ಲೂಧಿಯಾನ: ಆಸ್ಟ್ರೇಲಿಯಾದಿಂದ ಇತ್ತೀಚೆಗಷ್ಟೇ ತಾಯ್ನಾಡಿಗೆ ಮರಳಿದ್ದ 49 ವರ್ಷದ ಮಹಿಳೆಯೊಬ್ಬರನ್ನು ಅವರ ನಿವಾಸದಲ್ಲೇ ಪತಿಯೇ ಭೀಕರವಾಗಿ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಪಂಜಾಬ್‌ನ ಲೂಧಿಯಾನದ ವಿಕಾಸ್ ನಗರದಲ್ಲಿ ನಡೆದಿದೆ.
ಕಮಲ್‌ದೀಪ್ ಕೌರ್ ಕೊಲೆಯಾದ ದುರ್ದೈವಿಯಾಗಿದ್ದು, ಆಕೆಯ ಪತಿ ರವೀಂದರ್ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿಯ ನಡತೆಯ ಮೇಲೆ ಶಂಕೆ ವ್ಯಕ್ತಪಡಿಸಿ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
ಘಟನೆಯ ದಿನದಂದು ರವೀಂದರ್ ಸಿಂಗ್ ತನ್ನ ಹಿರಿಯ ಮಗ ಗಗನ್‌ದೀಪ್ ಸಿಂಗ್‌ನನ್ನು ಹತ್ತಿರದ ಅಂಗಡಿಗೆ ಹಾಲು ಮತ್ತು ಅಗತ್ಯ ವಸ್ತುಗಳನ್ನು ತರಲು ಹೊರಗೆ ಕಳುಹಿಸಿದ್ದ. ಮಗ ಹಿಂತಿರುಗಿದಾಗ ತಂದೆ ರವೀಂದರ್ ಧಾವಂತದಲ್ಲಿ ಮನೆಯಿಂದ ಹೊರಗೆ ಹೋಗುತ್ತಿರುವುದು ಕಂಡುಬಂದಿದೆ. ವಿಚಾರಿಸಿದಾಗ ಮನೆಯೊಳಗೆ ಹೋಗಿ ನೋಡುವಂತೆ ತಿಳಿಸಿ ಆತ ಪರಾರಿಯಾಗಿದ್ದ. ಮನೆಯೊಳಗೆ ತೆರಳಿದ ಮಗನಿಗೆ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ.
ಘಟನೆಯ ಹಿನ್ನೆಲೆ: ದಂಪತಿ ಆಸ್ಟ್ರೇಲಿಯಾದಲ್ಲಿರುವ ತಮ್ಮ ಕಿರಿಯ ಮಗನನ್ನು ಭೇಟಿಯಾಗಲು ತೆರಳಿದ್ದರು. ಕಮಲ್‌ದೀಪ್ ಕೌರ್ ನಾಲ್ಕು ತಿಂಗಳ ಹಿಂದೆ ಭಾರತಕ್ಕೆ ಮರಳಿದ್ದರೆ, ರವೀಂದರ್ ಸಿಂಗ್ ಅಕ್ಟೋಬರ್ 29 ರಂದು ಮರಳಿದ್ದ.
ಕೃತ್ಯ ಎಸಗಿದ ರೀತಿ: ಮಗನನ್ನು ಹೊರಗೆ ಕಳುಹಿಸಿದ ಪತಿ, ಚೂರಿಯಿಂದ ಪತ್ನಿಯ ಕುತ್ತಿಗೆ ಹಾಗೂ ಹೊಟ್ಟೆಯ ಭಾಗಕ್ಕೆ ತೀವ್ರವಾಗಿ ಇರಿದು ಹತ್ಯೆ ಮಾಡಿದ್ದಾನೆ.
ತನಿಖೆ ಪ್ರಗತಿಯಲ್ಲಿ: ಪಕ್ಕದ ಮನೆಯವರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ದುಗ್ರಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.





Leave a comment