ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ 45 ಹಳ್ಳಿಗಳನ್ನೊಳಗೊಂಡ ಜಿಐಎಸ್ ಆಧಾರಿತ ‘ಮಹಾಯೋಜನೆ-2041’ಕ್ಕೆ ಸರ್ಕಾರದಿಂದ ಅಂತಿಮ ಅನುಮೋದನೆ ದೊರೆತಿದೆ ಎಂದು ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ 80ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಪಥಸಂಚಲನದಲ್ಲಿ ಭಾಗವಹಿಸಿದ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಜಿಲ್ಲೆಯ ಸಾಧನೆಗಳು ಹಾಗೂ ನೂತನ ಅಭಿವೃದ್ಧಿ ಕಾರ್ಯಕ್ರಮಗಳ ವಿವರಗಳನ್ನು ಹಂಚಿಕೊಂಡರು:
“ರಾಜ್ಯ ಸರ್ಕಾರವು ಯುವ ಕರ್ನಾಟಕ ಮತ್ತು ನವಭಾರತದ ಆಶಯದೊಂದಿಗೆ ದಾವಣಗೆರೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ಧವಾಗಿದೆ. ‘ನುಡಿದಂತೆ ನಡೆದ ಸರ್ಕಾರ’ ಎಂಬ ಹೆಗ್ಗಳಿಕೆಯೊಂದಿಗೆ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಸೇರಿದಂತೆ ಭೂ ಗ್ಯಾರಂಟಿ, ನೀರಾವರಿ ಮತ್ತು ಇ-ಆಡಳಿತ ಸುಧಾರಣೆಗಳು ಮಹಿಳೆಯರ ಹಾಗೂ ಜನಸಾಮಾನ್ಯರ ಆರ್ಥಿಕ ಸಬಲೀಕರಣಕ್ಕೆ ಬೆನ್ನೆಲುಬಾಗಿ ನಿಂತಿವೆ” ಎಂದು ತಿಳಿಸಿದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಲಕ್ಷಾಂತರ ನಾಯಕರೊಂದಿಗೆ ದಾವಣಗೆರೆ ಜಿಲ್ಲೆಯ ಕೊಡುಗೆ ಅಪಾರವಾಗಿದೆ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಹಾಗೂ 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಬ್ರಿಟಿಷರ ಗುಂಡಿಗೆ ಎದೆಯೊಡ್ಡಿ ಪ್ರಾಣಾರ್ಪಣೆ ಮಾಡಿದ ಜಿಲ್ಲೆಯ ಹೆಮ್ಮೆಯ ಪುತ್ರರಾದ ಹಳ್ಳೂರು ನಾಗಪ್ಪ, ಅಕ್ಕಸಾಲೆ ವಿರೂಪಾಕ್ಷಪ್ಪ, ಬಿದಿರುಕುಂದಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಹದಡಿ ನಿಂಗಪ್ಪ ಹಾಗೂ ಮಾಗಾನಹಳ್ಳಿ ಹನುಮಂತಪ್ಪನವರ ತ್ಯಾಗ-ಬಲಿದಾನಗಳನ್ನು ಸಚಿವರು ಸ್ಮರಿಸಿದರು.
ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ:
ಶಕ್ತಿ ಯೋಜನೆಯಿಂದ ಜೂನ್-2023 ರಿಂದ ಜುಲೈ-2026ರ ವರೆಗೆ ದಾವಣಗೆರೆ ಜಿಲ್ಲೆಯೊಂದರಲ್ಲೇ 15.90 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಇದಕ್ಕಾಗಿ ಸರ್ಕಾರ ರೂ. 473.52 ಕೋಟಿ ವೆಚ್ಚ ಭರಿಸಿದೆ.
ಅನ್ನಭಾಗ್ಯ:
44,265 ಅಂತ್ಯೋದಯ ಕಾರ್ಡ್‌ಗಳಿಗೆ 35 ಕೆ.ಜಿ ಹಾಗೂ 3.21 ಲಕ್ಷ ಆದ್ಯತಾ ಪಡಿತರ ಚೀಟಿಗಳ 11.39 ಲಕ್ಷ ಫಲಾನುಭವಿಗಳಿಗೆ ಪಾರದರ್ಶಕವಾಗಿ ಪಡಿತರ ತಲುಪಿಸಲಾಗುತ್ತಿದೆ.
ಗೃಹಜ್ಯೋತಿ:
ಜಿಲ್ಲೆಯ 5.12 ಲಕ್ಷಕ್ಕೂ ಹೆಚ್ಚು ಗ್ರಾಹಕರು 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದು, ಕಳೆದ ಜುಲೈ ತಿಂಗಳಲ್ಲಿ ರೂ. 77.15 ಕೋಟಿ ಬಿಲ್ ಹೊಂದಾಣಿಕೆ ಮಾಡಲಾಗಿದೆ.
ಗೃಹಲಕ್ಷ್ಮಿ:
ಜಿಲ್ಲೆಯ 3.76 ಲಕ್ಷಕ್ಕೂ ಹೆಚ್ಚು ಮಹಿಳೆಯರ ಖಾತೆಗೆ ಒಟ್ಟು ರೂ. 2,193.83 ಕೋಟಿ ಹಣ ಜಮೆ ಮಾಡಲಾಗಿದೆ.
ಯುವನಿಧಿ:
ಜೂನ್-2026ರ ಅಂತ್ಯಕ್ಕೆ 13,769 ಪದವೀಧರರು ಹಾಗೂ 308 ಡಿಪ್ಲೊಮಾದಾರ ಯುವಕ-ಯುವತಿಯರಿಗೆ ಒಟ್ಟು ರೂ. 44.22 ಕೋಟಿ ನಿರುದ್ಯೋಗ ಭತ್ಯೆ ವಿತರಿಸಲಾಗಿದೆ.
ಕಂದಾಯ, ಭೂಸುರಕ್ಷಾ ಮತ್ತು ಇ-ಆಡಳಿತ:
ಜಿಲ್ಲೆಯ 485 ದಾಖಲೆರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈಗಾಗಲೇ 26,732 ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. 7,43,375 ಪಹಣಿಗಳಲ್ಲಿ 6,44,910 ಆಧಾರ್ ಜೋಡಣೆ ಮಾಡಿ ಶೇ. 86ರಷ್ಟು ಹಾಗೂ ಇ-ಪೌತಿ ಖಾತೆ ಆಂದೋಲನದಡಿ 83,891 ಪೌತಿ ಖಾತೆ ಮಾಡಿ ಶೇ. 90ರಷ್ಟು ಪ್ರಗತಿ ಸಾಧಿಸಲಾಗಿದೆ.
’ಭೂಸುರಕ್ಷಾ’ ಯೋಜನೆಯಡಿ 5,51,511 ಕಡತಗಳನ್ನು ತಂತ್ರಾಂಶದಲ್ಲಿ ಅಳವಡಿಸಿ, 1,95,355 ಪುಟಗಳ ಡಿಜಿಟಲ್ ದಾಖಲೆ ನೀಡಲಾಗಿದೆ.
ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರು ಹಾಗೂ ನರೇಗಾ:
ಮಹಾತ್ಮಾ ಗಾಂಧಿ ನರೇಗಾ ಹಾಗೂ ನೂತನ ವಿ ಬಿ ಜಿ-ರಾಮ್ ಜಿ ಯೋಜನೆಯಡಿ ಜಿಲ್ಲೆಯಲ್ಲಿ 19.79 ಲಕ್ಷ ಮಾನವ ದಿನಗಳನ್ನು ಸೃಜಿಸಿ, ರೂ. 33.11 ಕೋಟಿ ವೆಚ್ಚ ಮಾಡಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ 2025-26ನೇ ಸಾಲಿನ ಕರ ವಸೂಲಾತಿಯಲ್ಲಿ ಜಿಲ್ಲೆಯು ರೂ. 32 ಕೋಟಿ ತೆರಿಗೆ ಸಂಗ್ರಹಿಸಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಜಲ ಜೀವನ್ ಮಿಷನ್ ಅಡಿ 727 ಕಾಮಗಾರಿಗಳು ಪೂರ್ಣಗೊಂಡಿದ್ದು, 31 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಚಾಲನೆಯಲ್ಲಿವೆ.
65 ಗ್ರಾಮಗಳನ್ನು ’24×7 ಕುಡಿಯುವ ನೀರು ಸರಬರಾಜು’ ಗ್ರಾಮಗಳನ್ನಾಗಿ ಘೋಷಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಹಿರೇಮಳಲಿ ಗ್ರಾಮ ಪಂಚಾಯಿತಿಯ ನಿರಂತರ ಕುಡಿಯುವ ನೀರು ಯೋಜನೆಗೆ ರಾಷ್ಟ್ರ ಮಟ್ಟದ ಮನ್ನಣೆ ದೊರೆತಿದೆ.
ಕೃಷಿ, ತೋಟಗಾರಿಕೆ & ನೀರಾವರಿ ಯೋಜನೆಗಳು:
‘ಕೃಷಿ ಭಾಗ್ಯ’ ಯೋಜನೆಯಡಿ ಕಳೆದ ವರ್ಷ 726 ಕೃಷಿ ಹೊಂಡ ನಿರ್ಮಿಸಲಾಗಿದ್ದು, ಈ ವರ್ಷ 277 ಹೊಂಡಗಳ ನಿರ್ಮಾಣ ಗುರಿ ಹೊಂದಲಾಗಿದೆ.
‘ಕಿಸಾನ್ ಸಮ್ಮಾನ್’ ಮೂಲಕ ಜಿಲ್ಲೆಯ ರೈತರ ಖಾತೆಗೆ ರೂ. 653 ಕೋಟಿ ನಗದು ವರ್ಗಾವಣೆಯಾಗಿದೆ. ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರಿನಲ್ಲಿ 2,000 ಮೆಟ್ರಿಕ್ ಟನ್ ಸಾಮರ್ಥ್ಯದ ಶೀತಲ ಗೃಹ ನಿರ್ಮಾಣಕ್ಕೆ ರೂ. 10.32 ಕೋಟಿಗೆ ಅನುಮೋದನೆ ನೀಡಲಾಗಿದೆ.
ರಾಜನಹಳ್ಳಿ, ಸಾಸ್ವೆಹಳ್ಳಿ, ಬೆನಕನಹಳ್ಳಿ, ಗೋವಿನಕೋವಿ-ಹನುಮಸಾಗರ ಹಾಗೂ ಉಬ್ರಾಣಿ- ಅಮೃತಾಪುರ ಏತ ನೀರಾವರಿ ಯೋಜನೆಗಳ ಮೂಲಕ 320 ಕ್ಕೂ ಹೆಚ್ಚಿನ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ.
ಶಿಕ್ಷಣ, ಆರೋಗ್ಯ, ನಗರಾಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆ:
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಶೇ. 94.64 ಫಲಿತಾಂಶ ಸಾಧಿಸಿದೆ. ಜಿಲ್ಲೆಯ 24 ಆಯುರ್ವೇದ ಚಿಕಿತ್ಸಾಲಯಗಳನ್ನು ‘ಆಯುಷ್ಮಾನ್ ಆರೋಗ್ಯ ಮಂದಿರ’ಗಳಾಗಿ ಮೇಲ್ದರ್ಜೆಗೇರಿಸಲಾಗಿದ್ದು, 55 ಗ್ರಾ.ಪಂ.ಗಳನ್ನು ‘ಟಿ.ಬಿ. ಮುಕ್ತ’ ಎಂದು ಗುರುತಿಸಲಾಗಿದೆ.
ಮಹಾತ್ಮಾ ಗಾಂಧಿ ನಗರವಿಕಾಸ ಯೋಜನೆ-2 ರಡಿ ರೂ. 127.50 ಕೋಟಿ ವೆಚ್ಚದ ಕಾಮಗಾರಿಗಳು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಲಸೌಕರ್ಯಕ್ಕಾಗಿ ರೂ. 100 ಕೋಟಿ ವೆಚ್ಚದ ಕ್ರಿಯಾ ಯೋಜನೆ ರೂಪಿಸಲಾಗಿದೆ.
ಮಾದಕ ವಸ್ತುಗಳ ತಡೆಗೆ ‘ಸನ್ಮಿತ್ರ ಕಾರ್ಯಕ್ರಮ ಜಾರಿಗೊಳಿಸಲಾಗಿದ್ದು, ಮಹಿಳೆಯರು-ಮಕ್ಕಳ ಸುರಕ್ಷತೆಗಾಗಿ ‘ಅಕ್ಕ ಪಡೆ’ ಹಾಗೂ ಹಿರಿಯ ನಾಗರಿಕರಿಗೆ ‘ಆಸರೆ’ ಯೋಜನೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.
ಸರ್ಕಾರದ ಮೊದಲ 100 ದಿನಗಳ ಆಡಳಿತ ಮತ್ತು ಅಭಿವೃದ್ಧಿ ಒಳಗೊಳ್ಳುವಿಕೆಯ 45 ಕಾರ್ಯಕ್ರಮಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.
ರೈತ ಮಿತ್ರ, ಬಡವರ ಬಂಧು 1 ಹೆಕ್ಟೇರ್‌ವರೆಗಿನ ಜಮೀನು ಹೊಂದಿರುವ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಮೊತ್ತದಲ್ಲಿ ಶೇ. 50 ಸಬ್ಸಿಡಿ. ಗ್ರಾಮಾನುಭವ: ವಿದ್ಯಾರ್ಥಿಗಳಿಗೆ ಕೃಷಿ, ಪಶುಸಂಗೋಪನೆ, ಗ್ರಾಮೀಣ ಸಂಸ್ಕೃತಿಯ ಅನುಭವಕ್ಕಾಗಿ
ಗ್ರಾಮ ವಾಸ್ತವ್ಯ.
ಯುವ ಯುಗ – ಯುವ ಕರ್ನಾಟಕ ನಿರ್ಮಾಣ: ಭಾರತ್ ಜೋಡೋ ಯುವಕ ಸಂಘ ಮಿಷನ್ ಅಡಿ 10,000 ಸಂಘಗಳ ಸ್ಥಾಪನೆ ಮತ್ತು ವಾರ್ಷಿಕ ರೂ. 1000 ಕೋಟಿ ವೆಚ್ಚ ಮೋಡಲಾಗುತ್ತದೆ.
ಯುವ ಉದ್ಯೋಗ ಸೇತು: ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ.
ಸರ್ಕಾರಿ ಆಸ್ಪತ್ರೆಗಳ ದತ್ತು ಯೋಜನೆ: ಸಿಎಚ್ ಸಿ ಮತ್ತು ಪಿಎಚ್ ಸಿ ಗಳಿಗೆ ವೈದ್ಯಕೀಯ ಕಾಲೇಜುಗಳಿಂದ ಮಾನವ ಸಂಪನ್ಮೂಲ ಒದಗಿಸುವುದು.
ನಶೆ ಮುಕ್ತ ಕರ್ನಾಟಕ:
‘ರೈಸ್ ಕರ್ನಾಟಕ’ ಉಪಕ್ರಮದಡಿ ಯುವಕರಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮತ್ತು ಸಬಲೀಕರಣ.
ಪ್ರಜಾಸೇವೆಗೆ ಸಾರ್ವಜನಿಕರ ಕುಂದುಕೊರತೆ ಆಲಿಸಲು ಪ್ರತ್ಯೇಕ ಇಲಾಖೆ ಸ್ಥಾಪನೆ.
ಭೂ ಗ್ಯಾರಂಟಿ:
ಕೃಷಿಯೇತರ ಸ್ವತ್ತುಗಳಿಗೆ ಇ-ಖಾತೆ, ಡಿಜಿಟಲ್ ಆರ್‌ಟಿಸಿ ಹಾಗೂ ಬಿ-ಖಾತೆಯಿಂದ ಎ-ಖಾತೆಗೆ ಪರಿವರ್ತನೆ.
ಕರ್ನಾಟಕ ಮೊಬಿಲಿಟಿ ಗ್ರಿಡ್ ಮಿಷನ್: ಸಂಚಾರ ದಟ್ಟಣೆ ಕಡಿಮೆ ಮಾಡಲು ರಿಂಗ್ ರಸ್ತೆ, ಬೈಪಾಸ್ ಅಭಿವೃದ್ಧಿ.
ತೇಗದ ಸಿರಿ: ಸರ್ಕಾರಿ ಜಾಗಗಳಲ್ಲಿ ತೇಗ ಬೆಳೆಸಲು ಪ್ರೋತ್ಸಾಹ ಹಾಗೂ ಮಾರಾಟದ ರಾಜಸ್ವದಲ್ಲಿ ಶೇ. 70ರಷ್ಟು ಭೂಮಾಲೀಕರಿಗೆ ನೀಡುವ ಕಾರ್ಯಸೂಚಿ ಹಾಕಿಕೊಳ್ಳಲಾಗಿದೆ.
ದಾವಣಗೆರೆ ಜಿಲ್ಲೆಯನ್ನು ಮಾದರಿ ಜಿಲ್ಲೆ, ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಸಮೃದ್ಧಿ ನೆಲೆಸಲಿ ಎಂದರು.
ಸಮಾರಂಭದಲ್ಲಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್, ದೂಡಾ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಟಿ.ಮಂಜಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ್, ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ, ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ. ಬಿ.ಆರ್.ರವಿಕಾಂತೇಗೌಡ, ಸಿಇಓ ಗಿತ್ತೆ ಮಾಧವ ವಿಠ್ಠಲರಾವ್, ಎಸ್.ಪಿ.ಡಾ.ಶೇಖರ್ ಹೆಚ್.ಟಿ ಹಾಗೂ ವಿವಿಧ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
- 24x7 ಕುಡಿಯುವ ನೀರು
- Davanagere Guarantee Schemes
- Davanagere Infrastructure
- Davanagere Master Plan 2041
- DAVANAGERE NEWS
- DUDA GIS Master Plan
- Karnataka Development News
- SS Mallikarjun
- ಎಸ್. ಎಸ್. ಮಲ್ಲಿಕಾರ್ಜುನ್
- ಕೃಷಿ ಭಾಗ್ಯ ದಾವಣಗೆರೆ
- ಗೃಹಲಕ್ಷ್ಮಿ ಯೋಜನೆ
- ದಾವಣಗೆರೆ ಅಭಿವೃದ್ಧಿ.
- ದಾವಣಗೆರೆ ಮಹಾಯೋಜನೆ 2041
- ಪಂಚ ಗ್ಯಾರಂಟಿ ಯೋಜನೆಗಳು
- ಶಕ್ತಿ ಯೋಜನೆ





Leave a comment