SUDDIKSHANA KANNADA NEWS/ DAVANAGERE/ DATE:28-06-2024
ಬೆಂಗಳೂರು: 2021ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಶೀಘ್ರವಾಗಿ ನೇಮಕಾತಿ ಆದೇಶ ನೀಡಬೇಕೆಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರೆ ಮಾಡಿ ಆಗ್ರಹಿಸಿದರು.
ನಗರದ ನಿವಾಸದಲ್ಲಿ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅನಗತ್ಯವಾಗಿ ವಿಳಂಬವಾಗುತ್ತಿರುವ ನೇಮಕಾತಿ ಬಗ್ಗೆ ತಿಳಿಸಿದ ಅಭ್ಯರ್ಥಿಗಳು, ಮೂರು ವರ್ಷಗಳು ಮುಗಿದರೂ ನೇಮಕಾತಿ ಆದೇಶ ಪ್ರತಿಗಾಗಿ ಕಾಯುತ್ತಿದ್ದಾಗಿ ವಿವರಿಸಿದ ಅಭ್ಯರ್ಥಿಗಳು ಕೆಲವು ಅಂಶಗಳನ್ನು ಬರಗೂರು ಅವರಲ್ಲಿ ಹಂಚಿಕೊಂಡರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ-2021ರ ನೇಮಕಾತಿ ಅಧಿಸೂಚನೆ 2021 ರಲ್ಲಿ ಸಪ್ಟೆಂಬರ್ ಆಗಿ, 2022ರ ಮಾರ್ಚ್ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮುಗಿದು, 2023 ಫೆಬ್ರವರಿಯಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಿ, ಅಂತಿಮ ಆಯ್ಕೆಪಟ್ಟಿಯು ದಿ:04/11/2023ರಂದು ವಿಶೇಷ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟವಾಗಿದೆ. ಸದರಿ ನೇಮಕಾತಿಗೆ ಸಂಬಂಧಿಸಿದಂತಹ ಪೊಲೀಸ್ ಮತ್ತು ಮೆಡಿಕಲ್ ವೆರಿಫಿಕೇಶನ್, ಸಿಂಧುತ್ವ ಪ್ರಮಾಣ ಪತ್ರ, ಅಂಕಪಟ್ಟಿಗಳ ನೈಜತೆಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು ಶೇ.90ರಷ್ಟು ಪೂರ್ಣವಾಗಿ, ಆ ಪ್ರಮಾಣ ಪತ್ರಗಳನ್ನು ಸರ್ಕಾರ ಅನುಮೋದಿಸಿದೆ.
ಹೈದರಾಬಾದ್ ಕರ್ನಾಟಕ ವಿಭಾಗದ ಮೀಸಲಾತಿ ವಿಷಯವಾಗಿ ಬಂದಂತಹ ಸರ್ಕಾರದ ಸುತ್ತೋಲೆ ಸಂಖ್ಯೆ ಸಿಆಸುಇ/೦3/ಹೈಕಕೋ/2009 ದಿನಾಂಕ 1 ಫೆಬ್ರವರಿ 2023ನ್ನು ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಎತ್ತಿಹಿಡಿದಿದ್ದು, ಇದೇ ವಿಷಯವಾಗಿ 13 ಮಾರ್ಚ್ 2024 ರಂದು ಉಚ್ಛನ್ಯಾಯಾಲಯದ ಮಧ್ಯಂತರ ತೀರ್ಪು ಸಹ ಕೌನ್ಸಿಲಿಂಗ್ ನಡೆಸಿ, ಸ್ಥಳನಿಯುಕ್ತಿಗೊಳಿಸಬಹುದೆಂದು ಆದೇಶ ನೀಡಿದೆ.
ಈ ಆದೇಶಾನುಸಾರ ಸರ್ಕಾರವು ಈಗಾಗಲೇ ಕೆ.ಪಿ.ಟಿ.ಸಿ.ಎಲ್. ಇಲಾಖೆಯ ಎ.ಇ. ಹುದ್ದೆಗಳಿಗೆ, ಪ್ರಾಥಮಿಕ ಶಾಲಾ ಸಾಕ್ಷರತಾ ಇಲಾಖೆಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗಳಿಗೆ, (ಜಿ.ಪಿ.ಎಸ್.ಟಿ.ಆರ್.) ಪಿ.ಡಬ್ಲ್ಯೂ.ಡಿ. ಇಲಾಖೆಯ
ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಮತ್ತು ಆರ್.ಡಿ.ಪಿ.ಆರ್. ಇಲಾಖೆಯ ಎ.ಇ. ಹುದ್ದೆಗಳಿಗೆ ಷರತ್ತು ಬದ್ಧ ನೇಮಕಾತಿ ಆದೇಶವನ್ನು ನೀಡಲಾಗಿದೆ.
ಈ ಎಲ್ಲಾ ಉದಾಹರಣೆಗಳು ಇದ್ದಾಗ್ಯೂ, ಎರಡು ಸಲ ತಾತ್ಕಾಲಿಕ ವರ್ಗಾವಣೆ ಮತ್ತು ಸ್ಥಳನಿಯುಕ್ತಿಯ ವೇಳಾಪಟ್ಟಿ ಪ್ರಕಟಿಸಿ, ಹಿಂಪಡೆದಿರುತ್ತಾರೆ. ಜೊತೆಗೆ ಸನ್ಮಾನ್ಯ ಉನ್ನತ ಶಿಕ್ಷಣ ಸಚಿವರು ಅನಗತ್ಯ ಕಾರಣಗಳನ್ನು ನೀಡುತ್ತಿದ್ದಾರೆ. ಕೂಡಲೇ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ನೆಪ ಹೇಳದೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಆಯ್ಕೆಯಾದ 1208 ಅಭ್ಯರ್ಥಿಗಳಿಗೂ ಷರತ್ತು ಬದ್ಧ ನೇಮಕಾತಿ ಆದೇಶವನ್ನು ನೀಡಲು ಸರ್ಕಾರವನ್ನು ಆಗ್ರಹಪಡಿಸಬೇಕೆಂದು ಅಭ್ಯರ್ಥಿಗಳು ಬರಗೂರು ರಾಮಚಂದ್ರಪ್ಪರನ್ನು ಕೋರಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಬರಗೂರು ರಾಮಚಂದ್ರಪ್ಪರು ಅಭ್ಯರ್ಥಿಗಳ ಪರವಾಗಿ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಭರವಸೆ ನೀಡಿದರು.