SUDDIKSHANA KANNADA NEWS/ DAVANAGERE/ DATE:16-02-2024
ದಾವಣಗೆರೆ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ ಸೇರಿದಂತೆ ಇನ್ನೂ ಹಲವು ದೌರ್ಜನ್ಯಗಳು ನಡೆಯುತ್ತಿದ್ದು ಇವುಗಳನ್ನು ತಡೆಗಟ್ಟಲು ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯತೆ ಅಗತ್ಯವಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಅಪರ್ಣಾ.ಎಂ.ಕೊಳ್ಳ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ತುಂಗಭದ್ರ ಸಭಾಂಗಣದಲ್ಲಿ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳ ಕುರಿತು ಏರ್ಪಡಿಸಲಾದ ಒಂದು ದಿನದ
ತರಬೇತಿ ಕಾರ್ಯಗಾರ ಹಾಗೂ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮುಂದೆ ಪ್ರತಿ ದಿನ ಮಕ್ಕಳ ಹಕ್ಕುಗಳ ಉಲ್ಲಂಘನೆಗಳ ಪ್ರಕರಣಗಳ ವರದಿಯಾಗುತ್ತಿವೆ. ಈ ಉಲ್ಲಂಘನೆಗಳ ವರದಿಯನ್ನು ನಾವು ಪ್ರತಿದಿನ ನೋಡುವುದರಿಂದ ಮಕ್ಕಳ ಹಕ್ಕುಗಳ
ರಕ್ಷಣಾ ಕಾನೂನಿನ ಅರಿವಿನ ಕೊರತೆ ಇದೆ ಎಂದು ಪರಿಗಣಿಸಿ ಪ್ರತಿಯೊಂದು ಜಿಲ್ಲೆಯಲ್ಲಿ ಇಂತಹ ಕಾರ್ಯಗಾರ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ರಾಜ್ಯದಲ್ಲಿ 59000 ಬಾಲ್ಯವಿವಾಹ ಪ್ರಕರಣಗಳು ಕಂಡು ಬಂದಿವೆ, ಯಾವುದೇ ಸಮಸ್ಯೆ ಇದ್ದರೂ 10 ರಿಂದ 12 ಇಲಾಖೆಯ ವಿವಿಧ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಬೇಕು. ಶಿಕ್ಷಣದೊಂದಿಗೆ ಕಾನೂನು ಶಿಕ್ಷಣ
ಅಭ್ಯಾಸಿಸಬೇಕು. ವಿವಿಧ ಸಾಮಾಜಿಕ ನಿಯಮಗಳ ಬಗ್ಗೆ ವಿದ್ಯಾರ್ಥಿ ಜೀವನದಲ್ಲಿ ತಿಳಿದುಕೊಂಡಾಗ ಕಾನೂನಾತ್ನಕ ಜೀವನ ನಡೆಸಲು ಸಾಧ್ಯ, ರಾಜ್ಯದಲ್ಲಿ 28657 ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು
ಗರ್ಭಿಣಿಯಾರಾಗಿರುತ್ತಾರೆ. ಇದರ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯವರು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ, ಈ ಅಂಕಿ ಅಂಶಗಳನ್ನು ಕಡಿಮೆ
ಮಾಡಬಹುದು ಎಂದು ತಿಳಿಸಿದರು.
2012 ರಿಂದ ಇಲ್ಲಿಯವರೆಗೆ 672 ಪೋಕ್ಸೋ ಪ್ರಕರಣ ದಾಖಲಾಗಿರುತ್ತದೆ. 334 ಪ್ರಕರಣಗಳಿಗೆ ಶಿಕ್ಷೆಯಾಗಿದ್ದು 78 ಪ್ರಕರಣಗಳು ಇನ್ನೂ ಬಾಕಿ ಉಳಿದಿರುತ್ತದೆ. ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗದೇ ಇರುವ ರೀತಿ
ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ, ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಲು, ಹಲವು ಇಲಾಖೆಗಳು ಸೇರಿ ಸಮನ್ವಯತೆಯಿಂದ ಕೆಲಸ ಮಾಡಿದರೆ ಮಾತ್ರ ಸಾಧ್ಯವಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಡಾ.ವೆಂಕಟೇಶ್.ಎಂ.ವಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತಾನಾಡಿ, ಕಾನೂನು ಮಕ್ಕಳ ಹಕ್ಕುಗಳ ರಕ್ಷಣೆಗೆ ಹಲವಾರು ರೀತಿಯ ಅವಕಾಶ ಮಾಡಿಕೊಟ್ಟಿದೆ. ಅದರಲ್ಲಿ ಪ್ರಮುಖವಾಗಿ ಮಕ್ಕಳಿಗೆ
ಬೇಕಾಗಿರುವುದು ಉತ್ತಮವಾಗಿ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಮಕ್ಕಳು ಉತ್ತಮವಾಗಿ ಅಭಿವೃದ್ಧಿ ಹೊಂದಬೇಕು, ಸ್ವಾತಂತ್ರ್ಯವಾಗಿ ಭಾಗವಹಿಸಬೇಕು. ಈ ನಾಲ್ಕು ಸೂತ್ರಗಳು ಮಕ್ಕಳಿಗೆ ಪ್ರಮುಖವಾಗಿ ಇರಬೇಕು. ಮಹಿಳೆಯರು ಮತ್ತು ಮಕ್ಕಳು ಒಂದಲ, ಒಂದು ರೀತಿಯಲ್ಲಿ ದೌರ್ಜನ್ಯಕ್ಕೆ ಹಾಗೂ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಪ್ರಪಂಚದಲ್ಲಿ 700 ಕೋಟಿಗಿಂತ ಹೆಚ್ಚು ಜನಸಂಖ್ಯೆ ಇದೆ. ಅದರಲ್ಲಿ ಅತಿ ಹೆಚ್ಚು ಮಕ್ಕಳಿರುವ ದೇಶ
ನಮ್ಮದಾಗಿದೆ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಿ ಇವರನ್ನು ದೇಶದ ಮಾನವ ಸಂಪನ್ಮೂಲವಾಗಿ ರೂಪಿಸಬೇಕಾಗಿದೆ. ಇದಕ್ಕಾಗಿ ಅವರಿಗೆ ಉತ್ತಮ ವಾತಾವರಣ ಕಲ್ಪಿಸಿ, ಬದುಕು
ಕಟ್ಟಿಕೊಡುವ ಮೂಲಕ ಇಂದಿನ ಮಕ್ಕಳನ್ನು ಅತ್ಯುತ್ತಮ ಪ್ರಜೆಗಳನ್ನಾಗಿಸಬೇಕಾಗಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ.ಮ.ಕರೆಣ್ಣವರ ಮಾತನಾಡಿದರು. ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ.ಸಂತೋಷ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಿಕಿ ವಾಸಂತಿ ಉಪ್ಪಾರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಜಿ.ಕರಿಸಿದ್ದಪ್ಪ, ಜಿಲ್ಲಾ ಸರ್ಜನ್ ಡಾ; ನಾಗೇಂದ್ರಪ್ಪ, ಬಾಲ ನ್ಯಾಯ ಮಂಡಳಿಯ ಸದಸ್ಯರಾದ ವಿಜಯಮಾಲಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.