SUDDIKSHANA KANNADA NEWS/ DAVANAGERE/ DATE:16-08-2024
ದಾವಣಗೆರೆ ಜಿಲ್ಲೆಯ ಹಿರಿಯ ಕಮ್ಯುನಿಸ್ಟ್ ಮುಖಂಡ ಕಾಮ್ರೇಡ್ ಆನಂದರಾಜ್ ಅವರು ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಬೆಳಿಗ್ಗೆ 6 ಗಂಟೆ 5 ನಿಮಿಷ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಅಲ್ಪಾವಧಿಯ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದಾವಣಗೆರೆಯ ಕೆಟಿಜೆ ನಗರದ 14 ನೇ ತಿರುವಿನಲ್ಲಿರುವ ತಮ್ಮ ಸ್ವ ಗೃಹದಲ್ಲಿ ಕೊನೆಯುಸಿರೆಳೆಯುವುದರ ಮೂಲಕ ದಾವಣಗೆರೆ ಜಿಲ್ಲೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಮತ್ತೊಂದು ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.
2021 ರ ಇಸವಿ ಮೇ ತಿಂಗಳಲ್ಲಿ ಕಾರ್ಮಿಕ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ ಅವರ ಅಗಲುವಿಕೆಯ ನೋವನ್ನು ಮರೆಯುವುದರೊಳಗೆ ಮತ್ತೊಬ್ಬ ಹಿರಿಯ ಕಾರ್ಮಿಕ ನಾಯಕನ ನಿರ್ಗಮನವಾಗಿರುವುದು ಕಾರ್ಮಿಕ ವರ್ಗಕ್ಕೆ ಬರಸಿಡಿಲು
ಬಡಿದಂತಾಗಿದೆ.
ಮೂಲತಃ ತಮಿಳುನಾಡಿನವರು:
ಮೂಲತಃ ತಮಿಳುನಾಡಿನವರಾದ ಆನಂದರಾಜ್ ರವರು 1962 ರಲ್ಲಿ ಸಿದ್ಧೇಶ್ವರ ಮಿಲ್ಲಿಗೆ ಕಾರ್ಮಿಕನಾಗಿ ಸೇರಿ ಮುಂದೆ ಕಾರ್ಮಿಕ ನಾಯಕನಾಗಿ ಬೆಳೆದರು. ಅಲ್ಲಿ ಸರಿಸುಮಾರು 4 ದಶಕಗಳವರೆಗೆ ಕೆಲಸ ಮಾಡಿ ಅಲ್ಲಿನ ಯೂನಿಯನ್ನ ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ಬಹುಮುಖ್ಯ ಜವಾಬ್ದಾರಿಗಳನ್ನು ನಿಭಾಯಿಸಿದರು.
ಮಿಲ್ ಮಾಲೀಕರ ವಿರುದ್ಧ ಹೋರಾಟ:
2002 ರಲ್ಲಿ ಮಿಲ್ ಮುಚ್ಚುವವರೆಗೂ ಅಲ್ಲಿ ಕೆಲಸ ಮಾಡಿದರು. ಮಿಲ್ ಮುಚ್ಚಿದ ತರುವಾಯವೂ ಕಾರ್ಮಿಕರಿಗೆ ಮಾಲೀಕರಿಂದ ಬರಬೇಕಾದ ಹಣವನ್ನು ಕೊಡಿಸುವಲ್ಲಿ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ.
ನೋಡಲು ಕೃಷ ಶರೀರದ ಮೈಕಟ್ಟನ್ನು ಹೊಂದಿದ್ದರೂ ಕಮ್ಯುನಿಸಮ್ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡ ಹಾರ್ಡ್ ಕೋರ್ ಕಮ್ಯುನಿಸ್ಟ್ ಆಗಿದ್ದರು. ಕಾಮ್ರೇಡ್ ಪಂಪಾಪತಿಯವರ ನೆರಳಿನಲ್ಲೇ ಬೆಳೆದ ಆನಂದರಾಜ್ ಕಾರ್ಮಿಕ ಸಂಘಟನೆಯ ಎಲ್ಲ ಪಟ್ಟುಗಳನ್ನು ಕಲಿತಿದ್ದರು. ಕಾಮ್ರೇಡ್ ಪಂಪಾಪತಿಯವರ ಬಲಗೈಯಂತೆ ಕೆಲಸ ಮಾಡಿದ್ದರೂ ಎಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸದೇ ಪಕ್ಷದ ಕೆಲಸಗಳನ್ನು ಬಹು ನಿಷ್ಠೆಯಿಂದ ನಿಭಾಯಿಸಿದವರು. ಅವರು ಮನಸ್ಸು ಮಾಡಿದ್ದರೆ ಕನಿಷ್ಠ ದಾವಣಗೆರೆ ನಗರಸಭೆಯ ಸದಸ್ಯರಾದರೂ ಆಗಬಹುದಿತ್ತು.
ಕಮ್ಯುನಿಸ್ಟ್ ಸಾಮ್ರಾಜ್ಯದಲ್ಲೂ ಸರಳತೆ:
ಯಾಕೆಂದರೆ 70-80 ದಶಕದಲ್ಲಿ ದಾವಣಗೆರೆಯಲ್ಲಿ ಕಮ್ಯುನಿಸ್ಟರ ಪ್ರಭಾವ ಅಷ್ಟಿತ್ತು. ಆದರೆ ಎಲ್ಲರೂ ಚುನಾವಣಾ ರಾಜಕಾರಣಿಗಳಾದರೆ ಪಕ್ಷ ಮತ್ತು ಸಂಘಟನೆಯ ಕೆಲಸ ಮಾಡುವವರಾರು ಎನ್ನುವ ಸ್ಪಷ್ಟತೆ ಅವರಲ್ಲಿತ್ತು.
ಹಾಗಾಗಿ ಚುನಾವಣಾ ರಾಜಕಾರಣದಿಂದ ದೂರವೇ ಉಳಿದರು. 1970 ರಲ್ಲಿ ಮಾಲೀಕ ವರ್ಗದ ಗೂಂಡಾಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಆನಂದರಾಜ್ ರವರು ಕಾಮ್ರೇಡ್ ಸುರೇಶ್, ಕಾಮ್ರೇಡ್ ಶೇಖರಪ್ಪ ಅವರಂತೆಯೇ ಕೊಲೆಯಾಗಬೇಕಾಗಿತ್ತು. ಆದರೆ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಕಾಮ್ರೇಡ್ ಪಂಪಾಪತಿ ಹಾಗೂ ಕಾಮ್ರೇಡ್ ಹೆಚ್.ಕೆ.ರಾಮಚಂದ್ರಪ್ಪ ಅವರ ಅತ್ಯಂತ ಆಪ್ತ ಒಡನಾಡಿಯಾಗಿದ್ದರು. ದಾವಣಗೆರೆಯಲ್ಲಿ ಕಾರ್ಮಿಕ ಯುಗದ ಉತ್ತುಂಗ ಹಾಗೂ ಬಹುತೇಕ ರಾಜಕೀಯ ಅವನತಿ ಎರಡಕ್ಕೂ ಸಾಕ್ಷಿಯಾಗಿದ್ದ ಆನಂದರಾಜ್ ಪ್ರಸ್ತುತ ಕಾಲಮಾನದ ಅತ್ಯಂತ ಅನುಭವಿ ಹಾಗೂ ಹಿರಿಯ ಕಮ್ಯುನಿಸ್ಟ್ ಆಗಿದ್ದರು.
ಕೋಪಿಷ್ಟರಲ್ಲ, ತಾಳ್ಮೆ, ಸಮಾಧಾನದ ವ್ಯಕ್ತಿ:
ಕಮ್ಯುನಿಸ್ಟರು ಕೋಪಿಷ್ಟರು ಎನ್ನುವ ಮಾತಿದೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಅತ್ಯಂತ ತಾಳ್ಮೆ, ಸಮಾಧಾನದಿಂದ ಸಂಘಟನೆಯ ಕೆಲಸಗಳನ್ನು ಮಾಡುತ್ತಿದ್ದರಿಂದ ಎಲ್ಲಾ ಕಾರ್ಮಿಕರಿಗೂ ಅದರಲ್ಲೂ ಬಹುಮುಖ್ಯವಾಗಿ ಮಹಿಳಾ ಕಾರ್ಮಿಕರಿಗೆ ಅಚ್ಚುಮೆಚ್ಚಿನ ನಾಯಕರಾಗಿದ್ದರು. ಅವರ ಸಮಸ್ಯೆಗಳನ್ನು ಸಮಾಧಾನದಿಂದ ಮತ್ತು ತಾಳ್ಮೆಯಿಂದ ಕೇಳಿಸಿಕೊಂಡು ಅವರಿಗೆ ಸ್ಪಂದಿಸುವ ಗುಣ ಅವರಲ್ಲಿತ್ತು. ಈ ಅವರ ಗುಣ ಬಹುತೇಕರಿಗೆ ಮೆಚ್ಚುಗೆಯಾಗುತ್ತಿತ್ತು.
ಭಾರತ ಕಮ್ಯುನಿಸ್ಟ್ ಪಕ್ಷ, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ನ ಜಿಲ್ಲಾ ಸಮಿತಿಗಳ ಹಾಗೂ ಕಾಂ.ಸುರೇಶ್ ಶೇಖರಪ್ಪ ಪಂಪಾಪತಿ ರೈತ ಕಾರ್ಮಿಕರ ಕಲ್ಯಾಣ ಮಂಡಳಿಗಳ ಖಜಾಂಚಿಯಾಗಿ ಅತ್ಯಂತ ಪಾರದರ್ಶಕ ಆಡಳಿತವನ್ನು ನಡೆಸಿ ಮೂರೂ ಸಂಘಟನೆಗಳ ಆರ್ಥಿಕ ಶಿಸ್ತನ್ನು ಕಾಪಾಡುವುದರ ಮೂಲಕ ತಾನೊಬ್ಬ ಕಾರ್ಮಿಕ ಮುಖಂಡ ಮಾತ್ರವಲ್ಲದೆ ಒಬ್ಬ ಶಿಸ್ತಿನ ಆಡಳಿತಗಾರ ಎಂತಲೂ ಸಾಬೀತು ಪಡಿಸಿದ್ದರು.
ಅಧಿಕಾರಕ್ಕೆ ಆಸೆಪಟ್ಟವರಲ್ಲ:
ಹೆಚ್ ಕೆ ಆರ್ ಕಾಲದಲ್ಲೂ ಖಜಾಂಚಿಗಳಾಗಿದ್ದ ಆನಂದರಾಜ್ರವರು ಹೆಚ್ಕೆಆರ್ ತರುವಾಯ ಅವರಿದ್ದ ಪಕ್ಷದ ಕಾರ್ಯದರ್ಶಿ ಸ್ಥಾನ, ಎಐಟಿಯುಸಿ ಜಿಲ್ಲಾಧ್ಯಕ್ಷ ಸ್ಥಾನ ಹಾಗೂ ಟ್ರಸ್ಟ್ನ ಕಾರ್ಯದರ್ಶಿ ಸ್ಥಾನವನ್ನು ಹೊಂದುವ ಎಲ್ಲ
ಅವಕಾಶವಿದ್ದರೂ ಪಕ್ಷದ ಕಾರ್ಯದರ್ಶಿ ಹಾಗೂ ಟ್ರಸ್ಟ್ನ ಕಾರ್ಯದರ್ಶಿ ಸ್ಥಾನಕ್ಕೆ ಅವರಗೆರೆ ಚಂದ್ರು ಅವರನ್ನು, ಎಐಟಿಯುಸಿ ಅಧ್ಯಕ್ಷ ಸ್ಥಾನಕ್ಕೆ ಕೆ.ರಾಘವೇಂದ್ರ ನಾಯರಿ ಅವರನ್ನು, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹೆಚ್.ಜಿ.ಉಮೇಶ್ ಅವರಗೆರೆ ಅವರನ್ನು ನೇಮಕ ಮಾಡುವುದರ ಮೂಲಕ ಹೊಸ ನಾಯಕರು ಬೆಳೆಯಲು ಅವಕಾಶ ಮಾಡಿಕೊಟ್ಟು ತಾವು ಖಜಾಂಚಿಗಳಾಗಿಯೇ ಉಳಿದು ತಾನೊಬ್ಬ ಹೊಸ ತಲೆಮಾರಿನ ನಾಯಕರನ್ನು ಬೆಳೆಸುವ ಕಮ್ಯುನಿಸ್ಟ್ ನಾಯಕ ಎಂದು ಇತರರಿಗೆ ಮಾದರಿಯಾದರು.
ಸ್ವಾಭಿಮಾನಿ ಬದುಕು ಆದರ್ಶನೀಯ:
ಅವರು ಅತೀವ ಇಷ್ಟ ಪಡುತ್ತಿದ್ದ ಕಾಮ್ರೆಡ್ ಪಂಪಾಪತಿಯವರು ಮೂರು ಬಾರಿ ಶಾಸಕರಾದರೂ ಹೇಗೆ ಅತೀ ಸರಳವಾಗಿ ಬದುಕಿದರೋ ಅದೇ ಮಾದರಿಯಲ್ಲಿ ಆನಂದರಾಜ್ ಸಹ ತಮ್ಮ ಜೀವಿತಾವಧಿಯಲ್ಲಿ ಕಮ್ಯುನಿಸ್ಟ್ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕೊನೆ ತನಕವೂ ಸ್ವಾಭಿಮಾನಿ ಮತ್ತು ಶ್ರಮ ಜೀವಿ ಕಮ್ಯುನಿಸ್ಟ್ ಆಗಿಯೇ ಕೊನೆಯುಸಿರೆಳೆದರು. ಅವರ ಜೀವನವು ಈಗಿನ ತಲೆಮಾರಿನ ಕಮ್ಯುನಿಸ್ಟ್ ನಾಯಕರಿಗೆ ಮಾದರಿಯಾಗಬೇಕಾಗಿದೆ.
ಲೇಖಕರು: ಕೆ.ರಾಘವೇಂದ್ರ ನಾಯರಿ, ಅಧ್ಯಕ್ಷರು, ಎಐಟಿಯುಸಿ ದಾವಣಗೆರೆ ಜಿಲ್ಲಾ ಸಮಿತಿ