುದು. ಎದೆಹಾಲುಣಿಸುವ ಕಾರ್ಯನಿರತ ಮಹಿಳೆಯ ಸಮಸ್ಯೆ, ಶಸ್ತ್ರಚಿಕಿತ್ಸೆಯಿಂದ ಮಗುವನ್ನು ಹೊರತೆಗೆದಾಗ ಬರುವ ಸಮಸ್ಯೆ, ಅವಳಿ – ಜವಳಿ ಮಕ್ಕಳಿಗೆ ಎದೆಹಾಲುಣಿಸುವ ಸಮಸ್ಯೆ, ಎದೆತೊಟ್ಟಿನ ಸಮಸ್ಯೆ, ಎದೆಬಾವು, ಎದೆಹಾಲುಣಿಸುವಾಗ ಬರುವ ಸೋಂಕುರಹಿತ ಗಂಟುಗಳು / ಸೋಂಕುಸಹಿತವಾದ ಗಂಟುಗಳು ಬರುವುದೂ ಸರಿದಂತೆ ಹಲವು ತೊಂದರೆಗಳ ಕುರಿತಂತೆ ಈ ಕೇಂದ್ರದಲ್ಲಿ ಆಪ್ತ ಸಮಾಲೋಚನ ನಡೆಸಲಾಗುವುದು ಎಂದು ವಿವರಿಸಿದರು.