ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಭೀಕರ ಹತ್ಯೆ ನಡೆದಿದೆ. ಯುವತಿಯೊಬ್ಬಳ ಜೊತೆಗಿನ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಕ್ಕೆ ಆಕ್ರೋಶಗೊಂಡ ಸ್ವಂತ ತಂದೆ ಹಾಗೂ ಸಹೋದರನೇ ಸೇರಿ 22 ವರ್ಷದ ಯುವತಿಯನ್ನು ಹತ್ಯೆಗೈದಿದ್ದಾರೆ.
ಈ ಭೀಕರ ಕೃತ್ಯವನ್ನು ಮುಚ್ಚಿಹಾಕಲು ಅದನ್ನು ರೋಡ್ ಆಕ್ಸಿಡೆಂಟ್ ಅಂದರೆ ರಸ್ತೆ ಅಪಘಾತವೆಂದು ಬಿಂಬಿಸಲು ಯತ್ನಿಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಘಟನೆಯ ವಿವರ:
ಮೃತರನ್ನು ಸೋಫಿಯಾ (22) ಎಂದು ಗುರುತಿಸಲಾಗಿದ್ದು, ಈಕೆ ಆಸ್ಪತ್ರೆಯೊಂದರಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಸುಮಾರು ಮೂರು ತಿಂಗಳ ಹಿಂದೆ ಯುವಕನೊಬ್ಬನ ಜೊತೆ ಸೋಫಿಯಾ ಇರುವ ವಿಡಿಯೋವೊಂದು ವೈರಲ್ ಆಗಿತ್ತು. ಇದರಿಂದ ಸಮಾಜದಲ್ಲಿ ಕುಟುಂಬದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಭಾವಿಸಿದ ತಂದೆ ಮೊಹಮ್ಮದ್ ಫಾರೂಕ್ (56) ಹಾಗೂ ಸಹೋದರ ಮೊಹಮ್ಮದ್ ಹಬಿಲ್ (38) ದ್ವೇಷ ಸಾಧಿಸಿದ್ದರು.
ಆಗಸ್ಟ್ 12 ರ ರಾತ್ರಿ ಬೈಕ್‌ನಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಹ್ಯಾಮರ್‌ನಿಂದ ಯುವತಿಯ ತಲೆಗೆ ಬಲವಾಗಿ ಹೊಡೆದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬಳಿಕ ಮೃತದೇಹವನ್ನು ಮುಖ್ಯ ರಸ್ತೆಗೆ ತಂದು, ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎಂದು ಬಿಂಬಿಸಲು ದ್ವಿಚಕ್ರ ವಾಹನವನ್ನು ಜಖಂ ಮಾಡಿದ್ದರು.
ಪೊಲೀಸರಿಂದ ಬಯಲಾದ ರಹಸ್ಯ:
ರಸ್ತೆ ಅಪಘಾತವೆಂದು ಬಿಂಬಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ ಸಂಶಯಗೊಂಡ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಅಸಲಿ ಸತ್ಯ ಹೊರಬಂದಿದೆ. ಯಾವುದೇ ಅಪಘಾತ ಸಂಭವಿಸಿಲ್ಲದಿರುವುದು ಹಾಗೂ ಬೈಕನ್ನು ಉದ್ದೇಶಪೂರ್ವಕವಾಗಿ ಕೆಡವಿ ನಾಟಕವಾಡಿರುವುದು ದೃಢಪಟ್ಟಿದೆ. ಪೊಲೀಸರ ತೀವ್ರ ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ತಂದೆ-ಮಗನನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಲಾಗಿದೆ.





Leave a comment