SUDDIKSHANA KANNADA NEWS/ DAVANAGERE/ DATE:06-03-2024
ದಾವಣಗೆರೆ: ಶಾಂತಿಸಾಗರ ಕುಡಿಯುವ ನೀರಿಗೂ ಆದ್ಯತೆ ನೀಡಬೇಕು.ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೂ ನೀರು ಕೊಡುವ ಮೂಲಕ ಬೆಳೆದಿರುವ ತೋಟಗಾರಿಕೆ ಬೆಳೆಗಳನ್ನು ಉಳಿಸಬೇಕಾಗಿದೆ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದರು.
ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದರು.
ಮುಂದಿನ ಎರಡು ಹಂತದಲ್ಲಿ ನೀರು ಬಿಡುಗಡೆ ಮಾಡುವ ವೇಳೆ ಕೊನೆ ಭಾಗದ ರೈತರಿಗೆ ಮೊದಲ ಆದ್ಯತೆಯಾಗಿ ನೀರು ಕೊಡಲು ಎಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಕುಡಿಯುವ ನೀರಿನ ಪೂರೈಕೆಗೂ ಆದ್ಯತೆಯನ್ನು ನೀಡಲಾಗುತ್ತದೆ ಎಂದು ಭರವಸೆ ನೀಡಿದರು
ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಮಾತನಾಡಿ ಜಿಲ್ಲೆಯ ಬಹುಗ್ರಾಮ ಕುಡಿಯುವ ಯೋಜನೆ ಮತ್ತು ಚಿತ್ರದುರ್ಗಕ್ಕೆ ಶಾಂತಿಸಾಗರದಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು ಶಾಂತಿಸಾಗರದ ನೀರು ಕಡಿಮೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಗ್ಯಾರಂಟಿ ಯೋಜನೆಗಳ ಸಮೀಕ್ಷೆ:
ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲಾಗುತ್ತಿದ್ದು ಯಾರಿಗೆ ಈ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಪರಿಶೀಲನೆ ಕೈಗೊಂಡು ಪರಿಹರಿಸುವ ಕೆಲಸ ಮಾಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಯಡಿ ಕೆಲವು ತಾಂತ್ರಿಕ ಸಮಸ್ಯೆಯಿಂದ ಮೊದಲ ತಿಂಗಳು ಎರಡು ಸಾವಿರ ಬಂದವರಿಗೆ ನಂತರದ ತಿಂಗಳಲ್ಲಿ ಬಂದಿರುವುದಿಲ್ಲ, ಆಧಾರ್ ಜೋಡಣೆ, ಬ್ಯಾಂಕ್ ಕೆವೈಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಜಿಲ್ಲಾಧಿಕಾರಿಯವರು ತಾಂತ್ರಿಕ ಪರಿಣಿತರೊಂದಿಗೆ ಅಭಿಯಾನದ ರೀತಿ ಸಮಸ್ಯೆ ಇತ್ಯಾರ್ಥಕ್ಕೆ ಕ್ರಮ ವಹಿಸಲು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಅನಿರೀಕ್ಷಿತ ಭೇಟಿ ನೀಡಲು ಸಲಹೆ:
ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಒಂದು ಕೆಜಿ ವರೆಗೆ ಅಕ್ಕಿಯನ್ನು ಕಡಿಮೆ ಕೊಡುತ್ತಿರುವ ದೂರುಗಳಿವೆ ಎಂದು ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪನವರು ಪ್ರಸ್ತಾಪಿಸಿದಾಗ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಅನಿರೀಕ್ಷಿತ ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸಲು ತಿಳಿಸಿ ಪ್ರಮಾಣಕ್ಕಿಂತ ಕಡಿಮೆ ಆಹಾರಧಾನ್ಯ ವಿತರಣೆ ಮಾಡುತ್ತಿದ್ದಲ್ಲಿ ಅಂತಹ ನ್ಯಾಯಬೆಲೆ ಅಂಗಡಿಗಳ ಮೇಲೆ ಕ್ರಮ ಜರುಗಿಸಲು ಸೂಚನೆ ನೀಡಿದರು.
ಕೆರೆ ಒತ್ತುವರಿಗೆ ಕ್ರಮ:
ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡರವರು ಕೆಲವರು ಕೆರೆ ಒತ್ತುವರಿ ಮಾಡುವ ಜೊತೆಗೆ ಸ್ಮಶಾನವನ್ನು ಒತ್ತುವರಿ ಮಾಡಿದ್ದಾರೆ ಎಂದಾಗ ಸರ್ಕಾರಿ ಜಾಗವನ್ನು ಗುರುತಿಸಿ ಒತ್ತುವರಿ ಮಾಡದಂತೆ ಬೀಟ್ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಮತ್ತು ಕೆರೆ ಒತ್ತುವರಿ ಬಗ್ಗೆ ಜಿಲ್ಲಾಧಿಕಾರಿಯವರು ಕ್ರಮ ಕೈಗೊಳ್ಳುವರೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಟಕೇಶ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.