ನೋಯ್ಡಾ:ಉತ್ತರ ಪ್ರದೇಶದ ನೋಯ್ಡಾದ ಸೂಪರ್‌ನೋವಾ ಕಟ್ಟಡದ 43ನೇ ಮಹಡಿಯಿಂದ ಜಿಗಿದು 28 ವರ್ಷದ ಟೆಕ್ಕಿ ಸಂಭವ್ ಜೈನ್ ಆತ್ಮಹತ್ಯೆ ಮಾಡಿಕೊಂಡ ಘಟನೆ, ದೇಶಾದ್ಯಂತ ವಿಚ್ಛೇದನ ಮತ್ತು ‘ಅಲಿಮನಿ’ (ಜೀವನಾಂಶ) ಕಾನೂನುಗಳ ಕುರಿತು ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
ಘಟನೆಯ ವಿವರ:
ಗುರುಗ್ರಾಮದ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಸಂಭವ್ ಜೈನ್, ತೀವ್ರ ಆರ್ಥಿಕ ಸಂಕಷ್ಟ ಹಾಗೂ ದಾಂಪತ್ಯ ಸಂಸಾರದಲ್ಲಿದ್ದ ಬಿಕ್ಕಟ್ಟಿನಿಂದಾಗಿ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಮಗನ ವೈದ್ಯಕೀಯ ವೆಚ್ಚ ಮತ್ತು ಸಂಸಾರಿಕ ಕಲಹದಿಂದ ಸಾಲದ ಸುಳಿಗೆ ಸಿಲುಕಿದ್ದ ಅವರು, ತಮ್ಮ ತಂದೆಗೆ ಕೊನೆಯ ಮೆಸೇಜ್ ಕಳುಹಿಸಿ ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ.
₹3 ಕೋಟಿ ಜೀವನಾಂಶ ವದಂತಿ ಹಾಗೂ ಪೊಲೀಸರ ಸ್ಪಷ್ಟನೆ:
ಸಂಭವ್ ಅವರ ಸಾವಿನ ನಂತರ, ಸೋಶಿಯಲ್ ಮೀಡಿಯಾದಲ್ಲಿ (X ಮತ್ತು Reddit) ಅವರ ಪತ್ನಿ 3 ಕೋಟಿ ರೂಪಾಯಿ ಜೀವನಾಂಶ ಕೇಳಿದ್ದರೆಂಬ ವದಂತಿ ಹರಡಿತು. ಆದರೆ ಇದನ್ನು ನಿರಾಕರಿಸಿರುವ ಪೊಲೀಸರು, ನ್ಯಾಯಾಲಯ ಹಾಗೂ ಉಭಯ ಪಕ್ಷಗಳ ನಡುವೆ ₹15 ಲಕ್ಷ ಜೀವನಾಂಶಕ್ಕೆ ಒಪ್ಪಂದವಾಗಿತ್ತು. ಅದರಲ್ಲಿ ಸಂಭವ್ ಈಗಾಗಲೇ ₹7.5 ಲಕ್ಷ ಪಾವತಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಕಾನೂನು ತಿದ್ದುಪಡಿಗೆ ಸಾರ್ವಜನಿಕರ ಆಗ್ರಹ:
ಈ ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ “ಅಲಿಮನಿ ದಂದೆಗೆ ಕಡಿವಾಣ ಹಾಕಿ” ಎಂಬ ಅಭಿಯಾನ ಪ್ರಾರಂಭವಾಗಿದೆ. ಸಣ್ಣ ಅವಧಿಯ ಮದುವೆಗಳಿಗೆ ಭಾರಿ ಮೊತ್ತದ ಜೀವನಾಂಶ ವಿಧಿಸುವುದು ಯುವಕರ ಮಾನಸಿಕ ನೆಮ್ಮದಿ ಹಾಳು ಮಾಡುತ್ತಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2024ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಅತುಲ್ ಸುಭಾಷ್ ಪ್ರಕರಣವನ್ನು ನೆನಪಿಸಿಕೊಂಡಿರುವ ನೆಟ್ಟಿಗರು, ಭಾರತೀಯ ಮದುವೆ ಹಾಗೂ ವಿಚ್ಛೇದನ ಕಾನೂನುಗಳಲ್ಲಿ ತಕ್ಷಣದ ಸುಧಾರಣೆ ಅಗತ್ಯ ಎಂದು ಆಗ್ರಹಿಸುತ್ತಿದ್ದಾರೆ.





Leave a comment