SUDDIKSHANA KANNADA NEWS/ DAVANAGERE/ DATE:11-09-2024
ದಾವಣಗೆರೆ: ಅಡಿಕೆ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದು. ಅಡಿಕೆ ಧಾರಣೆ ಏರಿಕೆಯಾಗುತ್ತಿದ್ದಂತೆ ರೈತರಿಗೆ ಖುಷಿ ತಂದರೆ ಮತ್ತೊಂದೆಡೆ ಆತಂಕವೂ ಕಾಡುತ್ತದೆ. ಅಡಿಕೆ ಕಳ್ಳತನ, ದಲ್ಲಾಳಿಗಳ ಪಾಲು, ನಿರೀಕ್ಷಿಸಿದಷ್ಟು ಬಾರದ ತೂಕ ಸೇರಿದಂತೆ ಹತ್ತು ಹಲವು ಸಮಸ್ಯೆಗಳು ಕಾಡುತ್ತವೆ. ಈ ನಡುವೆ ಈ ಬಾರಿ ಅಡಿಕೆ ಬೆಳೆ ತುಂಬಾ ಚೆನ್ನಾಗಿ ಬಂತು, ಕೈತುಂಬಾ ಹಣ ಸಂಪಾದನೆ ಮಾಡಬಹುದು, ಮಾಡಿರುವ ಸಾಲ ತೀರಿಸಬಹುದು ಎಂಬೆಲ್ಲಾ ಕನಸು ಕಂಡಿರುತ್ತಾರೆ.
ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ರೈತರು ಅಡಿಕೆಯನ್ನು ಖೇಣಿ ನೀಡುತ್ತಾರೆ. ಹಸಿ ಅಡಿಕೆ ಖೇಣಿ ಕೆಲವರು ನೀಡಿದರೆ, ಮತ್ತೆ ಕೆಲ ರೈತರು ಒಂದು ಕ್ವಿಂಟಲ್ ಹಸಿ ಅಡಿಕೆಗೆ 13 ಕೆಜಿ ಬೇಯಿಸಿ ಒಣಗಿಸಿದ ಅಡಿಕೆಗೆ ಒಪ್ಪಂದ ಮಾಡಿಕೊಳ್ಳುತ್ತಾರೆ.
ಧಾರಣೆ ಇದ್ದಾಗ, ಕಷ್ಟ ಬಂದಾಗ ಅಡಿಕೆಯನ್ನು ಮಾರುಕಟ್ಟೆಯಲ್ಲಿ ಬಿಟ್ಟು ಹಣ ಪಡೆಯುತ್ತಾರೆ.
ಮೋಸ ಹೇಗೆ ಮಾಡಲಾಗುತ್ತದೆ…?
ಅಡಿಕೆ ಬೆಳೆಗಾರರು ಖೇಣಿದಾರರನ್ನು ನಂಬಿರುತ್ತಾರೆ. ಕೆಲವರು ಮಾತ್ರ ಅಡಿಕೆ ಬೆಳೆಗಾರರನ್ನು ವಂಚಿಸುತ್ತಲೇ ಇದ್ದಾರೆ. ಕೆಲವರಂತೂ ಅಡಿಕೆ ಖೇಣಿ ಪಡೆದು ಹಣ ನೀಡದೇ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ. ವಂಚಿಸುತ್ತಲೇ ಇದ್ದಾರೆ.
ವರ್ಷ ಕಳೆದಂತೆ ಮೋಸದ ಜಾಲವೂ ಬದಲಾಗುತ್ತಿದೆ. ಖೇಣಿ ಪಡೆದವರು ಹಣ ನೀಡದೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣಗಳು ಕಣ್ಮುಂದೆ ಇವೆ. ಆದ್ರೆ, ಪೊಲೀಸರು ಕೆಲವೊಮ್ಮೆ ಕೈಚೆಲ್ಲಿ ಕುಳಿತ ಪ್ರಕರಣಗಳು ಸಾಕಷ್ಟಿವೆ. ಅಡಿಕೆ ಬೆಳೆಗಾರರು
ಅಡಿಕೆ ಸಿಗದೇ ಹಣವೂ ಸಿಗದೇ ಕಂಗಾಲಾಗಿರುವ ಕೇಸ್ ಸಾಕಷ್ಟಿವೆ.
ತೂಕದಲ್ಲಿ ವಂಚನೆ ಹೇಗೆ..?
ಅಡಿಕೆ ಬೆಳೆಗಾರರು ನಂಬಿಕೆಯಿಂದಲೇ ವ್ಯವಹಾರ ಮಾಡುತ್ತಾರೆ. ಖೇಣಿದಾರರನ್ನು ನಂಬಿರುತ್ತಾರೆ. ಆದ್ರೆ, ಅವರೇ ಮೋಸ ಮಾಡಿದರೆ ಹೇಗೆ? ಹೌದು. ಇಂಥದ್ದೊಂದು ಪ್ರಕರಣ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಹತೊಳಲು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ವರ್ತಕನೊಬ್ಬ ರೈತರ ಮನೆ ಬಾಗಿಲಿಗೆ ಬಂದು ಒಣ ರಾಶಿ ಅಡಿಕೆ ಖರೀದಿ ಮಾಡುತ್ತಿದ್ದ. ರೈತರು ನಂಬಿಕೆಯಿಂದಲೇ ನೀಡುತ್ತಿದ್ದರು. ಆದ್ರೆ, ಅಡಿಕೆ ತೂಕದಲ್ಲಿ ಮಾಡುತ್ತಿದ್ದ ಮೋಸ ಗೊತ್ತಾಗಿರಲಿಲ್ಲ. ಇದೇ ರೀತಿಯಲ್ಲಿ ಆತ ಸಾಕಷ್ಟು ವಂಚನೆ ಮಾಡಿದ್ದ. ಪೊಲೀಸರಿಗೆ ದೂರು ನೀಡಿದರೆ ವರ್ತಕನು ಹಣ ಕೊಟ್ಟು ಸೆಟ್ಲಮೆಂಟ್ ಮಾಡಿಕೊಂಡು ಬಿಡುತ್ತಾರೆ ಎಂಬ ಭಯ ಬೇರೆ. ಕೆಲವೊಂದು ಪ್ರಕರಣಗಳಲ್ಲಿ ಅಡಿಕೆ ಬೆಳೆಗಾರರು ದೂರು ಕೊಟ್ಟರೂ ಪೊಲೀಸರು ಕೈ ಚೆಲ್ಲಿ ಮೋಸ ಮಾಡಿದವರ ನಿಂತ ಉದಾಹರಣೆಗಳೂ ಸಾಕಷ್ಟಿವೆ.
ರೈತರಿಂದ ಖರೀದಿಸಲು ಮನೆ ಬಾಗಿಲಿಗೆ ಬಂದು ಅಡಿಕೆ ತೂಕದಲ್ಲಿ ವಂಚಿಸಿದ್ದ ವರ್ತಕನೊಬ್ಬ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಕೂಡಲೇ ಗ್ರಾಮಸ್ಥರು, ಅಡಿಕೆ ಬೆಳೆಗಾರರು ಸೇರಿ ಪೊಲೀಸ್ ಮೆಟ್ಟಿಲೇರಿಲ್ಲ. ವಂಚನೆ ಮಾಡಿದ್ದು ಬಯಲಾಗುತ್ತಿದ್ದಂತೆಯೇ ವರ್ತಕನೂ ಸಹ ಪೊಲೀಸ್ ದೂರು ಬೇಡ, ನೀವು ಹಾಕಿದ ದಂಡ ಒಪ್ಪಿಕೊಳ್ಳುತ್ತೇನೆ ಎಂದಿದ್ದಾನೆ. ಹಾಗಾಗಿ, ಹಿರಿಯರೆಲ್ಲರೂ ಸೇರಿ 20 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
ತಕ್ಕಡಿಯಲ್ಲಿತ್ತು ಕರಾಮತ್ತು…!
ಭದ್ರಾವತಿ ತಾಲೂಕಿನ ಅರಹತೋಳಲು ಗ್ರಾಮದಲ್ಲಿ ಅಡಿಕೆ ಬೆಳೆ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಭದ್ರಾವತಿ ತಾಲೂಕಿನಲ್ಲಿಯೂ ಅಡಿಕೆ ಹೆಚ್ಚಾಗಿ ಬೆಳೆಯಲಾಗುತ್ತದೆ. ಅರಹತೊಳಲು ಗ್ರಾಮದ ಮನೆಗೆ ಬಂದಿದ್ದ ವರ್ತಕನು ಗಣಕೀಕೃತ ತಕ್ಕಡಿಯಲ್ಲಿ ಅಡಿಕೆ ತೂಕ ಮಾಡುತ್ತಿದ್ದ. ಆದ್ರೆ, ಬೆಳೆಗಾರರ ಗಮನಕ್ಕೆ ಬಾರದಂತೆ ಒಂದು ಕ್ವಿಂಟಲ್ ಅಡಿಕೆಯಲ್ಲಿ ಕನಿಷ್ಠ ಎಂದರೂ 3 ರಿಂದ ನಾಲ್ಕು ಕೆಜಿ ಅಡಿಕೆ ತೂಕ ಮೋಸ ಮಾಡುತ್ತಿದ್ದ. ಇನ್ನು ರೈತರ ಹೆಚ್ಚಿನ ಧಾರಣೆ ನೀಡುವ ಆಸೆ ನೀಡಿ ಅಡಿಕೆ ಖರೀದಿ ಮಾಡುತ್ತಿದ್ದ. 45 ಅಡಿಕೆ ಚೀಲಗಳನ್ನು 2 ಬುಲ್ಡೋಜರ್ ನಲ್ಲಿ ತುಂಬಿಸಿದ್ದ. ಖರೀದಿಸಿದ ಅಡಿಕೆ ಮೌಲ್ಯ ಮುಂಗಡವಾಗಿ ನೀಡಿದ ಹಣಕ್ಕಿಂತ ಹೆಚ್ಚಾದ ಕಾರಣ ಒಂದಷ್ಟು ಹಣವನ್ನು ತರಲು ವಾಪಸ್ ಹೋಗಿದ್ದ.
ಆ ಬಳಿಕ ಚೀಲವನ್ನು ಅನುಮಾನಗೊಂಡ ರೈತರು ತಕ್ಕಡಿ ಮೇಲೆ ಇಟ್ಟಿದ್ದಾರೆ. ಒಂದು ಚೀಲದಲ್ಲಿ ವ್ಯತ್ಯಾಸ ಆಗಿದೆ. ಏನೋ ಒಂದು ಅಡಿಕೆ ಚೀಲದಲ್ಲಿ ಮಿಸ್ ಆಗಿರಬಹುದು ಎಂದುಕೊಂಡಿದ್ದಾರೆ. ಆಮೇಲೆ ಇನ್ನೆರಡು ಚೀಲಗಳನ್ನೂ ತೂಗಿದ್ದಾರೆ. ಮತ್ತೆ ಅನುಮಾನಗೊಂಡು ಮತ್ತಷ್ಟು ಚೀಲಗಳನ್ನು ತೂಕಕ್ಕೆ ಇಟ್ಟಿದ್ದಾರೆ. ಆಗಲೇ ಗೊತ್ತಾಗಿದ್ದು ವರ್ತಕನ ತಕ್ಕಡಿಯಲ್ಲಿನ ಕರಾಮತ್ತು.
ಬಳಿಕ ಗ್ರಾಮದ ಮುಖಂಡರೆಲ್ಲರೂ ಸೇರಿ ವರ್ತಕನನ್ನು ಹಿಡಿದಿದ್ದಾರೆ. ದೇವಸ್ಥಾನದ ಆವರಣಕ್ಕೆ ಕರೆದುಕೊಂಡು ಬಂದು ವಿಚಾರಿಸಿದ್ದಾರೆ. ಆರಂಭದಲ್ಲಿ ಆರೋಪ ನಿರಾಕರಿಸಿದ ವರ್ತಕನು ರೆಡ್ ಹ್ಯಾಂಡ್ ಆಗಿ ಹಿಡಿದ ಚೀಲಗಳ ತೂಕ ಮಾಡಿದ ಬಳಿಕ ಒಪ್ಪಿಕೊಂಡಿದ್ದಾನೆ. ಮಾತ್ರವಲ್ಲ, ಹಮಾಲರ ಮೇಲೆ ಆರೋಪ ಹೊರಿಸಲು ಹೋಗಿದ್ದಾನೆ. ಬಳಿಕ ತೂಕ ಮಾಡಿದ ಹಮಾಲರ ಕರೆತರುವಂತೆ ಗ್ರಾಮಸ್ಥರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆದ್ರೆ ಹಮಾಲರ ಫೋನ್ ಸ್ವಿಚ್ ಆಫ್.
ಗ್ರಾಮಸ್ಥರು ಬಳಿಕ ಏರುಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ಮೋಸ ಮಾಡಿದ್ದರೆ ತಪ್ಪು ಎಂದು ಒಪ್ಪಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗುವುದನ್ನು ಅರಿತ ವರ್ತಕ ತೂಕದಲ್ಲಿ ಮೋಸ ಮಾಡಿದ್ದು ಒಪ್ಪಿಕೊಂಡಿದ್ದಾನೆ. ಆ ಬಳಿಕ ಅಂತಿಮವಾಗಿ 20 ಲಕ್ಷ ರೂಪಾಯಿ ದಂಡ ವಿಧಿಸಿ ಅಡಿಕೆ ನೀಡಿದ್ದ ರೈತರಿಗೆ ಹಣ ನೀಡಿದ್ದಾರೆ.
ಆದ್ದರಿಂದ ಅಡಿಕೆ ಬೆಳೆಗಾರರು ಎಚ್ಚರ ವಹಿಸುವುದು ಅಗತ್ಯ. ಅಡಿಕೆ ಖೇಣಿ ಕೊಡುವಾಗ ವರ್ತಕನ ಪೂರ್ವಾಪರ, ಯಾವ ರೀತಿ ಮೋಸ ಮಾಡಿರಬಹುದು? ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಧಾರಣೆ ಸ್ವಲ್ಪ ಹೆಚ್ಚು ನೀಡುತ್ತಾರೆ ಎಂಬ ಆಸೆಗೆ ಬಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಎಚ್ಚರ… ಎಚ್ಚರ…!