ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕಿನಲ್ಲಿ ಜೂನ್ ಮಾಹೆಯಲ್ಲಿ ಶೇಕಡ 55 ರಷ್ಟು ಮಳೆಯ ಕೊರತೆಯಾಗಿದ್ದು, ಪ್ರಸ್ತುತ ಶೇಕಡ 10 ರಷ್ಟು ಪ್ರದೇಶದಲ್ಲಿ ಮಾತ್ರ ಮುಸುಕಿನ ಜೋಳ ಬಿತ್ತನೆಯಾಗಿದೆ. ಇಂತಹ ಪ್ರತಿಕೂಲ ಹವಾಮಾನದ ಸಮಯದಲ್ಲಿ ಬಿತ್ತನೆ ಮಾಡಲಾದ ಮುಸುಕಿನ ಜೋಳದ ಬೆಳೆಗೆ ಫಾಲ್ ಸೈನಿಕ ಹುಳುಗಳ ಬಾಧೆ ಹೆಚ್ಚಾಗುವ ಸಾಧ್ಯತೆಯಿದ್ದು, ರೈತರು ತಕ್ಷಣವೇ ಸೂಕ್ತ ಹತೋಟಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೃಷಿ ಇಲಾಖೆ ತಿಳಿಸಿದೆ.
ತಾಲ್ಲೂಕಿನ ಕಸಬಾ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ಶ್ರೀರಾಂಪುರ ಗ್ರಾಮದ ರೈತರ ಜಮೀನುಗಳಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಸಂದರ್ಭದಲ್ಲಿ ಈ ಮಾಹಿತಿ ನೀಡಿದ್ದಾರೆ.
ಈ ಹುಳುವು 20-25 ದಿನಗಳ ಜೀವನ ಚಕ್ರವನ್ನು ಹೊಂದಿದ್ದು, ಒಂದೇ ಬೆಳೆಯಲ್ಲಿ ಮೊಟ್ಟೆ, ಮರಿಹುಳು ಮತ್ತು ಪ್ರೌಢ ಚಿಟ್ಟೆ ಎಂಬ ಮೂರೂ ಹಂತಗಳಲ್ಲಿ ಕಾಣಿಸಿಕೊಳ್ಳುತ್ತದೆ.
ಇವು ಮುಸುಕಿನ ಜೋಳದ ಎಲೆ ಹಾಗೂ ಸುಳಿಗಳನ್ನು ತಿಂದು ರಂಧ್ರಗಳನ್ನು ಮಾಡುತ್ತವೆ ಮತ್ತು ಎಲೆಗಳ ಮೇಲೆ ತಮ್ಮ ಹಿಕ್ಕೆಗಳನ್ನು ಬಿಡುತ್ತವೆ.
ಬೆಳೆಯ 45 ದಿನಗಳವರೆಗೆ ಈ ಹುಳುವಿನ ಬಾಧೆ ತೀವ್ರವಾಗಿದ್ದು, ನಿರ್ಲಕ್ಷ್ಯ ವಹಿಸಿದರೆ ಶೇ. 50 ರಿಂದ 60 ರಷ್ಟು ಇಳುವರಿ ನಷ್ಟವಾಗುವ ಭೀತಿ ಇರುತ್ತದೆ.
ನಿಯಂತ್ರಣ ಕ್ರಮಗಳು:
ಸಮಗ್ರ ನಿರ್ವಹಣೆ: ಮಾಗಿ ಉಳುಮೆ ಮಾಡುವುದು, ಜುಲೈ ಮೊದಲ ವಾರದೊಳಗೆ ಬಿತ್ತನೆ ಮುಗಿಸುವುದು ಮತ್ತು ಪರ್ಯಾಯ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಈ ಹುಳುವಿನ ಪ್ರಮಾಣವನ್ನು ಕಡಿಮೆ ಮಾಡಬಹುದು.
ರಾಸಾಯನಿಕ ಸಿಂಪರಣೆ: 100 ಗಿಡಗಳಲ್ಲಿ ಸುಮಾರು 20 ಗಿಡಗಳು ಹಾನಿಗೊಳಗಾಗಿದ್ದರೆ ಸಿಂಪರಣೆ ಕಡ್ಡಾಯವಾಗಿದೆ. ಬಿತ್ತನೆ ಮಾಡಿದ 15 ದಿನಗಳಲ್ಲಿ ಎಮಾಮೆಕ್ಟೀನ್ ಬೆಂಜೋಯೇಟ್ (0.5 ಗ್ರಾಂ) ಅಥವಾ ಕ್ಲೋರಾಂಟ್ರಿನಿಪ್ರೋಲ್ (0.4 ಎಂ.ಎಲ್) ಅನ್ನು ಪ್ರತಿ 1 ಲೀಟರ್ ನೀರಿಗೆ ಮಿಶ್ರಣ ಮಾಡಿ ಸುಳಿಗೆ ಬೀಳುವಂತೆ ಸಿಂಪರಣೆ ಮಾಡಬೇಕು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ-2026:
ನೊಂದಣಿಗೆ ಜುಲೈ 31 ಕೊನೆ ದಿನ ಪ್ರತಿಕೂಲ ಹವಾಮಾನದಲ್ಲಿ ರೈತರ ಕೈ ಹಿಡಿಯುತ್ತಿರುವ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ-2026’ ಅನ್ನು ಮುಂಗಾರು ಹಂಗಾಮಿಗೆ ಸರ್ಕಾರ ಮುಂದುವರೆಸಿದೆ. ರೈತರು ವಿಳಂಬ ಮಾಡದೆ ತಕ್ಷಣವೇ ಬೆಳೆ ವಿಮೆಗೆ ನೋಂದಣಿ ಮಾಡಿಸಿಕೊಳ್ಳಬೇಕಿದೆ.
ಮುಸುಕಿನ ಜೋಳ ಬೆಳೆಗೆ ಜುಲೈ 31 ಮತ್ತು ಭತ್ತದ ಬೆಳೆಗೆ ಆಗಸ್ಟ್ 14 ಕೊನೆಯ ದಿನಾಂಕ.
ರೈತರು ತಮಗೆ ಬೆಳೆ ಸಾಲ ನೀಡುವ ಬ್ಯಾಂಕ್, ಸಹಕಾರಿ ಬ್ಯಾಂಕುಗಳು, ಗ್ರಾಮ ಒನ್ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ನಿಗದಿತ ಅವಧಿಯೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿ ಶಿವಮೊಗ್ಗ ತಾಲ್ಲೂಕು ಸಹಾಯಕ ಕೃಷಿ ನಡುವೆ ರ್ದೇಶಕರು ಕೋರಿದ್ದಾರೆ.





Leave a comment