SUDDIKSHANA KANNADA NEWS/ DAVANAGERE/ DATE:16-02-2024
ದಾವಣಗೆರೆ: ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಆಶಾದಾಯಕವಾಗಿಲ್ಲ, ಇದೊಂದು ನೀರಸ ಬಜೆಟ್. 5 ಗ್ಯಾರಂಟಿಗಳ ಯೋಜನೆಗೆ ಹಣ ಸರಿದೂಗಿಸಲು ಹೆಣಗಾಡುತ್ತಿರುವ ಸಿದ್ದರಾಮಯ್ಯ ಅವರು, ಹೆಚ್ಚು ಸಾಲ ಮಾಡಿರುವುದೇ ಸಾಧನೆ ಆಗಿದೆ ಎಂದು ಬಿಜೆಪಿ ಮುಖಂಡ, ದಾವಣಗೆರೆ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ. ಬಿ. ಕೊಟ್ರೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯರು 15 ನೇ ಬಜೆಟ್ ಮಂಡನೆ ಮಾಡಿದ್ದರೂ ನೇಕಾರ ಸಮಾಜದವರಿಗೆ ಯಾವ ಕೊಡುಗೆ ನೀಡಿಲ್ಲ, ರೈತರ ಸಾಲ ಮನ್ನಾ ಬಗ್ಗೆ ಪ್ರಸ್ತಾಪಿಸಿಲ್ಲ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಘೋಷಿಸಲಾಗಿರುವ ಯೋಜನೆಗಳು ಕಾರ್ಯರೂಪಕ್ಕೆ ಬರಲು ಇನ್ನು ಮೂರ್ನಾಲ್ಕು ವರ್ಷಗಳು ಬೇಕು. ಮುಂದಿನ ವರ್ಷವೂ ಬಜೆಟ್ ಮಂಡನೆ ಮಾಡುತ್ತಾರೆ. ಕೇವಲ ಜನರ ಮೂಗಿಗೆ ತುಪ್ಪ ಸವರುವಂಥ ಆಯವ್ಯಯ ಮಂಡನೆ ಮಾಡುವ ಮೂಲಕ ರಾಜ್ಯದ ಜನರು ನಿರಾಸೆಗೊಳ್ಳುವಂತೆ ಮಾಡಿದ್ದಾರೆ ಎಂದಿದ್ದಾರೆ.
ಅಬಕಾರಿ ಸುಂಕ ಹೆಚ್ಚಿಸಿದ್ದಾರೆ. ತೆರಿಗೆ ಹೆಚ್ಚಳ ಮಾಡಿದ್ದಾರೆ. ತೆರಿಗೆ ಮೂಲಕವೇ ಹೆಚ್ಚಿನ ಆದಾಯ ನಿರೀಕ್ಷಿಸಿರುವುದಾಗಿ ಅವರೇ ಹೇಳಿದ್ದಾರೆ. ಅದೇ ರೀತಿಯಲ್ಲಿ ಸಾಲ ಮಾಡಿರುವುದಾಗಿಯೂ ಹೇಳಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಓಲೈಕೆಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಜಾತಿ ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ನಡುವೆ ಸಂಘರ್ಷ ಹುಟ್ಟುಹಾಕುವಂತ ಕೆಲಸವನ್ನು ಬಜೆಟ್ ನಲ್ಲಿಯೂ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪದೇ ಪದೇ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ತೋರಿಸುತ್ತಿರುವ ಸಿದ್ದರಾಮಯ್ಯ ಅವರು, 5 ಗ್ಯಾರಂಟಿಗಳಿಗೆ ಹೆಚ್ಚಿನ ಹಣ ಮೀಸಲಿಟ್ಟಿರುವುದಾಗಿ ಹೇಳುತ್ತಾರೆ. 2 ಸಾವಿರ ರೂಪಾಯಿ ಎಷ್ಟೋ ಮಂದಿಗೆ ಇನ್ನೂ ಬಂದಿಲ್ಲ. ಯುವ ನಿಧಿಯೂ ಪದವೀಧರರಿಗೆ ಸಿಕ್ಕಿಲ್ಲ. ವಿದ್ಯುತ್ ಬಿಲ್ ಏರಿಕೆಯಾಗುತ್ತಲೇ ಇದೆ. ಶಕ್ತಿ ಬಸ್ ನಡಿ ಫ್ರೀ ಬಸ್ ಪ್ರಯಾಣ ಇದ್ದರೂ ಬಸ್ ಗಳೇ ಬರೋಲ್ಲ. ಒಟ್ಟಾರೆ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ನಿಂದ ಯಾವುದೇ ಉಪಯೋಗವಿಲ್ಲ ಎಂದು ಕೊಟ್ರೇಶ್ ಅವರು ಹೇಳಿದ್ದಾರೆ.