
ನವದೆಹಲಿ: ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಶೇ. 50ರಷ್ಟು ಲೋಕಸಭೆ ಸ್ಥಾನಗಳನ್ನು ಹೆಚ್ಚಿಸುವ ಮಸೂದೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಬಲವಾದ ಬೆಂಬಲ ಸೂಚಿಸಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಪ್ರಸ್ತಾವನೆಯಿಂದ ದಕ್ಷಿಣ ಭಾರತದ ರಾಜ್ಯಗಳ ಸಂಸದೀಯ ಪ್ರಾತಿನಿಧ್ಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕುಟುಂಬ ನಿಯಂತ್ರಣ ಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತಂದ ಕಾರಣಕ್ಕೆ ದಕ್ಷಿಣದ ರಾಜ್ಯಗಳ ಸಂಸತ್ ಸ್ಥಾನಗಳು ಕಡಿತಗೊಳ್ಳುತ್ತವೆ ಎಂಬ ಆತಂಕ ಅನಗತ್ಯ ಎಂದಿರುವ ನಾಯ್ಡು, ಸೀಟುಗಳ ಹೆಚ್ಚಳದಿಂದ ದಕ್ಷಿಣದ ಪ್ರಮುಖ ರಾಜ್ಯಗಳ ಅನುಪಾತ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ವಿವರಿಸಿದ್ದಾರೆ. ಜತೆಗೆ, ‘ನಾರಿ ಶಕ್ತಿ ವಂದನ್ ಅಧಿನಿಯಮ್’ ಅಡಿಯಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿ ಜಾರಿಗೊಳಿಸಲು ಇದೊಂದು ಸುವರ್ಣಾವಕಾಶವಾಗಿದ್ದು, ವಿರೋಧ ಪಕ್ಷಗಳು ಇದಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
ದಕ್ಷಿಣ ರಾಜ್ಯಗಳ ಸೀಟುಗಳ ವಿವರ: ಶೇ. 50ರಷ್ಟು ಹೆಚ್ಚಳದ ಬಳಿಕ ಆಂಧ್ರಪ್ರದೇಶದ ಸೀಟುಗಳು 25ರಿಂದ 38ಕ್ಕೆ, ತಮಿಳುನಾಡು 39ರಿಂದ 59ಕ್ಕೆ, ಕರ್ನಾಟಕ 28ರಿಂದ 42ಕ್ಕೆ, ತೆಲಂಗಾಣ 17ರಿಂದ 26ಕ್ಕೆ ಹಾಗೂ ಕೇರಳದ ಸೀಟುಗಳು 20ರಿಂದ 30ಕ್ಕೆ ಏರಿಕೆಯಾಗಲಿವೆ. ಒಟ್ಟಾರೆಯಾಗಿ ದಕ್ಷಿಣದ 5 ರಾಜ್ಯಗಳ ಪ್ರಾತಿನಿಧ್ಯ ಶೇ. 23.76ರಷ್ಟೇ ಮುಂದುವರಿಯಲಿದೆ.
ಮಹಿಳಾ ಮೀಸಲಾತಿಗೆ ಹಾದಿ ಸುಲಭ: ಸಂಸತ್ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸುವುದರಿಂದ ಶೇ. 33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ಯಾರೂ ಕೂಡ ವಿರೋಧ ವ್ಯಕ್ತಪಡಿಸಲು ಅವಕಾಶವಿರುವುದಿಲ್ಲ. ಇದು ಎಲ್ಲರಿಗೂ ಗೆಲುವಿನ ಅವಕಾಶ ಎಂದು ನಾಯ್ಡು ಬಣ್ಣಿಸಿದ್ದಾರೆ.
ಚರಿತ್ರೆಯ ಸರಿಯಾದ ಭಾಗವಾಗಿರಿ: ಮಹಿಳಾ ಮೀಸಲಾತಿಯು ದೀರ್ಘಕಾಲದ ಬೇಡಿಕೆಯಾಗಿದ್ದು, ಇತಿಹಾಸದ ತಪ್ಪು ಭಾಗದಲ್ಲಿರದೆ ಎಲ್ಲಾ ವಿರೋಧ ಪಕ್ಷಗಳು ಈ ಐತಿಹಾಸಿಕ ಮಸೂದೆಗೆ ಒಮ್ಮತದ ಬೆಂಬಲ ಸೂಚಿಸಬೇಕು ಎಂದು ಅವರು ಕರೆ ನೀಡಿದ್ದಾರೆ.




