SUDDIKSHANA KANNADA NEWS/ DAVANAGERE/ DATE:16-02-2024
ಬೆಂಗಳೂರು: ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಜಾಲವನ್ನು ವ್ಯವಸ್ಥಿತವಾಗಿ ಮತ್ತು ಗುಣಾತ್ಮಕವಾಗಿ ಅಭಿವೃದ್ಧಿಪಡಿಸಲು ಪ್ರಗತಿ ಪಥ ಯೋಜನೆಯನ್ನು ಬಾಹ್ಯ ನೆರವಿನೊಂದಿಗೆ ಪ್ರಾರಂಭಿಸಲಾಗುವುದು. ಈ ಯೋಜನೆ ಅಡಿಯಲ್ಲಿ 189 ಗ್ರಾಮೀಣ ವಿಧಾನ ಸಭಾ ಕ್ಷೇತ್ರಗಳಲ್ಲಿ ತಲಾ 50 ಕಿ.ಮೀ. ಉದ್ದದ ರಸ್ತೆಗಳಂತೆ, ಒಟ್ಟಾರೆಯಾಗಿ 9,450 ಕಿ.ಮೀ. ಉದ್ದದ ರಸ್ತೆ ಸಂಪರ್ಕ ಜಾಲವನ್ನು 5,200 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಕಲ್ಯಾಣ ಪಥ ಯೋಜನೆಯಡಿ ಕಲ್ಯಾಣ ಕರ್ನಾಟಕದ 38 ಗ್ರಾಮೀಣ ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಮಾದರಿಯಲ್ಲಿ ಒಟ್ಟು 1,150 ಕಿ.ಮೀ. ರಸ್ತೆಗಳನ್ನು 1,000 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
ಕರ್ನಾಟಕದಲ್ಲಿ ಗ್ರಾಮ ಪಂಚಾಯತಿಗಳು ಆರೋಗ್ಯ ರಕ್ಷಣೆ, ಘನತ್ಯಾಜ್ಯ ನಿರ್ವಹಣೆ, ಗ್ರಂಥಾಲಯ ನವೀಕರಣ ಮುಂತಾದ ಕ್ಷೇತ್ರಗಳಲ್ಲಿ ನಾಯಕತ್ವದ ಸಾಮರ್ಥ್ಯವನ್ನು ಪ್ರದರ್ಶಿಸಿವೆ. ಈ ದಿಸೆಯಲ್ಲಿ ಗ್ರಾಮ
ಪಂಚಾಯಿತಿಗಳನ್ನು ಸಾಮಾಜಿಕ ಕಳಕಳಿಯುಳ್ಳ ಸ್ಪಂದನಾಶೀಲ ಹಾಗೂ ಸಮರ್ಥ ಗ್ರಾಮ ಸರ್ಕಾರಗಳನ್ನಾಗಿ ರೂಪಿಸಲು ಕ್ರಮವಹಿಸಲಾಗುವುದು.
ನಮ್ಮ ರಾಜ್ಯ ಎಂದಿನಂತೆ ನರೇಗಾ ಯೋಜನೆಯ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದೆ. 2024-25ನೇ ಸಾಲಿನಲ್ಲಿ 16 ಕೋಟಿ ಮಾನವ-ದಿನಗಳನ್ನು ಸೃಜಿಸಿ, ಸುಮಾರು 30 ಲಕ್ಷ ಕುಟುಂಬಗಳಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ. ಪ್ರಮುಖವಾಗಿ ಜಲಾನಯನ ಇಲಾಖೆಯ ಒಗ್ಗೂಡಿಸುವಿಕೆಯೊಂದಿಗೆ 5,000 ಎಕರೆ ಸವಳು-ಜವಳು ಭೂಮಿಯನ್ನು ಸುಧಾರಿಸುವ ಮತ್ತು ಪ್ರತಿ ತಾಲ್ಲೂಕಿಗೆ ಕನಿಷ್ಠ 2ರಂತೆ ಬೂದು ನೀರು ಸಂಸ್ಕರಣಾ ಘಟಕಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ.
ಅರಿವು ಕೇಂದ್ರಗಳನ್ನು ಬಲಪಡಿಸುವ ದೃಷ್ಠಿಯಿಂದ 132 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುವುದು ಮತ್ತು ಪುಸ್ತಕಗಳು, ಡಿಜಿಟಲ್ ಉಪಕರಣಗಳು ಹಾಗೂ ವಿಕಲಚೇತನ ಸ್ನೇಹಿ
ಉಪಕರಣಗಳನ್ನು ಖರೀದಿಸಲಾಗುವುದು.
237. ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ತ್ವರಿತ ಸೇವಾ ಪೂರೈಕೆ, ಭ್ರಷ್ಟಾಚಾರ ನಿಯಂತ್ರಣ ಮತ್ತು ದಕ್ಷತೆಯನ್ನು ಹೆಚ್ಚಿಸಲು ಪ್ರಸಕ್ತ ವರ್ಷ 5 ಉಪ ಕ್ರಮಗಳನ್ನು ಕೈಗೊಳ್ಳಲಿದೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಮಾಡಲಾಗುವುದು.
ಗ್ರಾಮ ಪಂಚಾಯಿತಿಗಳ ಸಂಪನ್ಮೂಲಗಳನ್ನು ಹೆಚ್ಚಿಸಲು ಗ್ರಾಮ ಪಂಚಾಯಿತಿ ಸ್ವತ್ತುಗಳ Asset Monetisation ನೀತಿಯನ್ನು ಜಾರಿಗೆ ತರಲಾಗುವುದು.
ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಇ-ಆಫೀಸ್ ಅನ್ನು ಪ್ರಾರಂಭಿಸಲಾಗುವುದು.
ಸೇವಾ ಸಿಂಧು ಪೋರ್ಟಲ್ ಮೂಲಕ ಒದಗಿಸಲಾಗುತ್ತಿರುವ ಎಲ್ಲಾ ಸೇವೆಗಳನ್ನು ಈ ವರ್ಷದಿಂದ ಬಾಪೂಜಿ ಸೇವಾ ಕೇಂದ್ರಗಳಲ್ಲೂ ಪ್ರಾರಂಭಿಸಲಾಗುವುದು.
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಿಗದಿತ ಶುಲ್ಕ ಪಾವತಿಯೊಂದಿಗೆ ವ್ಯವಹಾರ ಪರವಾನಗಿಗಳ ಸ್ವಯಂಚಾಲಿತ ನವೀಕರಣಕ್ಕೆ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ತರಲಾಗುವುದು.
ಗ್ರಾಮ ಪಂಚಾಯಿತಿಗಳ ಸಭೆಗಳು ಮತ್ತು ಗ್ರಾಮ ಸಭೆಗಳ ಕಾರ್ಯಕಲಾಪಗಳ ನೇರ ಪ್ರಸಾರ ಮಾಡಲಾಗುವುದು.
ಗ್ರಾಮ ಪಂಚಾಯಿತಿಗಳಲ್ಲಿನ ವಿದ್ಯುತ್ ಬಳಕೆಯ ಮೇಲೆ ನಿಗಾವಹಿಸಲು ಹಾಗೂ ವಿದ್ಯುತ್ ವೆಚ್ಚ ಕಡಿಮೆ ಮಾಡಲು ಪ್ರಾಯೋಗಿಕವಾಗಿ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗುವುದು;
50 ಗ್ರಾಮ ಪಂಚಾಯಿತಿಗಳಲ್ಲಿ ಹೊಂಬೆಳಕು ಕಾರ್ಯಕ್ರಮದಡಿ 25 ಕೋಟಿ ರೂ.ಗಳ ವೆಚ್ಚದಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಲಾಗುವುದು.
200 ಗ್ರಾಮ ಪಂಚಾಯಿತಿಗಳಲ್ಲಿ ಬೀದಿ ದೀಪಗಳ ವ್ಯವಸ್ಥಿತ ಮೀಟರಿಂಗ್ ಮಾಡಲಾಗುವುದು;
ಪ್ರಸಕ್ತ ಸಾಲಿನಿಂದ ಆಯ್ದ 100 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸ್ಥರ ಸಹಭಾಗಿತ್ವದೊಂದಿಗೆ ಹಿರಿಯ ನಾಗರಿಕರ ಆರೈಕೆ ಮತ್ತು ಚಿಕಿತ್ಸೆಯನ್ನು ನಿರ್ವಹಿಸಲು ಆರೈಕೆ–ಉಪಶಮನ (Palliative Care) ಕೇಂದ್ರಗಳನ್ನು ಪ್ರಾರಂಭಿಸಲಾಗುವುದು.
ಪ್ರೇರಣಾ ಕಾರ್ಯಕ್ರಮದಡಿ ಸ್ವಸಹಾಯ ಗುಂಪುಗಳ ಮಹಿಳೆಯರು, ಗ್ರಾಮ ಪಂಚಾಯಿತಿಗಳ ಮಹಿಳಾ ಸದಸ್ಯರು ಹಾಗೂ ಗ್ರಾಮೀಣ ಪ್ರದೇಶದ ಮುಂಚೂಣಿಯ ಕಾರ್ಯಕರ್ತೆಯರಲ್ಲಿ Menstrual Cup ಬಳಕೆಯನ್ನು ಪ್ರೋತ್ಸಾಹಿಸಲಾಗುವುದು. ಇದರ ಮೂಲಕ ಗ್ರಾಮದ ಇತರೆ ಮಹಿಳೆಯರನ್ನು ಇವುಗಳನ್ನು ಬಳಕೆ ಮಾಡಲು ಪ್ರೇರೇಪಿಸಲಾಗುವುದು.
ರಾಜ್ಯದ 100 ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರ ಆಕಾಂಕ್ಷೆ ಮತ್ತು ಆಸಕ್ತಿಗೆ ಅನುಗುಣವಾಗಿ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡಲು ಸಾವಿತ್ರಿಬಾಯಿ ಫುಲೆ ಮಹಿಳಾ ಸಬಲೀಕರಣ ಯೋಜನೆಯನ್ನು ಪ್ರಾರಂಭಿಸಲಾಗುವುದು. ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತಲಾ ಒಂದು ಲಕ್ಷ ರೂ. ನೆರವಿನೊಂದಿಗೆ ಎಸ್.ಹೆಚ್.ಜಿ.ಗಳ ಸಹಯೋಗದೊಂದಿಗೆ ಎಣ್ಣೆ ಗಾಣವನ್ನು ಸ್ಥಾಪಿಸಲಾಗುವುದು.
ಗ್ರಾಮೀಣ ಪ್ರದೇಶದಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಮೂಲಕ ಕೈಗೊಳ್ಳಲಾಗುತ್ತಿದೆ. ಸದರಿ ವ್ಯವಸ್ಥೆಯನ್ನು ಸುಸ್ಥಿರವಾಗಿ ನಿರ್ವಹಿಸಲು, ತ್ಯಾಜ್ಯವನ್ನು ಕಡಿಮೆ ಮಾಡುವ, ಪುನಃ ಬಳಸುವ ಮತ್ತು ಮರಳಿ ಉಪಯೋಗಿಸುವ ತತ್ವಗಳಾಧಾರಿತ ವರ್ತುಲ ಆರ್ಥಿಕತೆ (Circular Economy) ಮಾದರಿಯನ್ನು ಪ್ರಸಕ್ತ ಸಾಲಿನಿಂದ ಪ್ರೋತ್ಸಾಹಿಸಲಾಗುವುದು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ಚುನಾಯಿತ ಸದಸ್ಯರಿಗೆ ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳ ಸದಸ್ಯರಿಗೆ ತರಬೇತಿ ನೀಡಲಾಗುವುದು ಹಾಗೂ ದೇಶದ ಪ್ರಪ್ರಥಮ ವರ್ತುಲ ಆರ್ಥಿಕತೆಯ (Circular Economy) ಪ್ರಯೋಗಾಲಯವನ್ನು ಸ್ಥಾಪಿಸಲು ಎರಡು ಕೋಟಿ ರೂ.ಗಳನ್ನು ಒದಗಿಸಲಾಗುವುದು.
ಜೀತ ಕಾರ್ಮಿಕ ಪದ್ಧತಿಯಿಂದ ಬಿಡುಗಡೆಗೊಂಡ ಕಾರ್ಮಿಕರ ಪುನರ್ವಸತಿಗಾಗಿ ನೀಡುವ ಮಾಸಿಕ ಪ್ರೋತ್ಸಾಹಧನವನ್ನು 2,000 ರೂ.ಗಳಿಗೆ ಹೆಚ್ಚಿಸಲಾಗುವುದು. ಈ ಪಿಡುಗಿನ ಪರಿಣಾಮಕಾರಿ ನಿರ್ಮೂಲನೆಗೆ ಪೂರಕವಾಗಿ ಸಂಬಂಧಪಟ್ಟ ಇಲಾಖೆಗಳ ಕ್ಷೇತ್ರಮಟ್ಟದ ಅಧಿಕಾರಿಗಳನ್ನು ಜೀತ ಕಾರ್ಮಿಕ ನಿಷೇಧ ಅಧಿಕಾರಿಗಳಾಗಿ ಅಧಿಸೂಚಿಸಲಾಗುವುದು.
ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸರ್ಕಾರದ ಮಾನ್ಯತೆಯುಳ್ಳ ದಾಖಲೆಗಳನ್ನು ಡಿಜಿಲಾಕರ್ ಆಪ್ನಲ್ಲಿ ಸುರಕ್ಷಿತವಾಗಿರಿಸುವ ಸಲುವಾಗಿ ನನ್ನ ಗುರುತು ಅಭಿಯಾನವನ್ನು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ 1,000 ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿಕೊಳ್ಳಲಾಗುವುದು.
ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಬೇಕಾದ ಅನುದಾನದ ಸೂತ್ರಗಳ ಬಗ್ಗೆ ಅಧ್ಯಯನ ನಡೆಸಿ, ಸೂಕ್ತ ಶಿಫಾರಸ್ಸು ಮಾಡಲು ೫ನೇ ರಾಜ್ಯ ಹಣಕಾಸು ಆಯೋಗವನ್ನು ರಚಿಸಲಾಗಿದೆ. ಆಯೋಗದಿಂದ ಸ್ವೀಕೃತವಾಗುವ ಶಿಫಾರಸ್ಸುಗಳನ್ನು ನಮ್ಮ ಸರ್ಕಾರವು ಪ್ರಾಮಾಣಿಕವಾಗಿ ಪರಿಶೀಲಿಸುತ್ತದೆ ಮತ್ತು ರಾಜ್ಯದಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು.
ಯೋಜನೆ
2024-25 ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲು 5,000 ಕೋಟಿ ರೂ.ಗಳ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
ಡಾ|| ಡಿ.ಎಂ. ನಂಜುಂಡಪ್ಪ ವರದಿಯನ್ನು 2002 ರಲ್ಲಿ ಸಲ್ಲಿಸಲಾಗಿದ್ದು, ಕಳೆದ 22 ವರ್ಷಗಳಲ್ಲಿ ಈ ವರದಿಯ ಆಧಾರದ ಮೇಲೆ ಹಿಂದುಳಿದ ಪ್ರದೇಶಗಳಲ್ಲಿ ಅಸಮತೋಲನೆಯನ್ನು ನಿವಾರಿಸಲು ಬಹಳಷ್ಟು
ಯೋಜನೆಗಳನ್ನು ಮತ್ತು ಬಂಡವಾಳ ಹೂಡಿಕೆಯನ್ನು ಮಾಡಲಾಗಿದೆ. ಇದರಿಂದ ಆಗಿರುವ ಬದಲಾವಣೆಗಳು ಮತ್ತು ಪರಿಣಾಮಗಳನ್ನು ಅಧ್ಯಯನ ಮಾಡಲು ಪ್ರಸಕ್ತ ಸಾಲಿನಲ್ಲಿ ಒಂದು ಉನ್ನತಾಧಿಕಾರಿ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿಯ ಮೂಲಕ ಪ್ರಸ್ತುತ ರಾಜ್ಯದಲ್ಲಿನ ಆರ್ಥಿಕ ಮತ್ತು ಪ್ರಾದೇಶಿಕ ಅಸಮಾನತೆಯ ಆಧಾರದ ಮೇಲೆ ಜಿಲ್ಲೆ ಮತ್ತು ತಾಲ್ಲೂಕುಗಳನ್ನು ವರ್ಗೀಕರಿಸಿ ಹೊಸ ಅಭಿವೃದ್ಧಿ ಸೂಚ್ಯಂಕಗಳನ್ನು ತಯಾರಿಸಲಾಗುವುದು.
ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆಯ (SITK) ಮೂಲ ಉದ್ದೇಶಗಳನ್ನು ಮತ್ತು ಕಾರ್ಯವನ್ನು ಸೂಕ್ತವಾಗಿ ಬಿಂಬಿಸುವ ನಿಟ್ಟಿನಲ್ಲಿ ಸಂಸ್ಥೆಯ ಹೆಸರನ್ನು ಬದಲಾವಣೆ ಮಾಡಿ ಕರ್ನಾಟಕ ರಾಜ್ಯ ನೀತಿ ಮತ್ತು
ಯೋಜನಾ ಆಯೋಗವೆಂದು (KSPPC) ಪುನರ್ರಚಿಸಲಾಗುವುದು.