
ಅಹ್ಮದಾಬಾದ್ (ಗುಜರಾತ್): ನಗರದಲ್ಲಿ ಡ್ರಗ್ಸ್ ಜಾಲವನ್ನು ಮಟ್ಟಹಾಕಲು ಅಹ್ಮದಾಬಾದ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಎನ್ಡಿಪಿಎಸ್ ಕಾಯ್ದೆಯಡಿ ಹಳೆಯ ಪ್ರಕರಣಗಳನ್ನು ಎದುರಿಸುತ್ತಿರುವ 950ಕ್ಕೂ ಹೆಚ್ಚು ಶಂಕಿತ ಆರೋಪಿಗಳನ್ನು ಒಮ್ಮೆಗೆ ವಶಕ್ಕೆ ಪಡೆದಿದ್ದಾರೆ.
ಶಾಹಿಬಾಗ್ ಪೊಲೀಸ್ ಪ್ರಧಾನ ಕಚೇರಿ ಬಳಿಯ ಜೆ.ಡಿ. ನಗರ್ವಾಲಾ ಪೊಲೀಸ್ ಸ್ಟೇಡಿಯಂನಲ್ಲಿ ಇವರನ್ನು ಒಟ್ಟುಗೂಡಿಸಿ ಕ್ರೈಂ ಬ್ರಾಂಚ್, ವಿಶೇಷ ಕಾರ್ಯಾಚರಣೆ ಪಡೆ (SOG) ಮತ್ತು ಮಾದಕದ್ರವ್ಯ ನಿಗ್ರಹ ದಳದ (ANTF) ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.
‘ಡ್ರಗ್ಸ್ ಮುಕ್ತ ಗುಜರಾತ್’ ಅಭಿಯಾನದ ಭಾಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ಈ ಬೃಹತ್ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಸ್ಟೇಡಿಯಂನಲ್ಲೇ ಪುನರಾವರ್ತಿತ ಡ್ರಗ್ಸ್ ಕಳ್ಳಸಾಗಣೆದಾರರನ್ನು ಪ್ರತ್ಯೇಕಿಸಿ ವಿಶೇಷ ಟೆಂಟ್ಗೆ ಕರೆದೊಯ್ದು ಪೊಲೀಸರು ಕಠಿಣ ಎಚ್ಚರಿಕೆ ನೀಡಿದ್ದಾರೆ. ಭದ್ರತೆಯಲ್ಲಿ ಲೋಪ ಎಸಗಿದರೆ ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ಗಳ ಮೇಲೂ ಶಿಸ್ತು ಕ್ರಮ ಜರುಗಿಸುವುದಾಗಿ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಶರದ್ ಸಿಂಘಾಲ್ ಎಚ್ಚರಿಕೆ ನೀಡಿದ್ದಾರೆ.
950ಕ್ಕೂ ಹೆಚ್ಚು ಶಂಕಿತರ ವಶ: ಅಹ್ಮದಾಬಾದ್ನ ಏಳೂ ಪೊಲೀಸ್ ವಲಯಗಳಿಂದ ಡ್ರಗ್ಸ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಳೆಯ ಅಪರಾಧಿಗಳನ್ನು ವಶಕ್ಕೆ ಪಡೆದು ಅಪರಾಧ ದಾಖಲೆಗಳನ್ನು ಪರಿಶೀಲಿಸಲಾಗಿದೆ.
ಶೂನ್ಯ ಸಹಿಷ್ಣುತಾ ನೀತಿ: ಡ್ರಗ್ಸ್ ದಂಧೆಗೆ ಇಳಿಯುವವರ ಜಾಮೀನು ಅರ್ಜಿಯನ್ನು ತೀವ್ರವಾಗಿ ವಿರೋಧಿಸುವುದಲ್ಲದೆ, ಅವರ ಅಕ್ರಮ ಆಸ್ತಿಗಳನ್ನು ಬುಡಸಹಿತ ಕೆಡವುವುದಾಗಿ ಪೊಲೀಸರು ಕಠಿಣ ಸಂದೇಶ ರವಾನಿಸಿದ್ದಾರೆ.
ಸ್ಥಳೀಯ ಅಧಿಕಾರಿಗಳಿಗೆ ಎಚ್ಚರಿಕೆ: ತಮ್ಮ ವ್ಯಾಪ್ತಿಯಲ್ಲಿ ಮಾದಕದ್ರವ್ಯ ಮಾರಾಟ ಕಂಡುಬಂದರೆ ಅಥವಾ ಹೊರಗಿನ ಸಂಸ್ಥೆಗಳು ದಾಳಿ ನಡೆಸಿದರೆ ಸ್ಥಳೀಯ ಠಾಣಾಧಿಕಾರಿಗಳೇ ನೇರ ಹೊಣೆ ಎಂದು ಹಿರಿಯ ಅಧಿಕಾರಿಗಳು ಎಚ್ಚರಿಸಿದ್ದಾರೆ.




