ಕಾಸರಗೋಡು: ಕೌಟುಂಬಿಕ ಕಲಹ ಹಾಗೂ ಮಗನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೇರಳ ಮೂಲದ 44 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸುದೀರ್ಘ 13 ವರ್ಷಗಳ ಬಳಿಕ ಆಕೆ ತನ್ನ ಮಕ್ಕಳನ್ನು ಭೇಟಿಯಾಗಿದ್ದಾರೆ.
ಈ ವೇಳೆ ತಾಯಿಯ ಮೇಲಿನ ಪ್ರಕರಣವನ್ನು ಮುಂದುವರಿಸಲು ಇಷ್ಟವಿಲ್ಲ ಎಂದು ಮಗ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಮಹಿಳೆಗೆ ಜಾಮೀನು ದೊರೆತಿದೆ.
ಕಾಸರಗೋಡು ಜಿಲ್ಲೆಯ ಚೀಮೇನಿ ಮೂಲದ ಈ ಮಹಿಳೆ 2013ರಲ್ಲಿ ಕೌಟುಂಬಿಕ ವಿವಾದದ ಬಳಿಕ 12 ವರ್ಷದ ಮಗನ ಮೇಲೆ ಹಲ್ಲೆ ನಡೆಸಿದ್ದರೆನ್ನಲಾದ ಆರೋಪ ಎದುರಿಸುತ್ತಿದ್ದರು. ಈ ಕುರಿತು ಬಾಲ ನ್ಯಾಯ (ಜೆಜೆ) ಕಾಯ್ದೆಯಡಿ ಪ್ರಕರಣ ದಾಖಲಾಗಿ ಜೈಲು ಪಾಲಾಗಿದ್ದ ಆಕೆ, ಬಳಿಕ ಜಾಮೀನಿನ ಮೇಲೆ ಹೊರಬಂದು ತಲೆಮರೆಸಿಕೊಂಡಿದ್ದರು. ಇತ್ತೀಚೆಗೆ ಕೊಚ್ಚಿಯ ನರ್ಸಿಂಗ್ ಏಜೆನ್ಸಿ ಮುಖಾಂತರ ತಿರುವಲ್ಲಾದಲ್ಲಿ ವೃದ್ಧರೊಬ್ಬರ ಆರೈಕೆದಾರರಾಗಿ (Caregiver) ಕೆಲಸ ಮಾಡುತ್ತಿದ್ದಾಗ ಚಿತ್ತಾರಿಕಲ್ ಪೊಲೀಸರು ಆಕೆಯನ್ನು ಪತ್ತೆಹಚ್ಚಿ ಬಂಧಿಸಿದರು.
ಕೌಟುಂಬಿಕ ಹಿನ್ನೆಲೆ: 2013ರಲ್ಲಿ ದಂಪತಿಗಳ ನಡುವೆ ಮನಸ್ತಾಪ ಉಂಟಾದಾಗ, ತಂದೆಯ ಸೂಚನೆಯಂತೆ 12 ವರ್ಷದ ಮಗ ತಾಯಿಯ ವಿರುದ್ಧ ಪೊಲೀಸ್ ದೂರು ನೀಡಿದ್ದಾಗಿ ಈಗ ತಿಳಿಸಿದ್ದಾನೆ.
ಸುದೀರ್ಘ ತಲೆಮರೆಸುವಿಕೆ: ಜಾಮೀನು ಸಿಕ್ಕ ನಂತರ ಮಹಿಳೆ ಕೇರಳದ ವಿವಿಧ ಭಾಗಗಳಲ್ಲಿ ತಲೆಮರೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಈ ಮಧ್ಯೆ ಪತಿ ಮತ್ತೊಂದು ಮದುವೆಯಾಗಿದ್ದು, ಮಗಳು ಅಜ್ಜಿಯ ಬಳಿ ಬೆಳೆದಿದ್ದರು.
ನ್ಯಾಯಾಲಯದಲ್ಲಿ ಭಾವನಾತ್ಮಕ ಕ್ಷಣ: ಕೋರ್ಟ್‌ಗೆ ಹಾಜರುಪಡಿಸಿದಾಗ ಈಗ ವಿವಾಹಿತರಾಗಿರುವ ಇಬ್ಬರೂ ಮಕ್ಕಳು ಆಗಮಿಸಿ ತಾಯಿಯನ್ನು ಭೇಟಿಯಾದರು. ಮಗ ದೂರು ಹಿಂಪಡೆಯಲು ಒಪ್ಪಿದ ಹಿನ್ನೆಲೆಯಲ್ಲಿ ಕೋರ್ಟ್ ಜಾಮೀನು ನೀಡಿದೆ.
ಪ್ರಸ್ತುತ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಹಿಳೆ ಎರಡು ದಿನಗಳ ಕಾಲ ಮಕ್ಕಳೊಂದಿಗೆ ಕಾಲಕಳೆದಿದ್ದು, ತಾವು ಆರೈಕೆ ಮಾಡುತ್ತಿರುವ ವೃದ್ಧರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಕೋರ್ಟ್ ಪ್ರಕ್ರಿಯೆ ಮುಗಿದ ನಂತರ ಶಾಶ್ವತವಾಗಿ ಮಕ್ಕಳೊಂದಿಗೆ ವಾಸಿಸುವುದಾಗಿ ತಿಳಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಮುಂದಿನ ತಿಂಗಳು ನಡೆಯಲಿದೆ.





Leave a comment