ಒಂದು ದಿನ ನೀವು ಮನೆಗೆ ತಡವಾಗಿ ಹೋದರೆ ಮೊದಲು ಬಾಗಿಲ ಕಡೆ ನೋಡುವ ಕಣ್ಣುಗಳು ಯಾರವು ಗೊತ್ತೇ! ಅದು ನಿಮ್ಮ ಅಮ್ಮನ ಕಣ್ಣುಗಳು.ನಿಮಗೆ ಸಣ್ಣ ಜ್ವರ ಬಂದರು ರಾತ್ರಿ ಇಡೀ ನಿದ್ರೆ ಮಾಡದೆ ನಿಮ್ಮ ತಲೆಯ ಬಳಿ ಕುಳಿತುಕೊಳ್ಳುವವರು ಯಾರು ಅದು ನಿಮ್ಮ ಅಮ್ಮ.
ನಿಮಗೆ ಬೇಕಾಗಿರುವ ಊಟ ,ಬಟ್ಟೆ, ಶಿಕ್ಷಣಕ್ಕಾಗಿ ತನ್ನ ಆಸೆಯನ್ನು ಬದಿಗಿಡುವವರು ಯಾರು ಗೊತ್ತೇ! ಅದು ನಿಮ್ಮ ಅಪ್ಪ. ಬೆಳಗಿನ ಜಾವ ಮನೆಯ ಬಾಗಿಲು ತೆರೆದಿತ್ತು ಅಡುಗೆ ಮನೆಯಲ್ಲಿದ್ದ ಚಹಾದ ಸುವಾಸನೆ ಮನೆಯನ್ನೆಲ್ಲ ತುಂಬಿಕೊಂಡಿತ್ತು. ಆದರೆ ಒಬ್ಬ ತಾಯಿಯ ಕಣ್ಣು ಮಾತ್ರ ಬಾಗಿಲ ದಾರಿಯಲ್ಲಿ ನೆಟ್ಟಿತ್ತು. ಗಡಿಯಾರದ ಮುಳ್ಳುಗಳು ಮುಂದೆ ಸಾಗುತ್ತಿದ್ದರು ಆಕೆಯ ಹೃದಯದ ತುಡಿತ ಮಾತ್ರ ಹೆಚ್ಚಾಗುತ್ತದೆ, ಇನ್ನು ಬಂದಿಲ್ಲವೇ ನನ್ನ ಮಗ! ಈ ಒಂದು ಪ್ರಶ್ನೆಯೇ ಆಕೆಯ ಮನಸ್ಸಿನಲ್ಲಿ ಸಾವಿರ ಬಾರಿ ಮೂಡುತ್ತಿತ್ತು ತಂದೆ ಹೊರಗೆ ಶಾಂತವಾಗಿ ಕುಳಿತಿದ್ದ ಆದರೆ ಆತನ ಮನಸ್ಸಿನೊಳಗೆ ಅಲೆಗಳು ಎದ್ದಿದ್ದವು ತನ್ನ ಮಗನ ವಿದ್ಯಾಭ್ಯಾಸಕ್ಕಾಗಿ ಮಾಡಿದ ಸಾಲಗಳು ಬಿಸಿಲಿನಲ್ಲಿ ಸುರಿದ ಬೆವರ ಕೈಗಳು ಮೇಲಿನ ಬಿರುಕುಗಳು ಎಲ್ಲವೂ ಅವನಿಗೆ ನೆನಪಾಗುತ್ತಿತ್ತು ಅವನ ಕನಸು ಒಂದೇ ನನ್ನ ಮಗ ಸಮಾಜದಲ್ಲಿ ತಲೆಯೆತ್ತಿ ಬದುಕಬೇಕು ಅಮ್ಮನ ಕನಸು ಇನ್ನೂ ಸರಳವಾಗಿತ್ತು! ನನ್ನ ಮಗ ಆರೋಗ್ಯವಾಗಿರಲಿ, ಸಂತೋಷವಾಗಿರಲಿ.
ಒಮ್ಮೆ ನಿಮ್ಮ ಮನೆಗೆ ಹೋಗಿ ನಿಮ್ಮ ತಾಯಿಯ ಮುಖವನ್ನು ಮೌನವಾಗಿ ನೋಡಿ ನಿಮ್ಮ ತಂದೆಯ ದಣಿದ ಕೈಗಳನ್ನು ನೋಡಿ ಅವರು ನಿಮ್ಮಿಂದ ಹಣ ಕೇಳುವುದಿಲ್ಲ, ಐಶ್ವರ್ಯ ಕೇಳುವುದಿಲ್ಲ, ಒಳ್ಳೆಯ ಬದುಕು ಮತ್ತು ಆರೋಗ್ಯದಿಂದಿರು ಸಮಾಜದಲ್ಲಿ ಒಳ್ಳೆಯ ಹೆಸರು ಮಾಡು ಇಷ್ಟೇ ಅವರ ಕನಸು.
ಒಂದು ದಿನ ನೀವು ಯಶಸ್ಸಿನ ಶಿಖರವನ್ನು ಏರಿದರೆ ಅತಿ ಹೆಚ್ಚು ಸಂತೋಷ ಪಡುವವರು ನಿಮ್ಮ ತಂದೆ-ತಾಯಿ ಆದರೆ ಒಂದು ದಿನ ನೀವು ನಶೆಯ ಕತ್ತಲೆಗೆ ಜಾರಿದರೆ ಅತಿ ಹೆಚ್ಚು ಅಳುವವರು ಅವರೇ!!! ಒಬ್ಬ ವಿದ್ಯಾರ್ಥಿಯ ಬದುಕಿನಲ್ಲಿ ಕನಸುಗಳೇ ದೊಡ್ಡ ಸಂಪತ್ತು. ಪುಸ್ತಕಗಳು ಅವನ ಗೆಳೆಯರು, ಶಿಕ್ಷಕರು ಅವನ ದಾರಿ ದೀಪ, ತಂದೆ ತಾಯಿಯ ಆಶೀರ್ವಾದ ಅವನ ಶಕ್ತಿ. ಆದರೆ “ಒಂದು ದಿನ ಒಂದು ತಪ್ಪು ಸ್ನೇಹ” “ಒಂದು ಕ್ಷಣದ ಕುತೂಹಲ” “ಒಮ್ಮೆ ಪ್ರಯತ್ನ ಮಾಡಿದರೆ ಏನಾಗುತ್ತದೆ”? ಎಂಬ ಒಂದು ತಪ್ಪು ಯೋಚನೆ ಅಲ್ಲಿಯೇ ಆರಂಭವಾಗುತ್ತದೆ,“ಮಾದಕ ವ್ಯಸನದ ಕತ್ತಲೆ”ಮೊದಲು ಅದು “ಸ್ನೇಹಿತನಂತೆ” ಕಾಣುತ್ತದೆ. ನಂತರ ನಿಧಾನವಾಗಿ ನಿಮ್ಮ ಸಮಯವನ್ನು ಕಸಿದುಕೊಳ್ಳುತ್ತದೆ.
ನಿಮ್ಮ ಆತ್ಮವಿಶ್ವಾಸವನ್ನು ಕಸಿದುಕೊಳ್ಳುತ್ತದೆ, ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ, ನಿಮ್ಮ ಕನಸುಗಳನ್ನು ಮುರಿಯುತ್ತದೆ, ಕೊನೆಗೆ ನಿಮ್ಮನ್ನು ಪ್ರೀತಿಸುವ ಪ್ರತಿಯೊಬ್ಬರ ಹೃದಯವನ್ನು ಒಡೆಯುತ್ತದೆ. ಮಾದಕ ವ್ಯಸನ ಕೇವಲ ಒಂದು ಕೆಟ್ಟ ಅಭ್ಯಾಸವಲ್ಲ, ಅದು ಒಂದು “ಮೌನ ಶತ್ರು”! ಅದು ವ್ಯಕ್ತಿತ್ವವನ್ನು ಕುಗ್ಗಿಸುತ್ತದೆ, ಆರೋಗ್ಯವನ್ನು ಹಾಳು ಮಾಡುತ್ತದೆ, ಕುಟುಂಬದ ನೆಮ್ಮದಿಯನ್ನು ನಾಶ ಮಾಡುತ್ತದೆ, ಸ್ನೇಹವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ, ಸಮಾಜದಲ್ಲಿ ಗೌರವವನ್ನು ಕಸಿದುಕೊಳ್ಳುತ್ತದೆ. ಕೊನೆಗೆ “ಬದುಕನ್ನೇ ಕತ್ತಲೆಗೆ”ತಳ್ಳುತ್ತದೆ ಒಬ್ಬ ವಿದ್ಯಾರ್ಥಿ ವ್ಯಸನಕ್ಕೆ ಬಲಿಯಾದಾಗ ಒಬ್ಬ ವ್ಯಕ್ತಿ ಮಾತ್ರ ಸೋಲುವುದಿಲ್ಲ, ಒಬ್ಬ ತಾಯಿ ಆಳುತ್ತಾಳೆ, ಒಬ್ಬ ತಂದೆ ಕುಸಿದು ಬಿಡುತ್ತಾನೆ, ಒಬ್ಬ ಶಿಕ್ಷಕ ತನ್ನ ಶ್ರಮ ವ್ಯರ್ಥವಾಯಿತು ಎಂದು ನೋವು ಪಡುತ್ತಾನೆ, ಒಂದು ಕುಟುಂಬ ಕತ್ತಲೆಯಾಗುತ್ತದೆ, ಒಂದು ರಾಷ್ಟ್ರ ತನ್ನ ಭವಿಷ್ಯದ ಬೆಳಕನ್ನು ಕಳೆದುಕೊಳ್ಳುತ್ತದೆ.
“ಇಂದಿನ ಯುವ ಜನತೆ ಭಾರತದ ಅಮೂಲ್ಯ ಸಂಪತ್ತು ಅವರ ಕನಸುಗಳಲ್ಲಿ ನಾಳಿನ ಭಾರತ ಅಡಗಿದೆ ಅವರ ಜ್ಞಾನದಲ್ಲಿ ದೇಶದ ಅಭಿವೃದ್ಧಿ ಇದೆ” ಅವರ ವ್ಯಕ್ತಿತ್ವದಲ್ಲಿ ಭಾರತದ ಗೌರವವಿದೆ ಯುವಶಕ್ತಿ ತನ್ನ ದಿಕ್ಕು ತಪ್ಪಿದರೆ ರಾಷ್ಟ್ರ ದುರ್ಬಲವಾಗುತ್ತದೆ. ಆದರೆ ಯುವಶಕ್ತಿ ಜ್ಞಾನ ಸಂಸ್ಕಾರ ಶಿಸ್ತು ಮತ್ತು ಸೃಜನಶೀಲತೆಯ ದಾರಿಯಲ್ಲಿ ನಡೆದರೆ ಭಾರತ ವಿಶ್ವಕ್ಕೆ ದಾರಿ ದೀಪವಾಗುತ್ತದೆ.
ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಕೈಯಲ್ಲಿ ಮಾದಕ ವಸ್ತುಗಳಲ್ಲ ಪುಸ್ತಕ ಇರಬೇಕು ಹೃದಯದಲ್ಲಿ ವ್ಯಸನವಲ್ಲ ಮಾನವೀಯತೆ ನೆಲೆಸಿರಬೇಕು. ಬದುಕಿನಲ್ಲಿ ದುಶ್ಚಟವಲ್ಲ, ದುಡಿಮೆ. ಶಿಸ್ತು, ಮತ್ತು ಸೇವೆಯ ಮೌಲ್ಯವಿರಬೇಕು. ಭಾರತವನ್ನು ನಶಾಮುಕ್ತ ಭಾರತವನ್ನಾಗಿಸುವ ಸಂಕಲ್ಪವು ಕೇವಲ ಸರ್ಕಾರದ ಕಾರ್ಯಕ್ರಮವವಲ್ಲ ಅದು ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆ, ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿ, ಪ್ರತಿಯೊಬ್ಬ ಪೋಷಕರ ಕನಸು, ಪ್ರತಿಯೊಬ್ಬ ಶಿಕ್ಷಕರ ಆಶಯ.
ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಹಲವು ಸಾರ್ವಜನಿಕ ಭಾಷಣಗಳಲ್ಲಿ ಹಾಗೂ “ಮನ್ ಕಿ ಬಾತ್”ಕಾರ್ಯಕ್ರಮಗಳಲ್ಲಿ ಯುವಜನತೆಯನ್ನು ಮಾದಕ ವ್ಯಸನದಿಂದ ದೂರವಿರಲು ಕರೆ ನೀಡುತ್ತಾ “ಜಾಗೃತ ಸಮಾಜ ನಿರ್ಮಾಣಕ್ಕೆ” ಒತ್ತು ನೀಡುತ್ತಿದ್ದಾರೆ ಯುವಶಕ್ತಿಯೇ ಭಾರತದ ಶಕ್ತಿ ಯುವಜನರು ಆರೋಗ್ಯವಂತರಾಗಿದ್ದರೆ ಸಂಸ್ಕಾರವಂತರಾಗಿದ್ದರೆ ಮಾತ್ರ ಭಾರತ ವಿಶ್ವಗುರುವಿನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಬಹುದು ಎಂಬುದು ಅವರ ಸಂದೇಶವಾಗಿದೆ.
ಬನ್ನಿ ಇಂದು ಒಂದು ಪ್ರತಿಜ್ಞೆ ಮಾಡೋಣ, ನನ್ನ ಕೈಯಲ್ಲಿ ಮಾದಕ ವಸ್ತುಗಳಲ್ಲ ಪುಸ್ತಕಗಳಿರಲಿ, ನನ್ನ ಕಣ್ಣಲ್ಲಿ ಅಮಲಲ್ಲ ಕನಸುಗಳಿರಲಿ, ನನ್ನ ಹೃದಯದಲ್ಲಿ ವ್ಯಸನವಲ್ಲ ಮಾನವೀಯತೆ ನೆಲೆಸಿರಲಿ. ನನ್ನ ಬದುಕು ನನ್ನ ತಂದೆ ತಾಯಿಯ ಹೆಮ್ಮೆ, ನನ್ನ ಶಿಕ್ಷಕರ ಗೌರವ, ನನ್ನ ಸಮಾಜದ ಆಶಾಕಿರಣ ನನ್ನ ದೇಶದ ಶಕ್ತಿಯಾಗಲಿ. ನೀವು ತೆಗೆದುಕೊಳ್ಳುವ ಒಂದು ಸರಿಯಾದ ನಿರ್ಧಾರ .ನಿಮ್ಮ ಜೀವನವನ್ನ ಅಷ್ಟೇ ಅಲ್ಲ. ನಿಮ್ಮ ಕುಟುಂಬ. ಸಮಾಜ ಮತ್ತು ರಾಷ್ಟ್ರದ ಭವಿಷ್ಯವನ್ನು ಬೆಳಗಿಸಬಹುದು”. ನಿಮ್ಮ ಕೈಯಲ್ಲಿ “ಮಾದಕ ವಸ್ತುಗಳಲ್ಲ”“ಜ್ಞಾನದ ದೀಪ” ಇರಲಿ. ನಿಮ್ಮ ಕಣ್ಣಲ್ಲಿ ಅಮಲಲ್ಲ ಸಾಧನೆಯ ಹೊಳಪು ಇರಲಿ. ನಿಮ್ಮ ಹೃದಯದಲ್ಲಿ ವ್ಯಸನವಲ್ಲ, ಮಾನವೀಯತೆ ಇರಲಿ.
ಮಕ್ಕಳೇ ಯೋಚಿಸಿ!!!ಒಬ್ಬ ಮಗ ಅಥವಾ ಮಗಳು ದಾರಿ ತಪ್ಪಿದರೆ ಒಂದು ಮನೆ ಕತ್ತಲಾಗುತ್ತದೆ ಒಬ್ಬ ವಿದ್ಯಾರ್ಥಿ ಗೆದ್ದರೆ ಒಂದು ಕುಟುಂಬ ಬೆಳಗುತ್ತದೆ. ನಿಮ್ಮ ಜೀವನವನ್ನು ಪ್ರೀತಿಸಿ.“ನಿಮ್ಮ ತಂದೆ ತಾಯಿಯ ಕನಸುಗಳನ್ನು ಗೌರವಿಸಿ ನಶೆ ಬೇಡ ಎಂದು ಹೇಳಿ ಏಕೆಂದರೆ ನಿಮ್ಮ ನಗುವಿನಲ್ಲಿ ನಿಮ್ಮ ಮನೆಯ ಸಂತೋಷವಿದೆ”. ನಿಮ್ಮ ಯಶಸ್ಸಿನಲ್ಲಿ ಈ ದೇಶದ ಭವಿಷ್ಯವಿದೆ.
ಹೌದಲ್ಲವೇ!!!ಅಮ್ಮನ ಕಣ್ಣೀರಿಗೆ ಬೆಲೆ ಕೊಡುತ್ತೇವೆ – ನಶೆಯಿಂದ ದೂರಇರುತ್ತೇವೆಎಂಬುದನ್ನು ನೀವು ನಂಬುತ್ತಿರಲ್ಲವೇ
ಯುವ ಜನತೆ ಉಳಿದರೆ ದೇಶ ಉಳಿಯುತ್ತದೆ, ಯುವ ಜನತೆ ಬೆಳೆದರೆ ಭಾರತ ಬೆಳೆಯುತ್ತದೆ, ಯುವಶಕ್ತಿಯೇ ಭಾರತದ ಉಸಿರು ಅವರ ಕನಸುಗಳಲ್ಲೇ ನಾಳಿನ ಭಾರತ ಮೂಡುತ್ತದೆ.







Leave a comment