Home ಕ್ರೈಂ ನ್ಯೂಸ್ “ಯಾರಿಗೆ ಬಂತು ಸ್ವಾತಂತ್ರ್ಯ?”: ಚನ್ನಗಿರಿ ಬೆಳಗೆರೆ ಘಟನೆ ಖಂಡಿಸಿ ದಾವಣಗೆರೆಯಲ್ಲಿ ದಲಿತ ಸಂಘಟನೆಗಳ ಆಕ್ರೋಶ, ಮುಖಂಡರ ಬಂಧನ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

“ಯಾರಿಗೆ ಬಂತು ಸ್ವಾತಂತ್ರ್ಯ?”: ಚನ್ನಗಿರಿ ಬೆಳಗೆರೆ ಘಟನೆ ಖಂಡಿಸಿ ದಾವಣಗೆರೆಯಲ್ಲಿ ದಲಿತ ಸಂಘಟನೆಗಳ ಆಕ್ರೋಶ, ಮುಖಂಡರ ಬಂಧನ!

Share
ಚನ್ನಗಿರಿ
Share

ದಾವಣಗೆರೆ: ಚನ್ನಗಿರಿ ತಾಲೂಕಿನ ಬೆಳಗೆರೆ ಗ್ರಾಮದಲ್ಲಿ ದಲಿತ ಯುವಕರು ದೊಡ್ಡಯ್ಯ ಸ್ವಾಮಿ ದೇವಸ್ಥಾನ ಪ್ರವೇಶಿಸಿದ ಕಾರಣಕ್ಕಾಗಿ, ಮೇಲ್ವರ್ಗದವರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಯುವಕರನ್ನು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಖಂಡಿಸಿ, ಜಿಲ್ಲೆಯಲ್ಲಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ದೂರು ನೀಡಿದರೂ ಆರೋಪಿಗಳನ್ನು ಬಂಧಿಸದೆ ನಿರ್ಲಕ್ಷ್ಯ ವಹಿಸಿರುವ ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸಿ 80ನೇ ಸ್ವಾತಂತ್ರ್ಯ ದಿನಾಚರಣೆ  ದಿನದಂದೇ ನಗರದ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಆಯೋಜಿಸಲಾಗಿತ್ತು. ಆದರೆ, ನ್ಯಾಯ ಕೇಳಲು ಬಂದ ಪ್ರತಿಭಟನಾಕಾರರನ್ನೇ ಪೊಲೀಸರು ವಶಕ್ಕೆ ಪಡೆದಿರುವುದು ಸಾರ್ವಜನಿಕರಲ್ಲಿ ಮತ್ತು ದಲಿತ ಹಕ್ಕುಗಳ ಹೋರಾಟಗಾರರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

“ಯಾರಿಗೆ ಬಂತು ಸ್ವಾತಂತ್ರ್ಯ?”:

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ರಾಘವೇಂದ್ರ ಡಿ. ಕಡೇಮನಿ, ಇಲಾಖೆಯ ಏಕಪಕ್ಷೀಯ ನಡವಳಿಕೆಯನ್ನು ಖಂಡಿಸಿದರು.

“ಬೆಳಗೆರೆ ಗ್ರಾಮದಲ್ಲಿ ದಲಿತ ಯುವಕರನ್ನು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸದ ಪೊಲೀಸರು, ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿರುವ ನಮ್ಮನ್ನೇ ಬಂಧಿಸಿದ್ದಾರೆ. ಪೊಲೀಸ್ ಇಲಾಖೆಯು ಅನ್ಯಾಯಕ್ಕೊಳಗಾದವರ ಪರ ನಿಲ್ಲುವುದನ್ನು ಬಿಟ್ಟು ಈ ರೀತಿ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. 80ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿರುವ ಈ ಸಂದರ್ಭದಲ್ಲಿ ‘ಯಾರಿಗೆ ಬಂತು ಸ್ವಾತಂತ್ರ್ಯ? ಎಲ್ಲಿಗೆ ಬಂತು ಸ್ವಾತಂತ್ರ್ಯ?’ ಎಂದು ಪ್ರಶ್ನಿಸುವಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರಿದು ಮಾತನಾಡಿದ ಅವರು, ಪ್ರಕರಣದ ನಿಜವಾದ ಆರೋಪಿಗಳನ್ನು ತಕ್ಷಣವೇ ಬಂಧಿಸದೇ ಇದ್ದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಸ್ವರೂಪದ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ರವಿ ಎಂ. (ಕೆಟಿಜೆ ನಗರ), ಟಿ. ರವಿಕುಮಾರ್, ಹೆಚ್. ಮಲ್ಲಿಕಾರ್ಜುನ ವಂದಾಲಿ, ಸುರೇಶ್ ಹೆಚ್. (ಕೆ.ಆರ್. ನಗರ), ಹಾಲೇಶ್ (ರಾಗಿ ಮಸಾಲವಾಡ, ಗಾಂಧಿನಗರ), ಕೆಂಚಮ್ಮನಹಳ್ಳಿ ರುದ್ರೇಶ್, ಸುರೇಶ್ ಎಸ್. (ಜೆ.ಎಂ. ನಗರ), ಶ್ರೀ ಹರ್ಷ (ಗಾಂಧಿನಗರ), ಕೃಷ್ಣಪ್ಪ ಎಂ. (ಹರಿಹರ), ಚಿಕ್ಕತೊಗಲೇರಿ ಶಿವಕುಮಾರ್, ಕಿರಣ್ (ಹರಿಹರ), ಹಾಲವರ್ತಿ ಪ್ರಸನ್ನ, ಚಿಕ್ಕ ತೊಗಲೇರಿ ಅಜ್ಜಯ್ಯ, ತರುಣ್, ಆದರ್ಶ, ಪರಶುರಾಮ್ ಸೇರಿದಂತೆ ನೂರಾರು ಪದಾಧಿಕಾರಿಗಳು ಹಾಗೂ ಬೆಂಬಲಿಗರು ಭಾಗವಹಿಸಿದ್ದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles