SUDDIKSHANA KANNADA NEWS/ DAVANAGERE/ DATE:18-12-2024
ದಾವಣಗೆರೆ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಮನಸ್ಮೃತಿ ಮನಸ್ಥಿತಿಯುಳ್ಳ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ರಾಜೀನಾಮೆ ನೀಡಬೇಕು ಎಂದು ಅಖಿಲ ಭಾರತ ಕಾಂಗ್ರೆಸ್ ಯುವ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಒತ್ತಾಯಿಸಿದ್ದಾರೆ.
ಅಂಬೇಡ್ಕರ್ ಅವರ ಹೆಸರು ಪದೇ ಪದೇ ಹೇಳುವುದೇ ದೊಡ್ಡ ಫ್ಯಾಶನ್ ಆಗಿದೆ. ಎಷ್ಟೋ ಬಾರಿ ದೇವರ ಹೆಸರು ಹೇಳಿದರೆ ಅವರಿಗೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು. ಅಂಬೇಡ್ಕರ್ ಹೆಸರು ಯಾಕೆ ಹೇಳುತ್ತೀರಾ ಎಂಬ ದುರಹಂಕಾರಿ ಮಾತು ಆಡಿರುವ ಅಮಿತ್ ಶಾ ದೇಶದ ಜನರು ಮತ್ತು ಎಲ್ಲಾ ಸಮುದಾಯವದವರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಮಿತ್ ಶಾ ಅವರು ಅಂಬೇಡ್ಕರ್ ಬಗ್ಗೆ ಅಪಚಾರ ಮಾಡಿದ್ದಾರೆ. ಮನಸ್ಮೃತಿಯಲ್ಲಿ ನಂಬಿಕೆ ಹೊಂದಿದವರು ಅಂಬೇಡ್ಕರ್ ಅವರನ್ನು ಗೌರವಿಸಲು ಸಾಧ್ಯವೇ ಇಲ್ಲ. ಯಾಕೆಂದರೆ ಆಲೋಚನೆಗಳು, ನಿರ್ಧಾರಗಳು ವಿರೋಧವಾಗಿಯೇ ಇರುತ್ತವೆ. ಕೋಟ್ಯಂತರ ಶೋಷಿತ, ತುಳಿತಕ್ಕೊಳಗಾದ, ಅನ್ಯಾಯಕ್ಕೊಳಾಗದವರಿಗೆ ಬದುಕು ನೀಡಿದವರು. ಎಷ್ಟೋ ವರ್ಗದವರು ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಮುನ್ನೆಲೆಗೆ ಬರಲು ಅನುವು ಮಾಡಿಕೊಡುವಂಥ ಸಂವಿಧಾನ ಕೊಟ್ಟ ಮಹಾನ್ ಮಾನವತಾವದಿ ಅಂಬೇಡ್ಕರ್ ಎಂದು ಹೇಳಿದ್ದಾರೆ.
ಅಂಥ ಮಹಾನ್ ಸಾಧಕರ ಬಗ್ಗೆ ಕೀಳಾಗಿ ಮಾತನಾಡಿರುವ ಅಮಿತ್ ಶಾ ಅವರನ್ನು ದಲಿತರೂ ಸೇರಿದಂತೆ ಶೋಷಿತ ಸಮುದಾಯಗಳು ಕ್ಷಮಿಸಲು ಸಾಧ್ಯವಿಲ್ಲ. ಹೇಳಿಕೆ ವಾಪಸ್ ಪಡೆಯಬೇಕು, ಕೂಡಲೇ ಕ್ಷಮೆಯಾಚಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸೈಯದ್ ಖಾಲಿದ್ ಅಹ್ಮದ್ ಅವರು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.