ಕಟಿಹಾರ್ (ಬಿಹಾರ): ಬಿಹಾರದ ಕಟಿಹಾರ್ ಜಿಲ್ಲೆಯಲ್ಲಿ ಮದುವೆ ಮನೆಯಲ್ಲಿ ಭಾರೀ ಆಘಾತಕಾರಿ ಘಟನೆಯೊಂದು ನಡೆದಿದೆ. ಮದುವೆಯಾದ ಮರುದಿನವೇ ಆರತಕ್ಷತೆ ಕಾರ್ಯಕ್ರಮದ ವೇಳೆ ವೇದಿಕೆಯಲ್ಲೇ ವರನೊಬ್ಬ ಹೃದಯಾಘಾತದಿಂದ ಕುಸಿದುಬಿದ್ದು ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.

ಪಟ್ನಾದಲ್ಲಿ ಆಯುಷ್ ವೈದ್ಯರಾಗಿ ಕೆಲಸ ಮಾಡುತ್ತಿದ್ದ ಪವನ್ ಕುಮಾರ್ ಯಾದವ್ ಮೃತ ವರ.ಅವರ ವಿವಾಹ ನವೆಂಬರ್ 25ರಂದು ಬಹಳ ವಿಜೃಂಭಣೆಯಿಂದ ನಡೆದಿತ್ತು. ಮದುವೆಯ ಮಾರನೇ ದಿನ (ನವೆಂಬರ್ 26) ಸಂಜೆ ಊರಿನಲ್ಲಿ ‘ಬಾಹುಭೋಜ್’ ಅಂದರೆ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನವವಿವಾಹಿತ ದಂಪತಿ ವೇದಿಕೆಯ ಮೇಲಿದ್ದು, ಅತಿಥಿಗಳು ಹರಸುತ್ತಿದ್ದ ವೇಳೆ ಪವನ್ ಕುಮಾರ್ ಅಚಾನಕ್ ಆಗಿ ಕುಸಿದುಬೆದಿದ್ದಾರೆ. ತಕ್ಷಣ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.
ವೇದಿಕೆಯ ಮೇಲೆಯೇ ಕುಸಿದ ವರ: ಆರತಕ್ಷತೆ ಕಾರ್ಯಕ್ರಮದ ಕೊನೆಯ ಹಂತದಲ್ಲಿ ಅತಿಥಿಗಳನ್ನು ಸ್ವಾಗತಿಸುತ್ತಿದ್ದ ವೇಳೆ ವರ ಪವನ್ ಕುಮಾರ್ ಅಚಾನಕ್ಕಾಗಿ ಕುಸಿದುಬಿದ್ದಿದ್ದು, ನೆರೆದಿದ್ದವರಲ್ಲಿ ಆತಂಕ ಮೂಡಿಸಿತು.
ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು: ತಕ್ಷಣವೇ ಫಲ್ಕಾ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಪೂರ್ಣಿಯಾ ಆಸ್ಪತ್ರೆಗೆ ರವಾನಿಸುವಷ್ಟರಲ್ಲಿ ವರ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಶೋಕಸಾಗರದಲ್ಲಿ ಕುಟುಂಬ: ಮದುವೆಯ ಖುಷಿಯಲ್ಲಿದ್ದ ಎರಡೂ ಕುಟುಂಬಗಳಲ್ಲಿ ಈ ಅನಿರೀಕ್ಷಿತ ದುರ್ಘಟನೆಯಿಂದ ತೀವ್ರ ಶೋಕ ಆವರಿಸಿದ್ದು, ನವವಧು ಗುಡಿಯಾ ಮೂರ್ಛೆ ಹೋಗಿ ರೋಧಿಸುತ್ತಿರುವ ದೃಶ್ಯ ಮನಕಲಕುವಂತಿದೆ.




