ಚಂಡೀಗಢ: ಪಂಜಾಬ್‌ನ ಪ್ರತಿಷ್ಠಿತ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಲ್ಲಿ ಲೈಂಗಿಕ ದೌರ್ಜನ್ಯದ ವದಂತಿ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕ್ಯಾಂಪಸ್‌ನಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ತಿಳಿಗೊಳಿಸಲು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಬಿಡುಗಡೆ ಮಾಡಿದ್ದ “ಸ್ಪಷ್ಟನೆ ವಿಡಿಯೋ” ಇದೀಗ ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ವಿದ್ಯಾರ್ಥಿನಿಯರೇ ಮುಂದೆ ಬಂದು, “ನಮಗೆ ಆಡಳಿತ ಮಂಡಳಿ ಬಲವಂತವಾಗಿ ಹೇಳಿಕೊಟ್ಟು ವಿಡಿಯೋ ರೆಕಾರ್ಡ್ ಮಾಡಿಸಿದೆ” ಎಂದು ಆರೋಪಿಸಿದ್ದಾರೆ.
ಘಟನೆಯ ಹಿನ್ನೆಲೆ:
ಖಾಸಗಿ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಹಾಗೂ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ್ದವು. ಇದರಿಂದ ಆಕ್ರೋಶಗೊಂಡ ಸಾವಿರಾರು ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕಿಟಕಿ ಗಾಜುಗಳು ಹಾಗೂ ಪಿಠೋಪಕರಣಗಳನ್ನು ಧ್ವಂಸಗೊಳಿಸಿದ್ದರು. ಅಲ್ಲದೆ ಜಲಂಧರ್-ಫಗ್ವಾರಾ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು.
ಆಡಳಿತ ಮಂಡಳಿಯ ವಿಡಿಯೋ ಮತ್ತು ವಿದ್ಯಾರ್ಥಿನಿಯರ ಸತ್ಯಾಸತ್ಯತೆ:
ಸ್ಥಿತಿ ನಿಯಂತ್ರಿಸಲು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಮೋನಿಕಾ ಗುಲಾಟಿ ಅವರು ಹಾಸ್ಟೆಲ್ ರೂಮ್ ನಂ. 504ರಲ್ಲಿದ್ದ ಮೂವರು ವಿದ್ಯಾರ್ಥಿನಿಯರ ಹೇಳಿಕೆಯ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಆ ವಿಡಿಯೋದಲ್ಲಿ ವಿದ್ಯಾರ್ಥಿನಿಯರು “ನಮ್ಮ ಕೊಠಡಿಯಲ್ಲಿ ಯಾವುದೇ ಅಪ್ರಿಯ ಘಟನೆ ನಡೆದಿಲ್ಲ, ನಮಗೂ ಇದಕ್ಕೂ ಸಂಬಂಧವಿಲ್ಲ” ಎಂದು ಹೇಳಿದ್ದರು.
ಆದರೆ, ಕೆಲವೇ ಗಂಟೆಗಳಲ್ಲಿ ಹೊರಬಂದ ಮತ್ತೊಂದು ವಿಡಿಯೋದಲ್ಲಿ ಅದೇ ಮೂವರು ವಿದ್ಯಾರ್ಥಿನಿಯರು, “ವಿಶ್ವವಿದ್ಯಾಲಯದ ಆಡಳಿತ ಮಂಡಳಿಯೇ ನಮಗೆ ಈ ರೀತಿ ಹೇಳುವಂತೆ ಸೂಚಿಸಿತ್ತು. ನಾವು ಹೇಳಿದ ಅರ್ಧದಷ್ಟು ಮಾತುಗಳನ್ನು ಕತ್ತರಿಸಿ (Trim) ಅವರ ಅನುಮತಿಯಿಲ್ಲದೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನಮಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ, ನಮ್ಮನ್ನು ಅನಗತ್ಯವಾಗಿ ಪೀಡಿಸಲಾಗುತ್ತಿದೆ” ಎಂದು ಸತ್ಯ ಬಿಚ್ಚಿಟ್ಟಿದ್ದಾರೆ.
10 ದಿನ ತರಗತಿಗಳು ರದ್ದು:
ಪರಿಸ್ಥಿತಿ ಕೈಮೀರುತ್ತಿದ್ದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಸೆಪ್ಟೆಂಬರ್ 28 ರಿಂದ 10 ದಿನಗಳ ಕಾಲ ತರಗತಿಗಳನ್ನು ರದ್ದುಗೊಳಿಸಿದ್ದು, ಮಧ್ಯಂತರ ಪರೀಕ್ಷೆಗಳನ್ನು ಮುಂದೂಡಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.





Leave a comment