SUDDIKSHANA KANNADA NEWS/ DAVANAGERE/ DATE:06-03-2024
ದಾವಣಗೆರೆ: ಬರಗಾಲದಿಂದ ಈ ವರ್ಷ ಕುಡಿಯುವ ನೀರಿಗೆ ಸಮಸ್ಯೆಯಾಗಲಿದ್ದು ಕುಡಿಯುವ ನೀರು ಪೂರೈಕೆ ಮತ್ತು ಮೇವಿನ ಪೂರೈಕೆಗಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದು ಜನರಿಗೆ ತೊಂದರೆಯಾಗದಂತೆ ಬರ ನಿರ್ವಹಣೆ ಮಾಡಲಾಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದರು.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 22 ಗ್ರಾಮಗಳಲ್ಲಿ 27 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಎಲ್ಲೆಲ್ಲಿ ಪ್ಲೋರೈಡ್‍ಯುಕ್ತ ನೀರು ಇದೆ ಅಂತಹ ಕಡೆ
ಒಳ್ಳೆಯ ನೀರು ಪೂರೈಕೆ ಮಾಡಲು ಟ್ಯಾಂಕರ್ ಬಳಸಬೇಕು ಮತ್ತು ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಸೂಚನೆ ನೀಡಿದರು.
ಈ ವೇಳೆ ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ಮಾತನಾಡಿ ನೀರು ಪೂರೈಕೆಗೆ ಟ್ಯಾಂಕರ್ ಬಳಕೆಗೆ ಅನುಮತಿ ನೀಡಿದ್ದು ಜಿಪಿಎಸ್ ಅಳವಡಿಸಿದ ಟ್ಯಾಂಕರ್ ಬಾಡಿಗೆ ಪಡೆಯಲು ಷರತ್ತು ವಿಧಿಸಿದ್ದು ಇದರಿಂದ
ಟ್ಯಾಂಕರ್ ಸಿಗುತ್ತಿಲ್ಲ ಎಂದಾಗ ಯಾವ ಟ್ಯಾಂಕರ್ ಪಡೆಯಲಾಗುತ್ತದೆ, ಅದೇ ಟ್ಯಾಂಕರ್ ಗೆ ಜಿಪಿಎಸ್ ಅಳವಡಿಸಿಕೊಳ್ಳಬೇಕೆಂದರು.
ಶಿಕ್ಷಣ ಮತ್ತು ಆರೋಗ್ಯ;
ಶಿಕ್ಷಣ ಇಲಾಖೆಯಲ್ಲಿ ಕೊಠಡಿಗಳ ಸಮಸ್ಯೆ ಇದ್ದು ಪಾಳುಬಿದ್ದಿರುವ ಕೊಠಡಿಯನ್ನು ಸಂಪೂರ್ಣವಾಗಿ ತೆರವು ಮಾಡಬೇಕು. ಶಾಲೆಗಳಲ್ಲಿ ಗ್ರೂಪ್ ಡಿ. ಸಿಬ್ಬಂದಿಯ ಸಮಸ್ಯೆಯಿಂದ ನಿರ್ವಹಣೆ ಕಷ್ಟವಾಗಿದ್ದು ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುತ್ತದೆ. ಪ್ರತಿಯೊಂದು ಶಾಲೆಯಲ್ಲಿ ಶೌಚಾಲಯ, ಆಟದ ಮೈದಾನ, ಕುಡಿಯುವ ನೀರು ಒದಗಿಸಬೇಕು. ಒಂದೇ ಮಾದರಿಯಲ್ಲಿ ಎಲ್ಲಾ ಶಾಲೆಗಳಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡಲು ಒಂದೇ ಏಜೆನ್ಸಿ ಮೂಲಕ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಆರೋಗ್ಯ ಇಲಾಖೆಯಿಂದ ಎಲ್ಲಾ ತಾಲ್ಲೂಕು ಆಸ್ಪತ್ರೆಳಲ್ಲಿ ಡಯಾಲೀಸಿಸ್ ಆರಂಭಿಸಲಾಗಿದೆ, ಚಿಗಟೇರಿಯಲ್ಲಿ 10 ಯುನಿಟ್‍ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸಭೆಗೆ ತಿಳಿಸಿದಾಗ ಮಾಯಕೊಂಡ ಶಾಸಕರಾದ ಬಸವಂತಪ್ಪನವರು ಡಯಾಲೀಸಿಸ್ ನಿರ್ವಹಣೆಗೆ ನೀಡುವ ಹೊರಗುತ್ತಿಗೆ ಸಂಸ್ಥೆಯವರು ಕೆಲವೇ ವಸ್ತುಗಳನ್ನು ನೀಡಿ ಇನ್ನುಳಿದವುಗಳನ್ನು ಹೊರಗಿನಿಂದ ತರಲು ಹೇಳುತ್ತಿದ್ದಾರೆ ಎಂಬ ದೂರುಗಳಿವೆ. ಈ ಬಗ್ಗೆ ಕ್ರಮ ವಹಿಸಬೇಕೆಂದಾಗ ಸಚಿವರು ಇದನ್ನು ಪರಿಶೀಲಿಸಿ ಕ್ರಮ ವಹಿಸಲು ಮತ್ತು ಚಿಗಟೇರಿ ಆಸ್ಪತ್ರೆಯಲ್ಲಿ ಸಿಬ್ಬಂದಿಯವರು ಮೊಬೈಲ್ ಕರೆ ಮಾಡಿದಾಗ ಜನಪ್ರತಿನಿಧಿಗಳು ಮಾತನಾಡುತ್ತಾರೆ ಎಂದು ಜನರು ಹೇಳಿದರೂ ಸೌಜನ್ಯಯುತವಾಗಿ ವರ್ತಿಸುವುದಿಲ್ಲ ಎಂದಾಗ ಸಚಿವರು ಎಲ್ಲಾ ಸಿಬ್ಬಂದಿಗಳ ಜೊತೆಗೆ ಚಿಗಟೇರಿ ಆಸ್ಪತ್ರೆಯಲ್ಲಿ ಸಭೆ ಮಾಡಿ ನಿರ್ದೇಶನ ನೀಡಲಾಗುತ್ತದೆ ಎಂದರು.
ಹರಿಹರ ಶಾಸಕ ಬಿ.ಪಿ.ಹರೀಶ್ ಅವರು ಉಕ್ಕಡಗಾತ್ರಿಯಲ್ಲಿ ಮಾನಸಿಕವಾಗಿ ನೊಂದವರು ಹೆಚ್ಚು ಜನರು ಬರುತ್ತಾರೆ, ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರನ್ನು ನೇಮಕ ಮಾಡಲು ತಿಳಿಸಿದಾಗ ಖಾಯಂ ವೈದ್ಯರನ್ನು ನೇಮಕ ಮಾಡಲಾಗಿದೆ ಎಂದು ಆರೋಗ್ಯಾಧಿಕಾರಿಯವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ; ವೆಂಟಕೇಶ್ ಎಂ.ವಿ, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.