ರಾಜ್ಕೋಟ್: ಗುಜರಾತ್ನ ರಾಜ್ಕೋಟ್ ಜಿಲ್ಲೆಯಲ್ಲಿ ತನ್ನ ಸಹೋದರನ ಜತೆಗಿನ ಪ್ರೇಮ ಸಂಬಂಧದ ಕಾರಣಕ್ಕೆ ವ್ಯಕ್ತಿಯೊಬ್ಬರ ಅತ್ತೆಯನ್ನು ಇಬ್ಬರು ಸೋದರಳಿಯಂದಿರು ಹಾಗೂ ಇಬ್ಬರು ಸಹಚರರು ಸೇರಿ ಮೊದಲು ಸೋಡಾದಲ್ಲಿ ವಿಷ ಬೆರೆಸಿ, ಬಳಿಕ ಕುತ್ತಿಗೆ ಹಿಸುಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಹಕುಬೆನ್ ಪರ್ಮಾರ್ ಕೊಲೆಯಾದ ದುರ್ದೈವಿ. ನವೆಂಬರ್ 11 ರಂದು ನವಾಗರ್ ರೈಲು ನಿಲ್ದಾಣದ ಬಳಿಯ ನಿರ್ಜನ ಪ್ರದೇಶದಲ್ಲಿ ಹಕುಬೆನ್ ಅವರ ಮೃತಪಟ್ಟಿರುವುದು ಪತ್ತೆಯಾಗಿತ್ತು.
ಜುನಾಗಢದಲ್ಲಿದ್ದ ಹಕುಬೆನ್ ಅವರನ್ನು ರಾಧಾ ಮತ್ತು ಮಧು ಎಂಬ ಇಬ್ಬರು ಸೋದರಿಯರು ಜೇತ್ಪುರ್ಗೆ ಕರೆಸಿಕೊಂಡಿದ್ದರು. ಬಳಿಕ ಅವರು ಕುಡಿಯುವ ಸೋಡಾದಲ್ಲಿ ವಿಷಕಾರಿ ಪದಾರ್ಥವನ್ನು ಬೆರೆಸಿ ಹತ್ಯೆಗೆ ಯತ್ನಿಸಿದ್ದರು. ಆದರೆ ವಿಷದಿಂದ ಹಕುಬೆನ್ ಸಾವನ್ನಪ್ಪದಿದ್ದಾಗ, ಆರೋಪಿಗಳು ಕೆಲವೇ ಗಂಟೆಗಳ ನಂತರ ಅವರದೇ ಶಾಲಿನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ತಮ್ಮ ಸಹೋದರ ರವಿ ಜತೆ ಹಕುಬೆನ್ ಹೊಂದಿದ್ದ ಸಂಬಂಧವೇ ಈ ಹತ್ಯೆಗೆ ಕಾರಣ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಕೊಲೆಗೆ ಕಾರಣ: ಮೃತ ಹಕುಬೆನ್ ತನ್ನ ಸೋದರಳಿಯ ರವಿ ಜತೆ ಪ್ರೇಮ ಸಂಬಂಧ ಹೊಂದಿದ್ದು, ಇದು ಸಹೋದರಿಯರಾದ ರಾಧಾ ಮತ್ತು ಮಧುಗೆ ತೀವ್ರ ಆಕ್ರೋಶ ತಂದಿತ್ತು. ಸಂಬಂಧವನ್ನು ಮುರಿಯುವಂತೆ ಪದೇ ಪದೇ ಎಚ್ಚರಿಸಿದರೂ ಹಕುಬೆನ್ ಕೇಳಿರಲಿಲ್ಲ.
ಆರೋಪಿಗಳ ಬಂಧನ: ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಾಧಾ, ಮಧು, ಮಧು ಪತಿ ಲಕ್ಷ್ಮಣ್ ಹಾಗೂ ಅವರ ರೂಮ್ಮೇಟ್ ಭೂಪತ್ಭಾಯ್ ಪೊಪಟ್ಭಾಯ್ ವಘೇಲಾ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾನೂನು ಕ್ರಮ: ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1), 61(2) ಮತ್ತು 3(5) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ವಶಕ್ಕೆ (Remand) ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ.
ಮೃತ ಹಕುಬೆನ್ ಒಬ್ಬ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಈ ಕುಟುಂಬವು ಅಲೆಮಾರಿ ಜೀವನ ನಡೆಸುತ್ತಿತ್ತು ಎಂದು ವರದಿಯಾಗಿದೆ.





Leave a comment