SUDDIKSHANA KANNADA NEWS/ DAVANAGERE/ DATE:22-09-2023
ದಾವಣಗೆರೆ: ಭದ್ರಾ ಡ್ಯಾಂ (Bhadra Dam) ನೀರು ಹರಿಸುವಂತೆ ಒತ್ತಾಯಿಸಿ ಭಾರತೀಯ ರೈತ ಒಕ್ಕೂಟ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ತಡೆಯೊಡ್ಡಲಾಗಿದೆ. ಟ್ರ್ಯಾಕ್ಟರ್ ಮೆರವಣಿಗೆ ನಡೆಸಿ, ರಸ್ತೆ ತಡೆ ನಡೆಸಲು ಯತ್ನಿಸಿದ ರೈತ ಮುಖಂಡರು ಸೇರಿದಂತೆ ನೂರಾರು ರೈತರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:
Davanagere: ಬಾಧಿಸುತ್ತಿದೆ ಕಾಲುಬಾಯಿ ರೋಗ: ದಾವಣಗೆರೆ ಜಿಲ್ಲೆಯಲ್ಲಿ ಜಾನುವಾರುಗಳ ಪೈಕಿ ಒಂದೂ ತಪ್ಪದಂತೆ ಲಸಿಕೆ ಕೊಡುವಂತೆ ಸೂಚಿಸಿರುವುದು ಏಕೆ..?
ಭದ್ರಾ ಜಲಾಶಯ(Bhadra Dam) ದಿಂದ ಬಲದಂಡೆ ನಾಲೆಯಲ್ಲಿ ನೀರು ಸ್ಥಗಿತಗೊಳಿಸಿದ ಬಳಿಕ ರೊಚ್ಚಿಗೆದ್ದಿರುವ ರೈತರು ನೀರು ಹರಿಸಲೇಬೇಕು ಎಂದು ಪಟ್ಟುಹಿಡಿದಿದೆ. ಭಾರತೀಯ ರೈತ ಒಕ್ಕೂಟವು ಹೆದ್ದಾರಿ ತಡೆ, ಟ್ರ್ಯಾಕ್ಟರ್ ಮೆರವಣಿಗೆ ಸೇರಿದಂತೆ ಉಗ್ರ ಹೋರಾಟಕ್ಕೆ ಮುಂದಾಗುತ್ತಿದೆ. ದಾವಣಗೆರೆಯಲ್ಲಿ ಟ್ರಾಕ್ಟರ್ ಚಳುವಳಿಗೆ ಮುಂದಾದ ನೂರಕ್ಕೂ ಹೆಚ್ಚು ರೈತರನ್ನು ಪೊಲೀಸ್ ಜೀಪಿನಲ್ಲಿ ಹತ್ತಿಸಿಕೊಳ್ಳಲಾಯಿತು. ಬಳಿಕ ಬಂಧಿಸಿ ಬಿಡುಗಡೆ ಮಾಡಲಾಯಿತು.
ಆರಂಭದಲ್ಲಿ 35 ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿದ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತವಾಯಿತು. ಟ್ರ್ಯಾಕ್ಟರ್ ಮೆರವಣಿಗೆ ನಡೆಸಿ ರಸ್ತೆ ತಡೆ ನಡೆಸಲು ರೈತ ಮುಖಂಡರು ಹಾಗೂ ರೈತರು ಮುಂದಾದರು. ಈ ವೇಳೆ ಪೊಲೀಸರು ರಸ್ತೆ ತಡೆ ನಡೆಸುವಂತಿಲ್ಲ ಎಂದು ಎಚ್ಚರಿಕೆ ನೀಡಿದರು. ಇಷ್ಟಾದರೂ ರೈತರು ಮಾತ್ರ ಸುಮ್ಮನಿರಲಿಲ್ಲ. ರಸ್ತೆ ತಡೆ ನಡೆಸಲು ಮುಂದಾದರು. ಈ ವೇಳೆ ಟ್ರಾಫಿಕ್ ಜಾಮ್ ಸಹ ಉಂಟಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಪೊಲೀಸರು ನೂರಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಸಂಜೆ ಹೊತ್ತಿಗೆ ಬಿಡುಗಡೆ ಮಾಡಿದರು.
ಮಳೆಗಾಲದ ಭತ್ತದ ಬೆಳೆಗೆ ಸತತ 100 ದಿನಗಳ ಕಾಲ ನೀರು ಹರಿಸಬೇಕೆಂದು ಆಗ್ರಹಿಸಿ ಟ್ರಾಕ್ಟರ್ ಗಳ ಮೂಲಕ ರಸ್ತೆ ತಡೆಗೆ ರೈತರು ಮುಂದಾದರು. ಈ ವೇಳೆ ಪೊಲೀಸರು ನಮ್ಮನ್ನು ವಶಕ್ಕೆ ಪಡೆದರು. ಹೋರಾಟಕ್ಕೆ ಅನುವು ಮಾಡಿಕೊಡಲಿಲ್ಲ. ಮಳೆ ಬಾರದ ಹಿನ್ನೆಲೆಯಲ್ಲಿ ಭತ್ತ ಬೆಳೆದ ಬೆಳೆಗಾರರು ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರವು ನೂರು ದಿನಗಳ ಕಾಲ ನೀರು ಹರಿಸುವುದಾಗಿ ಭರವಸೆ ನೀಡಿದ್ದರೂ ಮಧ್ಯದಲ್ಲಿ ನೀರು ಬಂದ್ ಮಾಡಿದರೆ ಹೇಗೆ? ಎಂದು ರೈತರು ಪ್ರಶ್ನಿಸಿದರು.
ಸಾವಿರಾರು ಎಕರೆ ಪ್ರದೇಶಗಳಲ್ಲಿ ಈಗಾಗಲೇ ನಾಟಿ ಮಾಡಲಾಗಿದೆ. ಈಗ ಏಕಾಏಕಿ ನೀರು ನಿಲುಗಡೆ ಮಾಡಿದರೆ ರೈತರ ಗತಿಯೇನು? ಸಾಲ ಮಾಡಿ ಭತ್ತ ನಾಟಿ ಮಾಡಿದ್ದಾರೆ. ಸರ್ಕಾರವು ನೀರು ಹರಿಸಿದರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇಲ್ಲದಿದ್ದರೆ ನಷ್ಟ ಉಂಟಾಗುತ್ತದೆ. ಈಗಲೇ ರೈತರು ಬರಗಾಲದಿಂದ ಸಾಕು ಸಾಕಾಗಿ ಹೋಗಿದ್ದಾರೆ. ರಾಜ್ಯ ಸರ್ಕಾರವೇ ದಾವಣಗೆರೆ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ರೈತರ ಸಂಕಷ್ಟ ಆಲಿಸಬೇಕಾದ ಸರ್ಕಾರ ನಿರ್ಲಕ್ಷ್ಯ ವಹಿಸಿದೆ.ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ರೈತರು ಪಾಠ ಕಲಿಸುವ ದಿನ ದೂರ ಇಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಟ್ರ್ಯಾಕ್ಟರ್ ಮೂಲಕ ರಸ್ತೆ ತಡೆ ಮುಂದಾಗುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ರೈತರನ್ನು ವಶಕ್ಕೆ ಪಡೆದು ಬಿಡುಗಡೆಗೊಳಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಪ್ರತಿಭಟನೆ ನಿಲ್ಲದು:
ಭದ್ರಾ ಜಲಾಶಯ(Bhadra Dam)ದ ಬಲದಂಡೆ ನಾಲೆಯಿಂದ ಸತತವಾಗಿ ನೂರು ದಿನಗಳ ಕಾಲ ನೀರು ಹರಿಸಲೇಬೇಕು. ಆನ್ ಅಂಡ್ ಆಫ್ ವ್ಯವಸ್ಥೆ ಬೇಡವೇ ಬೇಡ. ಭದ್ರಾ ಡ್ಯಾಂನಲ್ಲಿ 160.5 ಅಡಿ ನೀರು ಸಂಗ್ರಹ ಇದೆ. ಮುಂದೆ ಮಳೆಯಾಗುವ ಸಾಧ್ಯತೆಯೂ ಇದೆ. ಆದ್ರೆ, ಸರ್ಕಾರವೇ ನೂರು ದಿನಗಳ ಕಾಲ ನೀರು ಹರಿಸುವುದಾಗಿ ಭರವಸೆ ನೀಡಿ ಈಗ ಉಲ್ಟಾ ಹೊಡೆಯುತ್ತಿದೆ ಎಂದು ಆರೋಪಿಸಿದರು.
ನೀರಾವರಿ ಸಲಹಾ ಸಮಿತಿಯೇ ನೀರು ಹರಿಸಬಹುದು ಎಂದು ಹೇಳಿದೆ. ಈ ಆದೇಶ ಪಾಲಿಸಬೇಕು. ಶಿವಮೊಗ್ಗ ಸೇರಿದಂತೆ ಬೇರೆ ಜಿಲ್ಲೆಗಳ ರೈತರ ಹಿತವನ್ನೂ ಕಾಪಾಡಬೇಕು. ಶೇಕಡಾ 70ರಷ್ಟು ರೈತರು ದಾವಣಗೆರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟುದಾರ ಪ್ರದೇಶವಿದೆ. ಈ ಕಾರಣಕ್ಕಾಗಿ ನೂರು ದಿನಗಳ ಕಾಲ ನೀರು ಹರಿಸಲೇಬೇಕು. ಈಗಾಗಲೇ ನೀರು ಸ್ಥಗಿತಗೊಳಿಸಿರುವುದರಿಂದ ಕೊನೆ ಭಾಗದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ನೀರು ಬರುತ್ತಿಲ್ಲ. ಬಿಸಿಲಿನ ಧಗೆಯೂ ಹೆಚ್ಚುತ್ತಿದೆ. ಇಲ್ಲಿಯೂ ಮಳೆ ಬರುತ್ತಿಲ್ಲ. ನಾಟಿ ಮಾಡಿದ್ದ ಭತ್ತದ ಸಸಿಗಳು ಒಣಗಿ ಹೋಗುವ ಸ್ಥಿತಿ ಬಂದಿದೆ. ಆದ್ದರಿಂದ ನಾಲೆಗಳಲ್ಲಿ ನೀರು ಹರಿಸಲೇಬೇಕು ಎಂದು ರೈತರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ಕೊಳೇನಹಳ್ಳಿ ಸತೀಶ್, ಬೆಳವನೂರು ನಾಗೇಶ್ವರ ರಾವ್, ಭಾರತೀಯ ರೈತ ಒಕ್ಕೂಟದ ಮುಖಂಡರಾದ ಶಾಮನೂರು ಲಿಂಗರಾಜ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಹೆಚ್. ಎನ್. ಗುರುನಾಥ್, ಕುಂದುವಾಡದ ಗಣೇಶಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.