SUDDIKSHANA KANNADA NEWS/ DAVANAGERE/ DATE:25-11-2023
ಬೆಂಗಳೂರು: ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿ ಇಂದು ಎಚ್ಎಎಲ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ. ಎಚ್ ಎ ಎಲ್ ಮುಗಿಸಲಾಗುತ್ತಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಈ ಮೂಲಕ ಬಿಜೆಪಿ ತಿರುಗೇಟು ನೀಡಿದೆ.
ರೂ. 26,500 ಕೋಟಿ ರೂಪಾಯಿ ಲಾಭ ತರುವುದಲ್ಲದೆ ರೂ. 80,000 ಕೋಟಿಗೂ ಅಧಿಕ ಮೌಲ್ಯದ ಉಪಕರಣ ತಯಾರಿ ಮತ್ತು ಮಾರಾಟಕ್ಕೆ ಈಗಾಗಲೇ ಎಚ್ಎಎಲ್ ಸಹಿ ಹಾಕಿದೆ. ಇದು ಭಾರತದ 600 ಕ್ಕೂ ಅಧಿಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕೈತುಂಬಾ ಕೆಲಸ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಾದ ಮೇಕ್ ಇನ್ ಇಂಡಿಯಾ ಸಂಕಲ್ಪದ ಫಲವಾಗಿ ಎಚ್ಎಎಲ್ ಇಂದು ಫ್ರಾನ್ಸ್ ಜತೆಗೂಡಿ ಸಫ್ರನ್ ಯುದ್ಧ ವಿಮಾನ ಎಂಜಿನ್ ತಯಾರಿಕೆ ಮತ್ತು ಅಮೆರಿಕದ ಜನರಲ್ ಇಲೆಕ್ಟ್ರಿಕಲ್ಸ್ ಜತೆಗೂಡಿ ಎಫ್ 414 ಎಂಜಿನ್ ತಯಾರಿಯನ್ನು ದೇಶೀಯವಾಗಿಯೇ ಮಾಡುತ್ತಿದೆ. ಎಚ್ಎಎಲ್ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳಿಗೆ ವಿದೇಶಿ ಮಾರುಕಟ್ಟೆಯಿಂದಲೂ ಸಾಕಷ್ಟು ಬೇಡಿಕೆ ಬರುತ್ತಿದೆ.
ಎಚ್ಎಎಲ್ ಉತ್ಪನ್ನಗಳ ಕುರಿತು ವಿದೇಶಗಳಲ್ಲಿ ಪ್ರಚಾರದ ಕಾರ್ಯವೂ ಈಗಾಗಲೇ ಆರಂಭವಾಗಿದ್ದು ಮಲೇಷ್ಯಾದಲ್ಲಿ ಪ್ರಾದೇಶಿಕ ಮಾರ್ಕೆಟಿಂಗ್ ಕಚೇರಿಯನ್ನು ಎಚ್ಎಎಲ್ ತೆರೆದಿದೆ.
ಫೆಬ್ರವರಿ 2023ರಲ್ಲಿ ತುಮಕೂರಿನಲ್ಲಿ ಉದ್ಘಾಟನೆಗೊಂಡ ಹೆಲಿಕಾಪ್ಟರ್ ತಯಾರಿ ಘಟಕ 1,000 ಯುದ್ಧ ಕಾಪ್ಟರ್ಗಳನ್ನು ತಯಾರಿಸಲಿದೆ. 6,000ಕ್ಕೂ ಅಧಿಕ ಉದ್ಯೋಗ ಸೃಷ್ಟಿಸಿರುವ ಈ ಯೋಜನೆ ದೇಶಕ್ಕೆ ಮುಂದಿನ ದಿನಗಳಲ್ಲಿ ಒಟ್ಟು ₹4,00,000 ಕೋಟಿ ಮೌಲ್ಯದ ವಹಿವಾಟನ್ನು ಎಚ್ಎಲ್ಗೆ ಸೃಜಿಸಲಿದೆ.
ಜತೆಗೆ ಬೆಂಗಳೂರಿನಲ್ಲಿನ ಕ್ರೈಯೋಜನಿಕ್ ಇಂಜಿನ್ ತಯಾರಿ ಘಟಕವೂ ಒಳಗೊಂಡು ಉತ್ಪಾದನಾ ವಲಯದಲ್ಲಿ, ಅದರಲ್ಲೂ ಸೂಕ್ಷ್ಮ ಸಲಕರಣೆಗಳ ಉತ್ಪಾದನೆಯಲ್ಲಿ ಕರ್ನಾಟಕವನ್ನು ಸಂಪನ್ಮೂಲದ ಕೇಂದ್ರವನ್ನಾಗಿಸಿದೆ. ಇಸ್ರೋದ ಗಗನಯಾನ್ಗೂ ಎಚ್ಎಎಲ್ ಅಗತ್ಯ ಉಪಕರಣಗಳನ್ನು ತಯಾರಿಸಿದೆ ಎಂಬುದು ಭಾರತೀಯರೆಲ್ಲ ಹೆಮ್ಮೆ ಪಡುವ ವಿಚಾರ ಎಂದು ಬಿಜೆಪಿ ತಿಳಿಸಿದೆ.
ಲಘು ಯುದ್ಧವಿಮಾನ ತೇಜಸ್ನ ಎರಡು ಸೀಟರ್ ಆವೃತ್ತಿಯನ್ನು ಭಾರತೀಯ ಸೇನೆಗೆ ನೀಡಿದ ತರುವಾಯ ಸುಖೋಯ್ 30 ಯುದ್ಧವಿಮಾನ ಸರಬರಾಜಿಗೆ ಎಚ್ಎಎಲ್ ₹10,000 ಕೋಟಿಗಳ ಟೆಂಡರ್ ಪಡೆದಿದೆ. ಅಲ್ಲದೇ ಎಚ್ಎಎಲ್ ನಿರ್ಮಿತ 15 ಲಘು ಯುದ್ಧ ಹೆಲಿಕಾಪ್ಟರ್ಗಳನ್ನೂ ಭಾರತೀಯ ವಾಯುಪಡೆಗೆ ಅವಧಿಗೂ ಮುನ್ನವೇ ನೀಡಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಎಚ್ಎಎಲ್ನ ಕ್ಷಮತೆ ಐವತ್ತು ಪಟ್ಟು ವೃದ್ಧಿಸಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿಗಳು ಬೇಕಿಲ್ಲ. ಐಟಿ ಕೇಂದ್ರ ಮಾತ್ರವೇ ಆಗಿದ್ದ ಬೆಂಗಳೂರು ಈಗ ಯುದ್ಧ ವಿಮಾನಗಳ ತಯಾರಿಗೂ ಕೇಂದ್ರವಾಗಿ ಜಾಗತಿಕ ಗಮನ ಸೆಳೆಯಲಿದೆ ಎಂದು ಬಿಜೆಪಿ ರಾಜ್ಯ ಘಟಕವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.