SUDDIKSHANA KANNADA NEWS/ DAVANAGERE/ DATE:25-07-2024
ದಾವಣಗೆರೆ: ಆಗಸ್ಟ್ 5 ಅಥವಾ 6 ರಂದು ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆದು, ತದನಂತರ ನಾಲೆಗೆ ನೀರು ಹರಿಸಲು ತೀರ್ಮಾನಿಸಬೇಕು ಎಂದು ಕರ್ನಾಟಕ ನೀರಾವರಿ ನಿಗಮದ ಸಭೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ಶಾಸಕರು, ಸಚಿವರು ಚರ್ಚಿಸಿರುವುದು ದುರ್ದೈವ ಸಂಗತಿ ಎಂದು ಜಿಲ್ಲಾ ಬಿಜೆಪಿ ವಕ್ತಾರ, ರೈತ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ಖಂಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಜೀವನಾಡಿ ಭದ್ರಾ ಡ್ಯಾಂ ನೀರಿನ ಮಟ್ಟ ದಿನೇ ದಿನೇ ಹೆಚ್ಚಾಗುತ್ತಿದೆ. ನೀರಿನ ಮಟ್ಟ ಇಂದು ಬೆಳಿಗ್ಗೆ 6 ಗಂಟೆಗೆ 171 ಅಡಿ 6 ಇಂಚು ಇದ್ದು, 26044 ಕ್ಯೂಸೆಕ್ ಒಳಹರಿವು ಇದೆ. ನಿನ್ನೆ ಒಳಹರಿವು 15383 ಕ್ಯೂಸೆಕ್ ಇದ್ದದ್ದು ಇಂದು ಏರಿಕೆಯಾಗಿದೆ. ಡ್ಯಾಂ ತುಂಬುವುದು ಗ್ಯಾರಂಟಿಯಾಗಿದೆ. ರೈತರಲ್ಲಿ ಸಂತಸ ಮನೆ ಮಾಡಿದೆ. ಮೊನ್ನೆ ನಡೆದ ರೈತರ ಸಭೆಯಲ್ಲಿ ಜಿಲ್ಲಾಧಿಕಾರಿಯವರು ಇನ್ನೊಂದೆರಡು ದಿನಗಳಲ್ಲಿ ನಾಲೆಗೆ ನೀರು ಹರಿಸಲಾಗುವುದು ಎಂದು ಹೇಳಿದ್ದರು. ಅದರಂತೆ ಇಂದಿನಿಂದ ನೀರು ಹರಿಸಿದ್ರೆ, ಕಳೆದ ಹಂಗಾಮಿನಲ್ಲಿ ಭೀಕರ ಬಿಸಿಲಿನ ತಾಪಮಾನದಿಂದ ಒಣಗಿರುವ ಕೆರೆ ಕಟ್ಟೆಗಳನ್ನು ತುಂಬಿಸಿಕೊಳ್ಳಬಹುದು ಮತ್ತು ರೈತರು ಭತ್ತ ಬೀಜ ಚೆಲ್ಲಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಡ್ಯಾಂ ನೀರಿನ ಮಟ್ಟ 186 ಅಡಿ ಪೂರ್ಣ ತುಂಬಲು ಬಿಡುವುದಿಲ್ಲ. ಮುಂಜಾಗ್ರತೆ ಕ್ರಮವಾಗಿ ನೀರಿನ ಮಟ್ಟ 182-183 ಅಡಿ ತಲುಪಿದ ತಕ್ಷಣ ಹೊಳೆಗೆ ಹರಿಸಲಾಗುತ್ತದೆ. ಇದರಿಂದ ನೀರು ವ್ಯರ್ಥವಾಗಿ ಹರಿದು ಹೋಗುತ್ತದೆ. ಆದ್ದರಿಂದ ಇಂದು ರಾತ್ರಿಯಿಂದ ನಾಲೆಗೆ ನೀರು ಹರಿಸಬೇಕು ಎಂದು ಬಿ ಎಂ ಸತೀಶ್ ಆಗ್ರಹಿಸಿದ್ದಾರೆ.