SUDDIKSHANA KANNADA NEWS/ DAVANAGERE/ DATE:01-03-2024
ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿರುವ ಘಟನೆ ರಾಜಧಾನಿಯ ಜನರನ್ನು ಬೆಚ್ಚಿಬೀಳಿಸಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ದಿನದಿಂದ ದಿನಕ್ಕೆ ಕುಸಿಯಲಾರಂಭಿಸಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಕೊಲೆ, ಸುಲಿಗೆ, ಗೂಂಡಾಗಿರಿ, ಮಹಿಳಾ ದೌರ್ಜನ್ಯಗಳು ಸರಣೀ ರೂಪದಲ್ಲಿ ವರದಿಯಾಗುತ್ತಲೇ ಇವೆ, ದೇಶ ಕಂಟಕ ಶಕ್ತಿಗಳು ವಿಧಾನ ಸೌಧದೊಳಗೇ ಬಂದು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗುವಷ್ಟರ ಮಟ್ಟಿಗೆ ಅಟ್ಟಹಾಸ ಮೆರೆಯುತ್ತಿದ್ದಾರೆ. ಇದೀಗ ಜನನಿಬಿಡ ಹೋಟೆಲ್ ಪ್ರವೇಶಿಸಿ ಬಾಂಬ್ ಸ್ಫೋಟಿಸಿ ಅಮಾಯಕರನ್ನು ಗಾಯಗೊಳಿಸಿ ತೀವ್ರ ಆತಂಕದ ವಾತಾವರಣ ಸೃಷ್ಠಿಸಿದೆ ಎಂದು ಹೇಳಿದ್ದಾರೆ.
ಸುಭದ್ರ ಕರ್ನಾಟಕಕ್ಕೆ ಗಂಡಾಂತರದ ಆತಂಕ ತರುವ ಚಟುವಟಿಕೆಗಳನ್ನು ಬಗ್ಗುಬಡಿಯುವಲ್ಲಿ ಮೀನಾಮೇಷ ಎಣಿಸುತ್ತಾ ಕಾಂಗ್ರೆಸ್ ಸರ್ಕಾರ ಮತ ಬ್ಯಾಂಕ್ ಲೆಕ್ಕಾಚಾರದ ಹೆಜ್ಜೆಗಳ ದಾರಿ ಬದಲಿಸಿಕೊಳ್ಳದೇ ಹೋದರೆ ಅಧಿಕಾರದಿಂದ ಕೆಳಗಿಳಿಸಿ ವಿಧಾನಸೌಧದಿಂದ ಹೊರ ಕಳಿಸುವ ದಾರಿ ತೋರಿಸುವ ಹೋರಾಟ ಬಿಜೆಪಿ ಕೈಗೆತ್ತಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪಾ’ಕೈ’ಸ್ತಾನ್ ಜಿಂದಾಬಾದ್ ಎಂದವರ ರಕ್ಷಣೆ, ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದವ ಬ್ರದರ್, ಡಿಜಿ ಹಳ್ಳಿ- ಕೆಜಿ ಹಳ್ಳಿಯ ಪಿಎಫ್ಐ ಗಲಭೆಕೋರರು ಅಮಾಯಕರು ಎನ್ನುವ ಕಾಂಗ್ರೆಸ್ ಸರ್ಕಾರದ ತುಘಲಕ್ ದರ್ಬಾರಿನ ಪರಿಣಾಮವೇ ಇಂದು ರಾಜಧಾನಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಲು ಕಾರಣ ಎಂದು ಬಿಜೆಪಿ ಟ್ವೀಟಾಸ್ತ್ರ ಮಾಡಿದೆ.
ಗೃಹ ಸಚಿವ ಡಾ. ಪರಮೇಶ್ವರ್ ಅವರಂತೂ ರಾಜ್ಯದಲ್ಲಿ ಅರಾಜಕತೆಯನ್ನೇ ಸೃಷ್ಟಿ ಮಾಡಿದ್ದಾರೆ. ಬಂಧಿತ ಭಯೋತ್ಪಾದಕರನ್ನು ಈಗಲೇ ಉಗ್ರರೆಂದು ಹೇಳಲು ಸಾಧ್ಯವಿಲ್ಲ ಎನ್ನುವ ಮೂಲಕ ಹಂತಕರ ರಕ್ಷಣೆಗೆ ಮೊದಲು ಬುನಾದಿ ಹಾಕಿದ್ದಾರೆ. ಅಧಿಕಾರಕ್ಕೆ ಬಂದ 9 ತಿಂಗಳಲ್ಲಿಯೇ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಅಶಾಂತಿಯ ಬೀಡನ್ನಾಗಿ ಮಾಡಿದೆ ಎಂದು ಆರೋಪಿಸಿದೆ.