ನವದೆಹಲಿ: ಸಾಲು ಸಾಲು ಹಬ್ಬಗಳ ದಿನಗಳು ಹತ್ತಿರವಾಗುತ್ತಿರುವಂತೆಯೇ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಬ್ಲೂ ಸ್ಟಾರ್, ವೋಲ್ಟಾಸ್, ಬಾಷ್ ಹೋಮ್ ಕಂಫರ್ಟ್ ಸೇರಿದಂತೆ ಪ್ರಮುಖ ಗೃಹೋಪಯೋಗಿ ಉಪಕರಣ ತಯಾರಕ ಕಂಪನಿಗಳು ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಹವಾನಿಯಂತ್ರಣ (ಎಸಿ), ಎಲ್‌ಇಡಿ ಟಿವಿ, ವಾಷಿಂಗ್ ಮಷಿನ್ ಮತ್ತು ಫ್ರಿಡ್ಜ್‌ಗಳ ಬೆಲೆಯನ್ನು ಶೇಕಡಾ 5 ರಿಂದ 8 ರಷ್ಟು ಹೆಚ್ಚಿಸಲು ನಿರ್ಧರಿಸಿವೆ.
ಉತ್ಪಾದನಾ ವೆಚ್ಚದಲ್ಲಿ ಬಳಕೆಯಾಗುವ ತಾಮ್ರ, ಸ್ಟೀಲ್, ಅಲ್ಯೂಮಿನಿಯಂ ಮತ್ತು ಕಚ್ಚಾ ತೈಲ ಆಧಾರಿತ ವಸ್ತುಗಳ ಬೆಲೆ ಶರವೇಗದಲ್ಲಿ ಏರಿಕೆಯಾಗಿರುವುದು ಹಾಗೂ ಪಶ್ಚಿಮ ಏಷ್ಯಾದ ಯುದ್ಧದ ಬಿಕ್ಕಟ್ಟಿನಿಂದಾಗಿ ಕರೆನ್ಸಿ ವಿನಿಮಯ ದರದಲ್ಲಿ ಏರಿಳಿತ ಉಂಟಾಗಿರುವುದು ಈ ದರ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. 2026 ರಲ್ಲಿ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ನಡೆಯುತ್ತಿರುವ ಮೂರನೇ ಬೆಲೆ ಏರಿಕೆ ಇದಾಗಿದೆ.
ಬೆಲೆ ಏರಿಕೆಯ ಈ ನಿರ್ಧಾರದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಗೃಹೋಪಯೋಗಿ ಕಂಪನಿಗಳ ಷೇರುಗಳು ಧನಾತ್ಮಕವಾಗಿ ಚಲಿಸಿದ್ದು, ಬಾಷ್ (Bosch) ಶೇ. 3, ಐಎಫ್‌ಬಿ (IFB) ಶೇ. 2, ಬ್ಲೂ ಸ್ಟಾರ್ ಶೇ. 1.82 ಹಾಗೂ ವೋಲ್ಟಾಸ್ ಷೇರುಗಳು ಶೇ. 1.56 ರಷ್ಟು ಜಿಗಿತ ಕಂಡಿವೆ.
ಹಳೆಯ ದರದಲ್ಲಿ ಮಾರುಕಟ್ಟೆಗೆ ಪೂರೈಕೆಯಾಗಿರುವ ಸರಕುಗಳ ದಾಸ್ತಾನು ಇರುವುದರಿಂದ, ದಸರಾ ಮತ್ತು ದೀಪಾವಳಿ ಆರಂಭಿಕ ಹಬ್ಬದ ರಿಯಾಯಿತಿ ಮಾರಾಟದ ಸಮಯದಲ್ಲಿ ಗ್ರಾಹಕರಿಗೆ ಹಳೆಯ ಬೆಲೆಯಲ್ಲೇ ವಸ್ತುಗಳು ಲಭ್ಯವಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.





Leave a comment